೧
ಸ್ವಾತಂತ್ರದ ಹುಯಿಲೆ ಹುಯಿಲು !
ಸ್ವಾತಂತ್ರ್ಯವೊ, ಬಯಲೆ ಬಯಲು !
ಪ್ರಕೃತಿ ತನ್ನ ಕಟ್ಟಳೆಗಳ
ಕೋಟೆಗಳನು ನಿರ್ಮಿಸಿಹಳು ;
ಪ್ರತಿ ಜೀವವ ಪ್ರತಿ ಜಡವನು
ಕಟ್ಟಳೆಯಲಿ ಬಂಧಿಸಿಹಳು
ಬಂಧ ಹರಿವೆನೆಂದರೆ-
ಲೋಕಕೆ ಅದೆ ತೊಂದರೆ !
೨
ಬಾಳಿಗೊಂದು ಆಟವೇ ಸರಿ!
ಆಟದಿಂದ ಸುಖವೊ ? ಸರಿ !
ಸುಖ ಸ್ವಾತಂತ್ರದೊಳೆ ? ಮರಿ !
ಅಂತಿದ್ದರೆ, ಆಟದ ಪರಿ
ಗೊತ್ತಿಲ್ಲವೆ ? ಆಟ ಕೂಡ
ತಂತ್ರಬದ್ದವೆಂಬುದನರಿ !
ತಂತ್ರವಿರದ ಬಾಳು
ಗೋಳು, ಹಾಳು, ಬೀಳು !
*****