೧
ಕೆಳದಿಯರನೊಡಗೊಂಡು ಕೆಲೆಕೆಲೆ-
ದುಲಿದು ಮೇಲಕೆ ಹಾರಿ,
ಇಳೆಯವರನಣಕಿಸುತೆ ಪಕ್ಕವ
ಕೆಳರಿ ಬಾನೆಡೆಗೇರಿ,
ತಳರುತಿಹೆ ನೀನೆಲ್ಲಿ? ಹಕ್ಕಿಯ-
ಕುಲದರಸೆ ಹೇಳಿಲ್ಲಿ!
ಗೆಳೆಯನೆಡೆ ದೊರೆಯುವುದೆ ನೀನಡೆ-
ದುಳಿವ ದಾರಿಯೊಳೆಲ್ಲಿ?
ದೊರೆತರಾತಗೆ ನೀನು….
ದೊರೆತರಾತಗೆ ನನ್ನ ಬಾಳಿನ
ಕೊರಗನರುಹುವೆಯೇನು?
೨
ಅಳತೆಯಿಲ್ಲದ-ಹೊಳೆವ-ಕೈಗಳ
ಕಳುಹಿ ವಿಶ್ವದೊಳೆಲ್ಲಾ
ಬೆಳಕುಬಣ್ಣವ ಬಳೆವ ತಾವರೆ-
ಗೆಳೆಯ ಲಾಲಿಸು ಸೊಲ್ಲಾ!
ನನ್ನ ಮನದಳಲನ್ನು ಬರೆದಾ
ಬಿನ್ನವತ್ತಳೆಯನ್ನು
ಚೆನ್ನನಿರುವಲಿ ಕಳುಹಲಿಹೆ, ನೆರ-
ವನ್ನು ನೀಡುವೆಯೇನು?
ಒಂದೆ ಒಂದಾ ಕೈಯ….
ಒಂದೆ ಕಿರುಗೈ ಕಳುಹಿ ಓಲೆಯ-
ನೊಂದಿಸಾತಗೆ ಜೀಯ!
೩
ಮುಮ್ಮಳೆಯ ಕಮ್ಮುಗಿಲ ಸಿಡಿಲೇ
ಹೆಮ್ಮಗಳ ಮೊರೆಕೇಳಿ
ಒಮ್ಮೆ ಒಂದೇ ನಿಮಿಷ ಕೊಡುವಿರೆ
ನಿಮ್ಮ ಗುಡುಗನು? ಹೇಳಿ!
ನಲ್ಲನೆಲ್ಲಿಹನೇನೊ! ನನ್ನದು
ಮೆಲ್ಲಲಿಯ ದನಿ ಕೇಳದು,
ಎಲ್ಲಿಯೇ ಇರಲವಗೆ ಸುದ್ದಿಯ
ಸಲ್ಲಿಸಲೆ ಬೇಕಿರುವುದು,
ಗುಡುಗಿನಾ ಮೊಳಗಿಂದೆ…
ಗುಡುಗಿ ಗರ್ಜಿಸಿ ನನ್ನ ನೆನಹನು
ಕೊಡುವೆನಾತನಿಗಿಂದೆ..
೪
ಗಗನದೊಳು ತೇಲಾಡುತಾಡುತ
ನಗುವ ಚುಕ್ಕಿಯ ಬಳಗವೆ,
ಸೊಗಸು ನಿಮ್ಮದು ಬದುಕು ನೀವೀ
ಜಗದ ಸಾಕ್ಷಿಗಳಲ್ಲವೇ?
ಮಿಣುಕುನೋಟದೊಳೇನನೆಲ್ಲವ-
ನಿಣುಕುತಿಹ ಧ್ರುವತಾರೆಯೆ,
ಕ್ಷಣವೆ ನಿನ್ನಯ ಕಣ್ಣ ಬಲುಹನು
ನನಗೆ ನೀಡುಪಕಾರಿಯೆ!
ಅವನನೊಮ್ಮೆಯೆ ನೋಡಿ….
ಅವನ ನೋಡುತ ನಲಿದು ಹಾಡುವೆ
ಕವನ ನಿನ್ನದು ಮಾಡಿ.
೫
ಬೇಸಗೆಯ ಬಿರುಗಾಳಿ, ನಿನ್ನದಿ-
ದೇಸು ನಡಿಗೆಯ ವೇಗ?
ತಾಸುಹೊತ್ತೆರವದನು ಕೊಟ್ಟರೆ
ಗಾಸಿ ನಿನಗೇನೀಗ?
ನಿನ್ನ ತೆರದೊಳೆ ನೀರು-ನೆಲ-ಮುಗಿ-
ಲೆನ್ನದೆಯೆ ನಾ ಹಾರಿ,
ಚೆನ್ನನಿರುವಲಿ ತೆರಳುವೆನು, ಆ-
ನನ್ನಿ ಕಾರನ ಸೇರಿ
ಬೆರೆಯುವೆನು ನಾನಾಗ….
ಬೆರೆಯುವೆನು ನಾನಾಗ ಪಡೆವುದು
ಮರಳಿ ನಿನ್ನಯ ವೇಗ.
*****