ಹೋದ ವರ್ಷದ ಹಕ್ಕಿಯೊ
ಈಗಿಲ್ಲಿ ಹಾರುವುದು
ಅದೇ ಸಣ್ಣ ಅದೇ ಕಣ್ಣ ಅದೇ ಬಣ್ಣದ ಹಕ್ಕಿಯೊ
ಅದೇ ಬೆಳೆಸಿ ಅದೇ ಕಲಿಸಿದ ಅದರ ಮರಿ ಹಕ್ಕಿಯೊ
ಆ ಹಕ್ಕಿ ಏನಾಯಿತೊ ಈ ಹಕ್ಕಿ ಹೀಗಾಯಿತೊ
ಈ ಮಧ್ಯದ ಕಾಲ ಅದು ಹೇಗೆ ಕಳೆಯಿತೊ
ಆ ಹಕ್ಕಿಯ ಹಾಗೇ ಈ ಹಕ್ಕಿ ಕೂಡ
ಗೂಡು ಕಟ್ಟಿದೆ ಮರಿ ಮಾಡಿದೆ
ಹಾರಿ ಹೋಗಿ ಚೂರು ತಂದು
ಮರಿಗಳಿಗೆ ನೀಡಿದೆ
ಆ ಹಕ್ಕಿಯ ನೆನಪು ಈ ಹಕ್ಕಿಗಿರುವುದೆ
ತಾಯಿ ಹಕ್ಕಿಯ ನೆನಪದರ ಮರಿಗಳಿಗೂ ಇರುವುದೆ
ನಿನ್ನೆ ನಾಳೆಗಳ ನಡುವೆ ಈ ಹಕ್ಕಿ ಸದ್ಯೋಜಾತ
ಮನುಷ್ಯ ಮಾತ್ರರಿಗೇ ಬಹುಶಃ ಇನ್ನೊಂದು ಪಾತ್ರ
ಚರಿತ್ರೆ ಮತ್ತು ಭವಿಷ್ಯ ಮನುಷ್ಯರಿಗೆ ಮಾತ್ರ
ವರ್ತಮಾನವೆನ್ನುವ ಅವರ ಧರ್ಮಕ್ಷೇತ್ರ
ಪಾಪ ಮನುಷ್ಯರಿಗೆ ಪುಣ್ಯ ಮನುಷ್ಯರಿಗೆ
ನೀತಿ ಅನೀತಿಗಳು ಮನುಷ್ಯರಿಗೆ
ಆಸೆ ಮನುಷ್ಯರಿಗೆ ನಿರಾಸೆ ಮನುಷ್ಯರಿಗೆ
ಕನಸು ಕಾಣುವ ಮಹಾಯೋಗ ಮನುಷ್ಯರಿಗೆ
ಎಲ್ಲ ವೈರುಧ್ಯಗಳೂ ಅವರೊಳಗೆ
ನಾಕ ನರಕಗಳೂ ಸ್ವಾಂತದೊಳಗೆ
ಸೃಷ್ಟಿ ನಿರ್ಮಿಸಿದ ಏನದ್ಭುತ ಪ್ರಯೋಗ
ಸೃಷ್ಟಿಯನೆ ಮೀರಿ ಸಾಗಿರುವುದೀಗ
ಎಷ್ಟು ದೂರವೊ ಸ್ವರ್ಗ ಎಷ್ಟು ನೀಳವೊ ಹಗ್ಗ
ಮುಕ್ತಿಯೋ ಧೀಶಕ್ತಿಯೋ ಇದ ಧಿಕ್ಕರಿಸಿದಾಗ
*****