ಬೀಳ್ದ ಕುಸುಮ

ಆವದೇವನ ಬನವೋ! ದೇವದೇವನ
ಬನವೋ! ದೇವನಾಡಿದ ಬನವೋ! ಮತ್ತೆ
ದೇವಾನುದೇವತೆಗಳೆಲ್ಲ ಕೂಡಿದ
ಬನವೋ! ಇದು ಇಂದ್ರವನ! ಸಗ್ಗವನ!
ಆವುದಾದರು ಇರಲಿ; ನಾನಿರ್ಪ
ಒನವಿದೇಂ ದಿವ್ಯ ಬನವೋ!
ಪೂರ್ವಜನ್ಮದ ಫಲವೋ! ಪುಣ್ಯ
ಪೆಚ್ಚಿದ ಫಲವೋ! ದೇವನೊಲುಮೆಯ
ಫಲವೋ! ಏನಿರ್ದೊಡೇನಿಂದು
ಸುಪ್ರಭಾತದ ಸಮಯ! ಏವೇಳ್ವೆ
ಬನಸಿರಿಯನೆಡೆವಿಡದಲೀಕ್ಷಿಸುವ
ಕಂಗಳಿವು ನಿಜ ಧನ್ಯ! ಧನ್ಯ!!

ಬನದಸುತ್ತಲು ಮತ್ತೆ ಬೆಟ್ಟಗಳು!
ಬೆಟ್ಟದೊಳು ಅಲ್ನೋಡು ದಿವ್ಯ ಬೆಟ್ಟ!
ಹಿಂಜಿದರಳೆಯಬೆಟ್ಟ! ಹಿಮದಬೆಟ್ಟ!
ಮುಗಿಲರಸಿಯನ್ನೊಮ್ಮೆ ಮುದ್ದಿಡುವಬೆಟ್ಟ!
ಆರವರು? ಬೆಟ್ಟವಂ ಅಡರಿಹರು?
ಅಡರಿ ಇಳಿಯುತಲಿಹರು ಇತ್ತ ಕಡೆ
ಮೇಲುನಡಿಗೆಯಿಂ ಬರುತಿಹರು. ಓ, ನನ್ನ
ಗಂಗೆ, ಯಮುನೆಯರು! ಸಂಚರಿಸಿ ಅಲ್ಲಲ್ಲಿ
ಏವೇಳ್ವರೇನೊ, ಎಂತೊ, ಮನೆಗಂತು
ಬರಲಿ. ಅಯ್ಯೊ, ಏಂ ಪ್ರಮಾದವನರಿಯೆ
ಸಾಗರದಿ ಧುಮುಕಿದರು ಎಂದೇಳ್ವರೋ!
ಇದನೋಡು ಇತ್ತಲೂ ಸಮದೃಶ್ಯ!
ಭೀಮೆ, ಕೃಷ್ಣೆ, ಕಾವೇರಿಯರು ಅತ್ತಿಂದ
ಬಂದೊಡನೆ ಸಾಗರದಿ ಧುಮುಕಿದರು ಸುಳಿವಿಲ್ಲ.
ವಿಧವೆಯರೆ ಅವರೆಲ್ಲರೂ? ಅಲ್ಲಲ್ಲ!
ಅವರ ನಲ್ಲರ ನೆನಹು ನನಗಿರ್ಪುದೈ!
ಏಂ ಕಾರಣವೊ ನಾನರಿಯೆನಲ್ಲಾ!
ಅಯ್ಯೋ, ನಾನೆಂಥ ಜಾಣೆ? ಎನಗಿರ್ಪ
ಉದಯದಾನಂದದಲಿ ಕಾಳತಾಪವ ಮತ್ತೆ
ಬೆರೆಸಲೆತ್ನಿಸುತಿರ್ಪೆ, ಹುಚ್ಚು! ಹುಚ್ಚು!
ಸುಪ್ರಭಾತದಲೇಳ್ದು, ಸೃಷ್ಟಿ ಸೊಬಗಂ ಕಾಣ್ದು
ಅವರೆಲ್ಲರೂ ಜಲಕ್ರೀಡೆಯಾಡುತಿರ್ಪರ್,

ಇದು ನೋಡು, ಇಲ್ಲಿರ್ಪ ಸೋಜಿಗದ ಕಾರಂಜಿ!
ಪೂರ್ವಜರ ಕೌಶಲ್ಯ ಹೊರಹೊಮ್ಮುತಿದೆ! ಮತ್ತೆ
ಪುಟಿಯುತಿದೆ! ಎಂಪೋಲ್ವರಾರೆಂದೇನೊ
ಅಂದಂದು, ಜಿಗಿಜಿಗಿದು, ಪುಟಿಯುತಿದೆ!
ಇಂದೇಕೊ ಕಾರಂಜಿ ಜಲದಿ ತುಂಬಿಲ್ಲವೇನೋ!
ಜಲವಿರ್ದರೂ ಪುಟಿವ ಶಕ್ತಿಯಿಲ್ಲೇನೋ!
ಶಕುತಿಯಿರುತಿರ್ದರೂ ಮಾರ್ಗವಿಲ್ಲೇನೋ!

ಇರಲಿ, ಇದುನೋಡು ಕುಸುಮಗಳ ಉದ್ಯಾನ!
ಅಲ್ಲಿ ಸೇವಂತಿಗೆಯು! ಇಲ್ಲಿ ಸಂಪಿಗೆಯು!
ಎಲ್ಲೆಲ್ಲು ಮಲ್ಲಿಗೆ ಪಾರಿಜಾತಗಳು!
ಎಲ್ಲವೂ ಎಲ್ಲರಿಗೆ ಸೌಗಂಧ ಪೂಸುತಿವೆ!
ಮಂದಮಾರುತಗಂತು ಕೇಳ್ವರಾರೊಬ್ಬರಿಲ್ಲ!
ಕುಸುಮ ಬೇಡದ ಕುವರಿಯಿರುತಿರ್ಪಳೇ?
ಮತ್ತೆ ದೇವನಿರ್ಪನೆ ಪೇಳಿ ಪೇಳಿ!
ಕೆಲರು ತಮ್ಮಯ ನಲುಮೆಗೋಸುಗ ಕುಸುಮ-
ಗಳನಾಯುತಿಹರಲ್ಲಿ! ಕೆಲರು ದೇವನಪೂಜೆ-
ದಾಯುತಿಹರದದೊ! ಕೆಲರು ತಮ್ಮಯ
ನಲ್ಲೆ ಯರಿಗಾಗಿ? ಏಂ ಕುಸುಮಗಳೋ! ಎಷ್ಟು
ಜನಕೀವವೋ! ಮೊದಲೆಷ್ಟು ಅರಳಿದವೋ!
ಮುಂದೆಷ್ಟು ಅರಳುವವೋ! ಇಂದೆಷ್ಟು ನಾನರಿಯೆ!

ಏನಿದೀ ಅನ್ಯಾಯ! ಘೋರತರ ಅನ್ಯಾಯ!!
ಈ ಬೀಳ್ದ ಕುಸುಮವಂ ಆಯ್ದರಾರೊಬ್ಬರಿಲ್ಲ.
ನನ್ನ ನಲ್ಲನೆ ಅಂದು ಎಂದೋ ಒಮ್ಮೆ
ಕೆಡಹಿದಂತೆಯೊ ಏನೊ ಭಾಸವಾಗುತಿದೆ;
ಅಥವಾ ಅವರಪ್ಪ ತಾತ ಮುತ್ತಾತ
ಕೆಡಹಿರಬಹುದು. ಆದೊಡೇನದನೊಮ್ಮೆ
ಕಣ್ಣೆರೆದು ನೋಡದಿರ್ಪುದೆ ನಲ್ಲ?
ಅದದೊ ನನ್ನಯ ನಲ್ಲ ನಿದ್ರೆಯಿಂದೆಚ್ಚತ್ತು
ಈಗೀಗ ಕಣ್ಣೊರಿಸಿಕೊಳ್ಳುತ್ತ ಮೆಲ್ಲನೆ
ಆಗಮಿಸುತ್ತಿರುವಂತೆ ತೋರುತಿದೆ!

ಕಲ್ಲುದೇವನ ಕಂಠ ಪೂಮಾಲೆಯಿಂ
ಶೋಭಿಸುತಿರ್ತಾದೋಡೇಂ ಬೀಳ್ದ ಕುಸುಮಕೆ
ಆ ಮಾಲೆಯೋಳ್ ತಾಣವಿರಲಿಲ್ಲ. ಮತ್ತೊಮ್ಮೆ
ಕೆರೆಗೆ ನಾನೈತಂದೆ. ಕುವರಿಯರ ಮುಡಿಗಳಲಿ
ಮಲ್ಲಿಗೆಗಳೆಷ್ಟಿರ್ದೊಡೇಂ ಬೀಳ್ದ ಕುಸುಮ
ಆರೊಬ್ಬರಲ್ಲಿಯು ಕಾಣೆ! ಎಲ್ಲಿಯೂ ಕಾಣೆ ಕಾಣೆ!

ನಾನಾರೆ ಮುಡಿಯಲಾ? ನನ್ನ ನಲ್ಲನ ಭಯವು!
ಕೇಳದಲೆ ಮುಡಿದಳೆಂದೆಲ್ಲಿ ಮುನಿಯುವನೋ!
ಬಿಟ್ಟುಬಿಡಲಾ? ಮತ್ತೆ ಮರುಕ ಬಪ್ಪುದು!
ಬರಲಿ ಎನ್ನೊಡೆಯ ಕೇಳಿಯೆ ಬಿಡುವೆ!
`ಬತ್ತಿಹುದು ಬಾಡಿಹುದು ಬಿಸುಡೆ’ ನ್ನುವನು!
`ಅದಕೆಲ್ಲ ಕಾರಣರು ನೀವೆಂ’ ದು ನಾನುಡಿವೆ.

ಸ್ವಾಗತವು ಸ್ವಾಗತವು ಓ, ನನ್ನನಲ್ಲ!
ಬೀಳ್ದ ಕುಸುಮವನ್ನಿಲ್ಲಿ ಬಿಟ್ಟು ಬಿಡುವುದೇ?
ಆವಕರ್ಮದ ಫಲವೋ! ಏಂ ನಿಮ್ಮ ಛಲವೋ!
ಬೀಳ್ದ ಕುಸುಮವೆ ಇರಲಿ; ಏಳ್ದುದಿರಲಿ;
ಏನಾದೊಡೇಂ ಕುಸುಮ! ಕುಸುಮ!
ನನ್ನೊಡೆಯ, ನನ್ನೊಡೆಯ, ಓ ನನ್ನ ಒಡೆಯ
ಮೆಯ್ಯೊಳಿಹ ಬಿಸಿರಕ್ತ ತಣ್ಣಗಾಗುವ ಮುನ್ನ,

ಶಕುತಿಯದು ಕುಗ್ಗಿ ಕುಂದದ ಮುನ್ನ,
ಕಪ್ಪಿನೀ ಕೇಶಗಳು ಬಿಳಿಯವಾಗುವ ಮುನ್ನ
ನನ್ನೊಡೆಯ, ನನ್ನೊಡೆಯ, ಓ ನನ್ನ ಒಡೆಯ
ಬೀಳ್ದ ಕುಸುಮವನೆನ್ನ ಮುಡಿಯೊಳಿಡು!
ಬಿಟ್ಟ ಹೊಲೆಯರನೊಮ್ಮೆ ಮುಟ್ಟಿ ಬಿಡು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅರಳಿದ ಸಂಜೆ
Next post ವಚನ ವಿಚಾರ – ಯಾರೂ ಇಲ್ಲವೆಂದು

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…