೧
ಸುತ್ತಿ ಸುರುಳಿಗಟ್ಟಿ ಮದೋನ್ಮತ್ತದೊಳು
ಸೊಕ್ಕಿ ಹೆಣೆದು ಬಿಗಿದಪ್ಪಿ
ನಿರ್ಭಯದೊಳು ಆಕಾಶಕ್ಕೇರಿ
ಸೂರ್ಯನನ್ನೊಳಗೆ ಬಿಟ್ಟುಕೊಳ್ಳದ
ಪಚ್ಚೆ ಹಸಿರಿನ ಛತ್ರ ಚಾಮರಗಳ
ಪಿಸುನುಡಿಗೆ ಮೈ ಬೆವೆತರೂ
ಮೆರೆಯುವ ದಟ್ಟ ಕಾನನ
ಸುರಿಸುರಿವ ಮಳೆ
ಸೊಲ್ಲಿಲ್ಲ ಸೂರಿಲ್ಲ ಜೀವಕೆ
ಮೈ ಮುಚ್ಚಿಕೊಳ್ಳುವ ಪರಿಯಿಲ್ಲ
ಜೀವಭೀತಿಗೆ ಇದ್ದರಿಲ್ಲಿ ವಿಷಪೂರಿತ
ಬಾಣಿನ ಬೆತ್ತಲೆ ತಿರುಗುವ ಕಾಡು ಕರಿಯರು;
ಭೂರಮೆಯ ಜಾರವಾ ಜೇಂಗೊಡಗಳು.
ಸಾವಿಗೆ ಹುಳಹುಪ್ಪಡಿ ಕ್ರಿಮಿಕೀಟಗಳ
ವಿಷಾರಿ ರೋಗಾಣುಗಳು
ಭಯಾನಕ ಭಯಂಕರ ಕಾಡುವ ಕಾಡು.
ಸುತ್ತೆಲ್ಲ ಚಿತ್ತ ಹರಿಸಿದತ್ತೆಲ್ಲ
ಆಕಾಶಕೆ ತಬ್ಬಿ ಮಗದೊಮ್ಮೆ ಸೆಳೆದು
ಧುಮ್ಮನೆ ಧುಮುಕಿ ರೌದ್ರಾವತಾರದ
ಬಾಯಿಬಿಚ್ಚಿ ಗಡಚಿಕ್ಕಿ ಮುನ್ನುಗ್ಗಿ
ನೆರೆತೊರೆಯ ಸುನಾಮಿಗಳಬ್ಬರಿಸಿ
ಎದೆನಡುಗಿಸಿ ಉಸಿರು ಹಿಡಿದಾವರಿಸಿದ
ಕರಿನೀರಿನಾರಣ್ಯ.
ಕಂಡದ್ದೇ ಕರಿನೀರು ದಟ್ಟಕಾಡು
ಕನಸು ಬಿತ್ತಿದವು ಬಿಳಿಯ ಸರ್ವಾಧಿಕಾರಿಗಳು
ಬಂದೂಕು ಹೆಗಲಿಗೇರಿಸಿ ಚರ್ಮದಪಟ್ಟಿ ಹಿಡಿದು
ಸ್ವಾತಂತ್ರ್ಯ ಚಳುವಳಿಕಾರರ ಹಿಡಿದೆಳೆದು
ಕೈದಿ ಹಣೆಪಟ್ಟಿ ಹೊಡೆದು ಕೈಕಾಲಿಗೆ ಸರಪಳಿ ಬಿಗಿದು
ಹಡಗೇರಿಸಿ ಅಟ್ಟಹಾಸ ಮೆರೆದದ್ದು.
ಅರೆಬೆಂದ ಊಟ ಮಾತಿಲ್ಲ ಕತೆಯಿಲ್ಲ ಮೌನ
ಮೇಲೆ ಸೂರ್‍ಯ ಚಂದ್ರರೊಡನೆ ಮೂಕ ಸಂವಾದ
ಎದುರಿನ ಸಮುದ್ರದಬ್ಬರದ ತೆರೆಗಳೊಡನೆ
ರೋಷತುಂಬಿದೆದೆಯ ಉಸಿರು
ಸಮುದ್ರಕ್ಕಾದರೂ ಬಿದ್ದು ಸಾಯಬೇಕೆಂದರವರು
ಉಪವಾಸ ಬಿದ್ದಾದರೂ ಜೀವ ಬಿಡಬೇಕೆಂದರವರು
ತಪ್ಪಿಸಿಕೊಂಡು ದಂಡಕಾರಣ್ಯದಲ್ಲಾದರೂ ಓಡಬೇಕೆಂದರವರು
ಕಾವಲು ಕಾವಲು ಎಲ್ಲೆಲ್ಲೂ ಕಾವಲು
ಸರಳುಗಳ ಹಿಂದೆ ನಿಂತ ಅಸಹಾಯಕ ದೇಶಪ್ರೇಮಿಗಳು.
ಗಸ್ತಿನವರ ಚಾಟಿ ಸರಪಳಿ ಏಟುಗಳಿಗೆ
ಮೈಯೆಲ್ಲಾ ಬೆಂಕಿ
ಎದುರು ಮಾತನಾಡಿದ್ದಾದರೆ
ಎದುರಿಗೆ ತೂಗುವ ನೇಣು ಕುಣಿಕೆಗಳು
ಆದರೂ ತಗ್ಗದೆ ಕುಗ್ಗದೆ ಬಗ್ಗದೆ
ಜೀವದ ಹಂಗುತೊರೆದು ಜೈ ಘೋಷ ಕೂಗಿ
ಗವೆನ್ನುವ ಕತ್ತಲು ನೆಲಮಾಳಿಗೆಗೆ
ಹರಿದೋಡುವ ಬಿಸಿನೆತ್ತರಕೆ ಹೆದರದೆ
ಕುಣಿಕೆಗೆ ಕತ್ತೊಡ್ಡಿ ಬಲಿಯಾದರು.
ಅದರಾಚೆ ಹೆಣಗಳು ನುಂಗಲು ಸ್ಪರ್ಧಿಸುವ
ಕಪ್ಪು ಕರಿನೀರ ಹೆದ್ದೆರೆಗಳ ಹಲಗೆ ನಗಾರಿಗಳ ಹೊಡೆತ
ಬಿರುಗಾಳಿ ಮಳೆಯ
ಕಣ್ಣೀರಪ್ಪಳಿಸುವಿಕೆಯ ಅಲ್ಲೋಲ ಕಲ್ಲೋಲ
ಅಯ್ಯೋ! ಅದೆಷ್ಟು ಛಲ ಹೋರಾಟ
ಈ ತಾಯಿನೆಲದ ಪ್ರೀತಿಯ ಋಣಕ್ಕೆ
ಕ್ಷೋಭೆ ಹೋರಾಟ ಹತಾಶೆ ಅಸಹಾಯಕತೆಗೇ
ಇರಬೇಕು; ಗುಂಡಿನೇಟುಗಳಿಗುರುಳಿ ಕಠಿಣ ಶಿಕ್ಷೆಗೇ
ಇರಬೇಕು; ಗಲ್ಲಿಗೆ ಕತ್ತೊಡ್ಡಿ ಕೆಂಪುರಕ್ತ ಕಪ್ಪಾಗಿ ನಂಜೇರಿದ್ದು..
‘ಕಾಳಾಪಾಣಿ’ ಭಯಾನಕ ಶಬ್ದ ಹೊರಹೊಮ್ಮಿದ್ದು.
ಲಕ್ಷಾಂತರ ಚಳುವಳಿಕಾರರ ಕೂಗಿಗೆ
ಜೀವತೆತ್ತ ಆತ್ಮಗಳುಸುರಿಗೆ
ಸಿಕ್ಕಿತು ಸ್ವಾತಂತ್ರ್ಯ ಹೊರಟುಹೋದವು ಪರಂಗಿ
ಪರದೇಶದವುಗಳು
೨
ಕುರ್ಚಿಗಾಗಿ
ಸ್ವಾರ್‍ಥಿಗಳ ಕಚ್ಚಾಟ ಹುನ್ನಾರ ವಿರೋಧ
ಗಾಂಧೀ ತಾತ ನೋಡಿಲ್ಲಿ ನಿನ್ನ ಆದರ್ಶದೇಶದ
ರೆಸಾರ್‍ಟ್ ರಾಜಕೀಯ
ಅವು ಬರಬೇಕೀ ಪುಣ್ಯಕ್ಷೇತ್ರಕೆ
ನಾಚಿಕೆ ಪಟ್ಟುಕೊಳ್ಳಬೇಕೊಮ್ಮೆ ತಮ್ಮ ಐಶಾರಾಮಿಗೆ-
ಕ್ಲಬ್ಬು ಮೋಜು ಮಜ ಕುಣಿತ ಕುಡಿತ
ಬಿಟ್ಟೊಮ್ಮೆ ಬರಬೇಕಿಲ್ಲಿ
ಯುವ ಪೀಳಿಗೆಯ ಅರೆಬರೆಯವು-
ದ್ವೀಪಗಳ ತುಂಬ ತುಂಬಿ ನಿಂತ
ಸಂಗ್ರಾಮದ ಧ್ವನಿ, ಅಸಹಾಯಕತೆ, ಕಿರುಚಾಟ
ನೋವು ಆಲಿಸಬೇಕೊಮ್ಮೆ
ನೋಡಬೇಕವರನ್ನೊಮ್ಮೆ ಮೇಲೆ ಹೊಳೆವ ತಾರೆಗಳಲ್ಲಿ
ಮಾತಾಡಬೇಕೊಮ್ಮೆ ಅವರ ಕಂಡ ಚಂದ್ರನೊಡನೆ
ಫಳಫಳಿಸಿ ಕರಿನೀರ ಕಥೆಹೇಳುವ ಸೂರ್ಯನೊಡನೊಮ್ಮೆ
ಸ್ಪರ್ಶಿಸಬೇಕೊಮ್ಮೆ ಅವರು ಇಟ್ಟ ಹೆಜ್ಜೆಯ ಮಣ್ಣು
ಎದೆ ತುಂಬ ದುಃಖ ಮೈ ತುಂಬ ನಡುಕ
ಕಣ್ಣುಗಳು ಹನಿಗೂಡುತ
ಪಾಪಪ್ರಜ್ಞೆ ಮೂಡುವ ಎಚ್ಚರಿಕೆಯ ಗಂಟೆ.
*****
(ಅಂಡಮಾನಿನ ಸೆಲ್ಯುಲಾರ್ ಜೈಲು ನೋಡಿದಾಗ)