(೧೫-೮-೪೭)
ಆ ಮಹಾತ್ಮರ ತಪವೊ ಭಕ್ತಿಭಾವದ ಗುಣವೊ
ಭಾರತಿಯ ಕಣ್ಣೀರೊ ಉಳಿದವರ ಹಸಿವೊ
ಜವಾಹರ ವಲ್ಲಭರ ರಾಜೇಂದ್ರ ಮೌಲನರ
ನಿರುತ ಪೌರುಷವೆನಲು ಬಂದುದೀ ಬೆಳಕು.
ನಿರುತ ತಾರುಣ್ಯದಲಿ ರಂಜಿಸುವ ಭಾರತಿಯು
ಪರತಂತ್ರ ಬಂಧನದಿ ಮುದುಕಿಯಂತಾಗಿ
ಇನ್ನೊಮ್ಮೆ ಸೆರೆಮನೆಯನೊಡೆದು ಹೊರ ತಾ ಬಂದು
ನೋಡುವಳು ಎಮ್ಮನ್ನು ಬಾಷ್ಪವನೆ ತುಂಬಿ.
ಕುಂಕುಮವ ತಳೆದಿಂದೆ ಮುತ್ತೈದೆತನದಿಂದ
ಆ ಮೊದಲ ತಾರುಣ್ಯ-ಲಾವಣ್ಯವೆಸೆಯೆ
ತಾಯಿ ನೋಡುವಳಿತ್ತ ನಗುಮೊಗದಿ ಕೃಪೆ ಬೀರಿ
ಎದೆಯರಳಿ ಕರೆಯುವಳು-ಅಡಿಗರಗಿ ನಮಿಸಿ-
ಪರದಾಸ್ಯ ಶೃಂಖಲೆಯ ಮುರಿದು ಬಂದಿಹಳೀಚೆ
ಎಲ್ಲ ಭಯಗಳ ತಳ್ಳಿ ಫಡ ನೂಕುತಾಚೆ
ಸ್ವಾತಂತ್ರ್ಯ ಬಾವುಟವ ಮೇಲೇರಿಸುವಳದಕೊ
ನಿರ್ಮಲಿನ ತೇಜದಲಿ ಬಹ ಭಂಗಿಯದಕೊ.
ಸೇತುವೆಯಲಾ ಸಾದ ವಿಂಧ್ಯವೇ ತಾಯ್ನಡುವು
ತುಹಿನಗಿರಿ ಮಣಿಮುಕುಟ ನಮ್ಮ ತಾಯ್ಗೆ
ಎಡ ಬಲಕೆ ಕೈ ನೀಡಿ ಮಕ್ಕಳನು ಹರಸುವಳು
ಆ ನಿಲುವ ನೂಡುತೀ ದರ್ಶನವ ಮಾಡಿ.
ಹೆತ್ತ ಭೂಮಿಯ ಪುಣ್ಯ ಬೆಳೆದ ಮಣ್ಣಿನ ಧರ್ಮ
ಸೂರ್ಯ-ಚಂದ್ರರ ಸತ್ಯ ಭಾರತಿಯ ತಪವು.
ನಮಗೆ ಬೆಳಕಾಯ್ತಿಂದು ನಮ್ಮ ನೆನಪಾಯ್ತೆಮಗೆ
ಎಲ್ಲಿ ನೋಡಿದರಲ್ಲಿ ತಾಯ ಪ್ರತಿಬಿಂಬ.
ಹಲವು ಕಾಲದ ತಪದಿ ಬೆಂದು ನೊಂದಿಹ ಕರುಳು
ತನ್ನ ಮಕ್ಕಳು ಕಳೆದ ನಲೆಯ ನೆನೆಯುವಳು
ವೀರ ಧರ್ಮಾಸನದಿ ಪರರೇರಿ ನಲಿಯುತಿರೆ
ಕೈದುಗಳ ಕೆಳಗಿರಿಸಿ ಕಂದಿದಳು ಚದುರೆ.
ಹಾರುತಿದೆ ತಾಯ್ಸೆರಗು ಮೇಲೇರಿ ಧ್ವಜವಾಗಿ
ಅದೊ ಕಂಪು-ಬಿಳಿ-ಹಸುರು – ಮಧ್ಯೆ ವರ ಚಕ್ರ
ಆಗಸದಿ ಮೊಗದೋರಿ ಇನ್ನೊಮ್ಮೆ ಕೆಳಗಿಳಿಯೆ
ನೆಂದೊರೆವ ತೆರದಿಂದ ಅಭಯ ತೋರುತಿದೆ.
ಮೈತ್ರಿಯಲಿಬೀಳ್ಕೊಟ್ಟು ಆಂಗ್ಲರಂ ಕಳುಹುವಳು
ತೊಡೆಯ ಸಿಂಹಾಸನದಿ ಮಕ್ಕಳನು ನಿಲಿಸಿ-
ತಾಯಿಯನಲಂಕರಿಸಿ ಶಾಂತಿಯಂ ಪೊಂದುತಲಿ
ಜೈವುಘೇಯೆನುತವರು ನಡಯುತಿಹರದಕೊ-
ಸ್ವಾತಂತ್ರಗೀತವನು ಹಾಡುತಲಿ ಭೂಮಾತೆ
ಭಾರತಿಯ ಹರಸುವಳು ನಗುಮೊಗದಿ ಬಂದು.
ಹತ್ತು ದಿಕ್ಕಿನ ಗಾಳಿ ಹಾಡುತಿದೆ ಕೀರ್ತಿಯನು
ಭರತ ಮಾತೆಯ ಪಾದರಜವಿರಿಸಿ ಪಣೆಗೆ-
*****