ಸೂರ್ಯ ಬರುವುದ ಕಂಡು ಚಿಂತೆಯ ತೊರೆದು ಪಕ್ಷಿಗಣಂಗಳು
ಮರದ ಕೊಂಬೆಯ ಮೇಲೆ ಬರುತಲಿ ಜಗವನೆಬ್ಬಿಸ ಬಯಸುತ
ಮಲಗಿ ನಿದ್ರಿಪ ಜನರ ಕಿವಿಯಲಿ ಮಧುರಗಾನವ ಹಾಡುತ
ಸವಿಯ ದನಿಯಿಂದುಲಿದು ತೊಟ್ಟಿಲ ಮಗುವ ಕಿಲಿಪಿಲಿ ನಗಿಸುತ.
ಒಂದು ದನಿಯೇ ಒಂದು ರಸವೇ ರಾಗಭಾವದ ಮೇಳವೇ
ಯಾರಿಗೋ ಆನಂದವೀಯುತ ಸ್ವಾರ್ಥ ಬುದ್ದಿಯ ಮರೆತಿವೆ.
ಗೂಡತೊರೆಯುತ ಜಗವ ಕರೆಯುತ ಬದುಕಿನಿರವನು ಹೇಳವೇ
ಅದನು ಹೊಗಳುವ ಜನರನರಿಯದು ತಮ್ಮ ಹೆಮ್ಮೆಯ ನೆನೆವುವೇ.
ಕಾಡ ಮರದಲಿ ಮನೆಯ ಮಾಡುತ ಬೆಳೆಸಿ ಮಕ್ಕಳ ಮೋಹದಿ
ನೋಡದೀ ಜಗದಾಗು-ಹೋಗನು ಮನಕೆ ತಾರದೆ ಸೋಕದೆ
ತನ್ನ ವಂಶಕೆ ಬಂದ ಶಾಂತಿಯ ತಾಳ್ದು ಹಿಂಸೆಯ ಬಗೆಯದೆ
ಆಗ ದೊರೆತುದೆ ದೇವನಿತ್ತುದೆ ಮಹತು ಎನ್ನುತ ಕೊಳ್ವುದು.
ನಿಮ್ಮ ಕರೆಯಂ ಕಾಯದೀ ಖಗ ಬಂದು ಅಂಗಳಕೆರಗುತ
ನಿಮ್ಮ ಕರುಣಾಹೃದಯವರಿಯುತ ನಿಂದು ಹೊಸ್ತಿಲಕೆರೆಯುತ
ಬಂದು ಸಂತಸದಿಂದ ಬಾಲವನಲುಗಿಸುತ್ತಲಿ ಹಾಡುತ
ಶುಭವ ನೀಡುತ ಹೋಗಿಬರುವೆನು ಎಂದು ನುಡಿವುದು ಹಾರುತ.
ಕಣ್ಣ ತೆರೆಸುತ ಎದೆಯನರಳಿಸಿ ಅಂತರಂಗವ ಕೆರಳಿಸಿ
ಹಾರಿಹೋಯಿತು ದನಿಯು ಮರುದನಿಗೂಡಲು ಆತ್ಮವು ಚಿಮ್ಮಿತು
ಆವ ಬಣ್ಣವು ಬೆಡಗು ಬಿನ್ನಣ ಚಲುವು ನಿಲ್ಲುವ ಭಂಗಿಯು
ಆರಿಗಿಹುದೀ ಭಾವ ವೈರಾಗ್ಯಗಳು ಸುಮ್ಮನೆ ದೊರೆವುದೆ?
ಒಂದು ದನಿಯಲಿ ಹಲವು ದುಃಖದ ಮಬ್ಬು ಮರೆಸುವ ಶಕ್ತಿಯೆ
ಚಪಲ ನೋಟದಿ ಜಗದ ಬಗೆಗಳನಳಿಸಿ ತೋರುವ ಮಾಟವೆ!
ಒಳಗಿನೊಳಗಿನ ಚೇತನವನೆಳ್ಚರಿಸಿ ಸಲಹದೆ ಒಮ್ಮೆಲೆ
ಪಕ್ತಿಯಿಂಚರದಿಂದ ದೇವರು ತೊಟ್ಟರೇ ಮೌನವ್ರತ.
ಲೋಕದೆಲ್ಲೆಡೆಯಲ್ಲಿ ತನ್ನ ಗಂಭೀರಮೂರ್ತಿಯ ಹರಿಸುತ
ನಲಿವ ಪೆರ್ಮೆಯದೊಂದು ಆರನು ಲೆಕ್ಕಿಸದ ಬಿಸವಂದವು
ಸಾವು ನೋವಿನ ಬಾಧೆಗಳುಕದೆ ತನ್ನಯದಿ ಹರಿದಾಡುತ
ಇಂತು ಜೀವನಮೋಕ್ಷವೆಂಬುದ ಸಾರಿ ಲೋಕದಿ ನಡೆವುದು.
*****