ಕೊಡಗಿನ ಸುಂದರ ಕತೆಗಾರ್‍ತಿ ಗೌರಮ್ಮ

ಕೊಡಗಿನ ಸುಂದರ ಕತೆಗಾರ್‍ತಿ ಗೌರಮ್ಮ

ಕನ್ನಡದ ಕತೆಗಾರ್‍ತಿಯರಲ್ಲಿ ಸ್ವಂತಿಕೆಯ ದನಿಯನ್ನು ಅಲ್ಪಕಾಲದಲ್ಲೇ ಮೂಡಿಸಿದ ಇಬ್ಬರು ಅಲ್ಪಾಯುಷಿಗಳೆಂದರೆ ಶ್ಯಾಮಲಾದೇವಿ ಮತ್ತು ಗೌರಮ್ಮ ತತಕ್ಷಣ ನೆನಪಾಗುತ್ತಾರೆ. ಶ್ಯಾಮಲಾ ಅವರಿಗೆ ಹೋಲಿಸಿದರೆ ಗೌರಮ್ಮ ಕನ್ನಡದ ಓದುಗರಿಗೆ ಪರಿಚಿತರು. ಕನ್ನಡದ ಕತೆಗಳನ್ನು ಕಾಲಾನುಕ್ರಮಣಿಕೆಯಿಂದ ಓದುತ್ತಾ ಬಂದ ಕುತೂಹಲಿಗಳಿಗೆ ಗೌರಮ್ಮನವರ ಕತೆಗಳು ಕನ್ನಡದ ಆಧುನಿಕ ಕಥಾ ಸಾಹಿತ್ಯ ಚರಿತ್ರೆಯಲ್ಲಿ ಮೈಲಿಗಲ್ಲುಗಳಂತೆ ಇವೆ. ಸ್ವಾತಂತ್ರ್ಯಪೂರ್‍ವದಲ್ಲಿ ಬರೆಯುತ್ತಿದ್ದ ಕೆಲವೇ ಕೆಲವು ಲೇಖಕಿಯರ ಸಾಲಿನಲ್ಲಿ ತಮ್ಮ ಜಾಗವನ್ನು ಖಾತರಿಗೊಳಿಸಿಕೊಂಡ ಲೇಖಕಿ ಈಕೆ.

ಗೌರಮ್ಮ ಬರೆದ ಇಪ್ಪತ್ತೇಳು ಕತೆಗಳು ನೀಟ್ ಎನ್ನಿಸಬಹುದಾದ ಸುಂದರ ಕತೆಗಳು, ನವಿರಾಗಿ ಮನಸ್ಸಿನಾಳದೊಳಗಿನ ಯಾವುದೋ ಸಿಕ್ಕನ್ನು ಕಂಡುಹಿಡಿದು ಮೆಲ್ಲನೆಯ ದನಿಯಲ್ಲಿ ಅದನ್ನು ಓದುಗರಿಗೆ ದಾಟಿಸುವ ಕಲೆಯಿಂದ ಗೌರಮ್ಮನವರ ಕತೆಗಳು ಸುಂದರ ಅನುಭೂತಿಯನ್ನು ಕೊಡುತ್ತಲೇ ಇವೆ. ನಿನ್ನೆ ಮೊನ್ನೆ ಬರೆದಂತಿರುವ ಕತೆಗಳು ಎನ್ನಿಸುವಂತೆ ಕತೆ ಬರೆಯುವುದನ್ನು ಸಾಧಿಸಿಕೊಳ್ಳುವುದು ಕತೆಗಾರರ ಸವಾಲು ಎನ್ನುವುದನ್ನು ಸಹ ಗೌರಮ್ಮ ಪ್ರಜ್ಞಾಪೂರ್‍ವಕವಾಗಿ ತೆಗೆದುಕೊಂಡಂತಿಲ್ಲ. ನಗುತ್ತಿರುವ, ಒಂಟಿ ಹೂ ಮುಡಿದ ಕತೆಗಾರಿಯಂತೆ ಕತೆಗಳು ಇರುವುದು ತಮಾಷೆಯಲ್ಲ. ಇಂತಹ ಕತೆಗಳಲ್ಲಿ ಸಮಸ್ಯಾತ್ಮಕವಾದುದು ಏನೋ ಇದೆ ಎಂದು ಹುಡುಕಾಡುತ್ತಾ ಇರುವುದು ಸರಿಯೇ? ಅಥವಾ ಚಾರಿತ್ರಿಕವಾಗಿ ಗೌರಮ್ಮ ಸಾಗುತ್ತಿದ್ದ ಕಾಲವು ಹೆಣ್ಣಿನ ಚರಿತ್ರೆಯ ಹೆಜ್ಜೆ ಗುರುತುಗಳಾಗಿ ಕಂಡುಕೊಳ್ಳುವ ಅನಿವಾರ್ಯತೆಯೇ ಈ ನೂರು ವರ್‍ಷಗಳಲ್ಲಿ ಒದಗಿ ಬಂದುಬಿಟ್ಟಿದೆಯೇ? ಏಕೆಂದರೆ ಮಹಿಳಾ ಬರವಣಿಗೆಯನ್ನು ಮುಖ್ಯ ಸಾಹಿತ್ಯ ಚರಿತ್ರೆಯೊಂದಿಗೆ ಹೋಲಿಸಿ, ಲುಪ್ತವಾಗಿರುವ ಸ್ಥಾನವನ್ನು ಕಲ್ಪಿಸುವ ಓದಿನ ಕ್ರಮವು ಮಹಿಳಾ ಸಾಹಿತ್ಯ ಚರಿತ್ರೆಯನ್ನು ಗುರುತಿಸಿಕೊಂಡ ಬಹುಮುಖ್ಯ ಸಂಗತಿಯಾಗಿದೆ. ಸ್ತ್ರೀಕೇಂದ್ರಿತ ಎಂದಾಕ್ಷಣ ಅದೊಂದು ‘ಸಣ್ಣ ಪ್ರವಾಹ’, ಎಂದು ಗುರುತಿಸುವ ಮೂಲಕ ಸ್ವಲ್ಪ ಗಮನವನ್ನಾದರೂ ಸೆಳೆದುಕೊಳ್ಳಬೇಕೆಂಬ ಆಶಯದಂತೆ ಅದು ಕಾಣತೊಡಗುತ್ತದೆ. ಸ್ತ್ರೀ ಅಸ್ಮಿತೆಯೆನ್ನುವುದು ವೈಯಕ್ತಿಕ ಅನುಭವಗಳಲ್ಲಿ ಮುಳುಗೇಳುತ್ತಿರುವಂತೆ ಭಾಸವಾದರೂ ಅವು ಸಾರ್‍ವತ್ರಿಕತೆ ಹಾಗೂ ಸಾರ್ವಜನಿಕತೆಯನ್ನೇ ಮುಖಾಮುಖಿಯಾಗುತ್ತದೆ ಎನ್ನುವುದು ಗಮನಿಸಬೇಕಾದ ಸಂಗತಿ.

ಈ ಹಿನ್ನೆಲೆಯಲ್ಲಿ ಕಥನಕಾರಿಯರು ಹಿರಿದಾದ ಪಿತೃಪ್ರಾಧಾನ್ಯತೆಯನ್ನು ಹೇಗೆ ಎದುರಿಸುತ್ತಾರೆ ಎನ್ನುವುದನ್ನು ನೋಡಬೇಕು. ವೈಯಕ್ತಿಕವಾಗಿ ಹಾಗೂ ಸಾಮಾಜಿಕವಾಗಿ ಎಂಬವನ್ನು ಎರಡು ಬೇರೆ ಬೇರೆ ಸ್ತರಗಳೆಂದೇ ಅಥವಾ ಅಭಿನ್ನವಾದ ಆದರೆ ದೇಶಗಳ ಭಿನ್ನ ಪಾತಳಿಯಲ್ಲಿ ತಳೆದ ಅಸ್ಮಿತೆಯ ರೂಪಗಳೆಂದೇ? ಯಜಮಾನ ಸಂಸ್ಕೃತಿಯ ಕುರುಹುಗಳನ್ನು ಬೆನ್ನಟ್ಟಿ ಹೋಗುವ ಆವೇಶ ಪೂರ್‍ಣ ಬರವಣಿಗೆ ಒಂದು ಮಾದರಿಯಾದರೆ, ಕೆಳದನಿಯಲ್ಲಿ, ಒಳದನಿಯಲ್ಲಿ ಬಂಡಾಯವನ್ನು ಹೊರಗೆಡಹಿ, ಒಳಬಾಳಿನ ಕಾಳಜಿಗಳನ್ನು ಮುನ್ನೆಲೆಗೆ ತಂದುಕೊಳ್ಳುವ ಬರವಣಿಗೆ ಇನ್ನೊಂದು ತೆರನಾದುದು. ಬಹುಪಾಲು ಬರಹಗಾರಿಯರ ಬರವಣಿಗೆ ಜನಪ್ರಿಯ ಎನ್ನಿಸಿಕೊಳ್ಳುವ ಕಥನದಾಟಿಯನ್ನೇ ರೂಢಿಸಿಕೊಳ್ಳುತ್ತಲೇ ಸಣ್ಣದಾಗಿ ಹೊರಳಿಕೊಳ್ಳುವ ರೀತಿಯದಾಗಿರುತ್ತದೆ. ಇದು ಸಬ್‌ವರ್ಸಿವ್ ಎನ್ನಿಸಿಕೊಳ್ಳಬಹುದಾದ ಗುಣ. ವ್ಯವಸ್ಥೆಯೊಳಗಣ ಅಂತ‌ ವೈರುಧ್ಯಗಳನ್ನು ಹೊರಗಿಡುವ ಅಭಿವ್ಯಕ್ತಿಗಳು ಸಂಕೀರ್ಣವಾಗಿರುತ್ತವೆ, ಪರಸ್ಪರ ಭಿನ್ನವೆನಿಸುವ ತುಡಿತಗಳಿಂದ ಕೂಡಿರುತ್ತವೆ. ಕತೆ ನೇರವಾಗಿ ಅಥವಾ ಪರೋಕ್ಷವಾಗಿ ವಿರೋಧಿಸುತ್ತಿರುವ ಸಂಗತಿ ಜೀವಕಾರುಣ್ಯವನ್ನು ಉಳಿಸಿಕೊಳ್ಳಲೆಂದೇ ಇರುವಂತದ್ದು. ಇದನ್ನು ಪಿತೃಪ್ರಧಾನತೆಯ ಮುಖ್ಯ ಲಕ್ಷಣವಾಗಿ ಕಂಡುಕೊಂಡು ಅನುಸಂಧಾನ ಮಾಡುವ ಬಗೆಯನ್ನು ಕತೆಗಾರಿಯರಲ್ಲಿ ಕಾಣಬಹುದು.

ಬರಹಗಾರಿಯರಲ್ಲಿ ಅನಿರ್‍ವಚನೀಯವಾದ ಒಂದು ಪ್ರತಿಭಟನಾತ್ಮಕ ನೆಲೆಯೂ ಕಲಾಪ್ರಜ್ಞೆಯೂ ಸೇರಿ ಹದಗೊಳ್ಳುವ ಪ್ರಕ್ರಿಯೆಯಲ್ಲಿಯೇ ಪ್ರತಿರೋಧದ ಅಂಶವಿದೆ. ತಾಯಿ ಭಾರತಿಯ ಉನ್ವೇಷಶಾಲಿಯಾದ ಮೂರ್‍ತಿಯು ಸಾಧಾರಣೀಕರಣಗೊಂಡು ಸ್ತ್ರೀಯಾಗಿ, ನಿತ್ಯದ ಗೃಹಿಣಿಯಾಗಿ, ಶೋಷಿತಳಾಗಿ ಬಿಂಬಿತಳಾಗುತ್ತಾಳೆ. ರಾಷ್ಟ್ರೀಯತೆಯೆನ್ನುವುದನ್ನು ಅವರು ಸದಾ ಮುಖಾಮುಖಿಯಾಗುತ್ತಿದ್ದ ವಾಸ್ತವ ಎನ್ನುವುದನ್ನು ಈ ಸಮಯದಲ್ಲಿ ನೆನೆಯಬೇಕಿದೆ.

ಗೌರಮ್ಮ ಕತೆಗಾರ್‍ತಿಯಾಗಿ ತಮ್ಮ ಓರಗೆಯ ಕತೆಗಾರ್‍ತಿಯರಾದ ಗಿರಿಬಾಲೆ, ಶ್ಯಾಮಲಾದೇವಿ ಇವರಂತೆ ಪ್ರಗತಿಶೀಲತೆಯ ಮನೋಭಾವವನ್ನು ರೂಢಿಸಿಕೊಂಡಿದ್ದರು. ಕೆಲವು ಸ್ಥಾಪಿತ ರೂಢಿಗಳು, ಮನೋಭಾವಗಳು ಮತ್ತು ಕೆಲವು ಅನಿಷ್ಟ ಆಚರಣೆಗಳನ್ನು ಸಾಮಾಜಿಕಗೊಳಿಸುವುದನ್ನೇ ಈ ಕತೆಗಾರ್‍ತಿಯೂ ತಮ್ಮ ಕತೆಗಳಲ್ಲಿ ಪ್ರಶ್ನಿಸಿಕೊಳ್ಳುತ್ತಿದ್ದಾರೆ. ಆದರೆ ಗೌರಮ್ಮ ಕಲಾತ್ಮಕತೆಯ ಚೌಕಟ್ಟನ್ನು ಎಂದೂ ದಾಟಲಿಲ್ಲ. ಹಾಗಾಗಿಯೇ ಅವರ ಪ್ರಗತಿಶೀಲತೆಯು ಬಂಡಾಯದ ಒಗರು ವಾಸನೆಯನ್ನು ಕಳೆದುಕೊಂಡು ತಾವು ಕಂಡ ಮಾನವೀಯ ಸಮಸ್ಯೆಗಳನ್ನು ಫೋಕಸ್ ಮಾಡುವಂತೆ ಕಾಣುತ್ತದೆ. ಅವರ ‘ವಾಣಿಯ ಸಮಸ್ಯೆ’ ಎತ್ತಿಕೊಳ್ಳುವ ಸಮಸ್ಯೆಯಾದರೂ ದೊಡ್ಡ ಸಾಮಾಜಿಕ ಸಮಸ್ಯೆಯಲ್ಲ. ಒಂದು ಸಣ್ಣ ಚಹಾ ಕಪ್ಪಿನೊಳಗಿನ ಅಲೆಯಂತಹ ಅಸಮಾಧಾನ ಅಷ್ಟೇ. ಈ ಅಸಮಾಧಾನವಾದರೂ ಯಾವುದರ ಬಗ್ಗೆ? ವೈಧವ್ಯ, ಸಾಂಗತ್ಯದ ನಿರಾಕರಣೆ ಮಾಡುವ ಪದ್ಧತಿಗಳ ಬಗ್ಗೆ. ನಿರ್ಲಿಪ್ತವಾಗಿದ್ದ ಸಮಸ್ಯೆಯು ಭುಗಿಲೇಳುವುದು ಮದುವೆಯಂತಹ ಸಂಸ್ಥೆಯು ಕೊಡಬಹುದಾದ ಭದ್ರತೆಯ ಬಗೆಗೆ. ಈ ರೂಢಿಗಳನ್ನು ಸಾಮಾಜಿಕ ಹೋರಾಟ ಮತ್ತು ನ್ಯಾಯದ ಪ್ರಶ್ನೆಗಳಿಂದ ಕೇಳಿ ಮುಗಿಸಬಹುದೇ ಎನ್ನುವುದೇ ಗೌರಮ್ಮ ಎತ್ತುವ ಪ್ರಶ್ನೆ. ಏಕೆಂದರೆ ಸಾಮಾಜಿಕವಾಗಿ ಅಸಮಾನತೆಯನ್ನು ಕಂಡಹಾಗೆ ಹೊಸದಾಗಿ ಉದಯವಾಗುತ್ತಿದ್ದ ಸಾಂವಿಧಾನಿಕ ಅಸ್ತಿತ್ವವುಳ್ಳ ಪದ್ಧತಿಗಳು ರೂಢಿಗೆ ಬರುತ್ತಿದ್ದ ಕಾಲ ಇಪ್ಪತ್ತನೆಯ ಶತಮಾನದ ಮೊದಲ ಭಾಗದಲ್ಲಿ ನಡೆಯುತ್ತಿತ್ತು. ನ್ಯಾಯ ಪದ್ಧತಿಯಿಂದ ಪರಿಹರಿಸಿಕೊಳ್ಳಬಹುದಾದ ಸಾಮಾಜಿಕ ಸಮಸ್ಯೆಗಳನ್ನು ನ್ಯಾಯದ ಅಡಿಗೆ ತಂದು ಕೌಟುಂಬಿಕತೆಯನ್ನು ಸಾಮಾಜೀಕರಿಸುವ ಹೊರಳು ಯತ್ನದಲ್ಲಿ ಇದ್ದಂತಹ ಸಮಾಜದ ನಡೆಯನ್ನು ಎತ್ತಿ ಹೇಳುವಂತಹ ಸುಧಾರಣಾವಾದಿ ಕತೆಗಳಿಗಿಂತಲೂ ವಾಣಿಯ ಸಮಸ್ಯೆಯಂತಹ ಕೆಳದನಿಗಳ ಅಭಿವ್ಯಕ್ತಿಯ ಕಡೆಗೆ ತಿರುಗಿದ್ದರ ಔಚಿತ್ಯವನ್ನು ಗಮನಿಸಬೇಕಿದೆ.

ಮದುವೆ ಎನ್ನುವುದು ಒಂದು ಫ್ಯೂಡಲ್ ವ್ಯವಸ್ಥೆ, ಪ್ರೇಮ ಹಾಗೂ ಕೋರ್ಟಶಿಪ್ ಎನ್ನುವುದು ಹೊಸ ಸಮಾಜದ ನಡವಳಿಕೆಯಾಗಿತ್ತು. ಆ ಕಾಲದ ‘ಇಂದಿರಾಬಾಯಿ’ ಅಥವಾ ಕೆರೂರು ವಾಸದೇವಾಚಾರ್ಯರ ‘ತೊಳೆದ ಮುತ್ತು’ ಕಥನಗಳಲ್ಲಿ ಕೋರ್ಟಶಿಪ್ ಮುಖ್ಯವಾದ ಪಾತ್ರ ವಹಿಸುತ್ತದೆ. ಹೊಸ ಸಮಾಜದ ಸಂರಚನೆಗಳನ್ನು ಬದಲಾಯಿಸಿಕೊಳ್ಳುವ ನಿಟ್ಟಿನಲ್ಲಿ ಇವು ಅವಶ್ಯಕವಾದ ಹೆಜ್ಜೆಯಾಗಿತ್ತು. ಗೌರಮ್ಮನವರ ಕತೆಗಳಲ್ಲಿ ಪ್ರೇಮ ನಿವೇದನೆಗೆ ಆದ್ಯತೆ ಇದೆ. ಹೊಸ ಕಾಲಕ್ಕೆ ಏನು ಬೇಕು ಎಂಬುದನ್ನು ತುಂಬಾ ಆಧುನಿಕವಾಗಿಯೇ ಗ್ರಹಿಸುವ ಗೌರಮ್ಮ ಇದನ್ನು ಹೆಣ್ಣುಗಳಿಗೆ ಅನ್ವಯಿಸುವಲ್ಲಿ ಯಶಸ್ವಿಯಾಗುತ್ತಾರೆ. ಸ್ತ್ರೀ ಕಥನಗಳಲ್ಲಿರುವ ರೊಮ್ಯಾಂಟಿಕ್‌ ಅಂಶಗಳೆಂದರೆ ಪ್ರೀತಿ ಪ್ರಣಯದ ಸನ್ನಿವೇಶಗಳಲ್ಲಿ ಸಮಾಜದ ರೂಢಿ ನಿಯಮಗಳು ಅಪ್ರಸ್ತುತವಾಗುವುದು. ಗೌರಮ್ಮನವರ ಕತೆಗಳಲ್ಲಿ ಕೋರ್ಟಶಿಪ್ಪೆನ್ನುವುದು ಆಧುನಿಕ ಸಂವೇದನೆಯ ಸಂಕೇತ, ಆಧುನಿಕತೆ ಎನ್ನುವುದು ದಲಿತರಿಗೆ ಹಾಗೂ ಸ್ತ್ರೀಯರಿಗೆ ಹೊಸ್ತಿಲನ್ನು ದಾಟುವ ಅವಕಾಶವಾಗಿ ಒದಗಿ ಬಂದಂತದ್ದು. ಗೌರಮ್ಮನವರಲ್ಲಿ ಇಂಗ್ಲಿಷ್ ಶಿಕ್ಷಣ ಮತ್ತು ನಗರೀಕರಣಗಳ ಪ್ರಭಾವದಿಂದ ಮುಕ್ತವಾದ ಜೀವನ, ಹೊಸ ಸಾಮಾಜಿಕ ಮೌಲ್ಯಗಳನ್ನು ಕಟ್ಟಿಕೊಳ್ಳುವ ತವಕವಿದೆ. ಜೊತೆಗೆ ಎಳೆ ವಯಸ್ಸಿನ ಹುಡುಗ ಹುಡುಗಿಯರಲ್ಲಿ ವ್ಯಕ್ತಿತ್ವ ವಿಕಸನ ಇನ್ನೂ ಪೂರ್‍ಣವಾಗಿ ಆಗಿರುವುದಿಲ್ಲ. ಅವರ ಆಯ್ಕೆಗಳನ್ನು ಪುನಾ ಪರಿಶೀಲಿಸುವ ಅವಕಾಶ ಇರುವುದಿಲ್ಲ.

ಗೌರಮ್ಮನವರ ಕತೆಗಳು ಎತ್ತಿಕೊಳ್ಳುವ ವಸ್ತುಗಳು ರಾಷ್ಟ್ರೀಯತೆಯ ಸಮಸ್ಯೆಗಳೇ ಆಗಿವೆ. ಮತಾಂತರದ ಸಮಸ್ಯೆ ಅವುಗಳಲ್ಲಿ ಒಂದು. ಇಲ್ಲಿ ಪಾರ್ವತಿ ರಜಿಯಾ ಆಗುವುದನ್ನು ನೋಡಿದರೆ ವೈಧವ್ಯ ಹಾಗೂ ಯಜಮಾನಿಕೆಯನ್ನು ಕೇಂದ್ರವಾಗಿರಿಸಿಕೊಂಡ ಸಂಗತಿಯನ್ನು ಗೌರಮ್ಮ ಎದುರಿಸಿದ ರೀತಿ ಕಾಣುತ್ತದೆ. ಹಾಗೆಯೇ ಗೌರಮ್ಮನವರ ಕತೆಗಳಲ್ಲಿ ಬರುವ ವರದಕ್ಷಿಣೆ ಸಮಸ್ಯೆಯು ಇದೇ ರೀತಿ ಸಾಮಾಜಿಕ ಸಮಸ್ಯೆಗಳನ್ನು ಹೆಣ್ಣು ನೋಟದಿಂದ ನೋಡಬಲ್ಲ ಆಯಾಮ ಒದಗಿಸಿದೆ.

ಗೌರಮ್ಮ ನೋಡುವ ದೃಷ್ಟಿಯಲ್ಲಿ ಹೆಣ್ಣು ಸೌಂದರ್ಯದ ವ್ಯಾಖ್ಯೆ ಬದಲಾಗುತ್ತದೆ; ಹೊರರೂಪಕ್ಕಿಂತ ಒಳಮನಸ್ಸಿನ ಶುಭ್ರತೆ ಅವರಲ್ಲಿ ಪ್ರಾಮುಖ್ಯತೆ ಪಡೆಯುತ್ತದೆ. ಮದುವೆ ಮತ್ತು ಸಂಸಾರಗಳ ಒಳಗೆ ಸಂಭವಿಸಬಹುದಾದ ವಸ್ತುಗಳನ್ನಿಟ್ಟುಕೊಂಡು ಕತೆಗಳನ್ನು ಬರೆದ ಗೌರಮ್ಮ ಗಂಡು ಹೆಣ್ಣಿನ ನಡುವೆ ಇರಬಹುದಾದ ನವಿರಾದ ಪ್ರೇಮ ಕಾಮದ ಸಂಬಂಧದ ಸೌಂದರ್‍ಯವನ್ನು ಕಾಣಬಲ್ಲವರಾಗಿದ್ದರು. ಆದರೆ, ಅವರ ನಡುವಿನ ಕಂದರಗಳು ದೊಡ್ಡ ಭಿತ್ತಿಯಲ್ಲಿ ಸಾಮಾಜಿಕ ಸಮಸ್ಯೆಗಳಾಗಿ ಬಾಧಿಸುವುದನ್ನು ಸಹ ಗೌರಮ್ಮ ಕಂಡುಕೊಂಡಿದ್ದರು. ಹೀಗಾಗಿ ಏಕಕಾಲದಲ್ಲಿ ಅವರ ಕತೆಗಳು ಸಂಬಂಧಗಳ ಎಲ್ಲೆಗಳನ್ನು ಹಿಗ್ಗಿಸಿ ಹೇಳಬಲ್ಲವಾಗಿದ್ದವು. ಚಿಕ್ಕ ಪ್ರಾಯದಲ್ಲಿ ತಾನು ನೋಡಿದ, ತನ್ನ ಮನಸ್ಸಿಗೆ ಬಂದ ಸಂಬಂಧಗಳ ಕತೆಗಳನ್ನು ಹೇಳುತ್ತಿದ್ದರೂ ಗೌರಮ್ಮ ತಮಗರಿವಿಲ್ಲದೆ ರಾಷ್ಟ್ರೀಯತೆಯ ಅಂಶವನ್ನು ಸಾಧಿಸಿದ್ದರು. ಇದೇ ಈ ಅಲ್ಪಾಯುಷಿ ಕತೆಗಾರ್‍ತಿಯ ಯಶಸ್ಸು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪರಮೇಶ್ವರಗೆ ವಲವಾದೋ (ಕೋಲಾಟ)
Next post ಹೂವಿಗೆ ಹೂವೇ ಸಾಕ್ಷಿ

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…