ಭೂಮಿಯಾಳದಲ್ಲಿ ಮಾತ್ರ
ಈಜುವ ಪುರಾವೆಗಳಿವೆ
ಈ ಮರದ ಬೇರಿಗೆ
ಹೆಬ್ಬಂಡೆಯೂ ಮಿದು ಮಣ್ಣಾಗಿ
ಹುಡಿ ಹುಡಿಯೂ
ಮಿಸುಕುತ್ತದಂತೆ
ಕಾಣಲಾರದು
ನಮ್ಮಂಥ ಪಾಮರರಿಗೆ!
ಈ ಮರದ ಕೊಂಬೆ ಕೊಂಬೆಗಳಲ್ಲಿ
ನೇತು ಬೀಳಬಹುದು ಯಾರೂ
ಉಯ್ಯಾಲೆಯಾಡಬಹುದು
ಹತ್ತಿ ಕುಪ್ಪಳಿಸಿ ಕುಣಿದು
ಮರಹತ್ತಿ ಮರಕೋತಿಯಾಡಬಹುದು
ನೆಳಲಿನಲಿ ಕುಂಟೋಬಿಲ್ಲೆ……
ರೆಂಬೆಗಳ ಮರೆಯಲ್ಲಿ
ಗೂಡು ಕಟ್ಟಬಹುದು
ತಾವು ಹುಡುಕಬಹುದು!
ಮರ ಸಿಡುಕುವುದಿಲ್ಲ
ಚಡಪಡಿಸಿ ನೂಕುವುದಿಲ್ಲ
ಅಷ್ಟೇ ಅಲ್ಲ
ಯಾವ ಮಾಂತ್ರಿಕತೆಗೂ
ಮಿಡುಕುವುದೂ ಇಲ್ಲ!
ಅದು ಕೇಳುವುದಿಲ್ಲ ನೋಡುವುದಿಲ್ಲ
ನುಡಿಯುವುದೂ ಇಲ್ಲ.
ಅದರ ಅತೀತ ಬೇರಿಗೇ
ಪಂಚೇಂದ್ರಿಯಗಳಂಟಿಕೊಂಡು
ಬೇರು ಮಾತ್ರ ತುಡಿಯುವುದಂತೆ
ಒಳಗೇ,
ಏನು ಮಾಡುವುದು
ನಮ್ಮ ಕಣ್ಣಿಗದು ಕಾಣುವುದೇ ಇಲ್ಲ!
ಗಾಳಿ ಬೀಸಿದಾಗ
ಮಳೆ ಬಿದ್ದಾಗ
ಬಿಸಿಲು ಕಾಯಿಸಿದಾಗ
ಆ ಕ್ಷಣಕ್ಕೆ ಒಡ್ಡಿಕೊಳ್ಳುವುದು ಎಲೆಯೇ
ಮರ ನಿಂತಿರುತ್ತದಷ್ಟೇ ತನ್ನಷ್ಟಕ್ಕೇ!
ಏನೂ ಆಗಿಲ್ಲದಂತೆ!
ಅದಕ್ಕೆ ಅದರದ್ದೇ
ಜನ್ಮಾಂತರದ ಕಥೆಗಳು
ಜೊತೆಗೇ
ಹೊಳೆದೂ ಹೊಳೆಯದ ನಕ್ಷತ್ರಗಳು.
ನಂಟಿದ್ದೂ ಅಂಟಿಯೂ ಅಂಟದಂತೆ
ಹಿಂದಿಲ್ಲದೇ ಮುಂದಿಲ್ಲದೇ
ಬಯಲಲ್ಲಿ ವಿರಾಗಿಯಂತೆ
ನಿಂತ ಮರಕ್ಕೆ
ನಾವೆಷ್ಟಾದರೂ ಜೋತು ಬೀಳಬಹುದು
ಅದು ಆತುಕೊಳ್ಳುವುದಿಲ್ಲವಷ್ಟೇ!
*****