ಈ ಮೌನ ಸಂಜೆ ಬೀದಿಯಲ್ಲಿ ಹೊರಟಿವೆ
ಇರುವೆಗಳ ಮೆರವಣಿಗೆ, ಮರದ ಕೆಳಗೆ,
ಒಳಗೆ ಪೋರ ಚೆಂಡು ಹುಡುಕುತ್ತಿದ್ದಾನೆ,
ಮತ್ತೆ ಚಿಟ್ಟೆ ಹರಿದಾಡದೇ ಕುಳಿತಿದೆ ಹೂವಿನ ಮೇಲೆ.
ಖಾಲಿ ಹಾಳಿಯಲಿ ಅರಳಿವೆ ಕವಿಯ ನೀಲಿ ಅಕ್ಷರಗಳು,
ಮುಗಿಲ ತುಂಬ ಬೆಳ್ಳಕ್ಕಿ ಸಾಲು ಬುದ್ಧ ಗಯಾಕ್ಕೆ ಹಾರಿವೆ,
ರೂಹುಗಳ ಒಡಲಲ್ಲಿ ಅರಿಳಿದ ಪರಿಮಳದ ಅನ್ನ,
ಜೋಲಿಯಲಿ ಕನಸು ಕಂಗಳ ಕಂದನ ಸಂಜೆ ನಿದ್ದೆ.
ತಣ್ಣಗೆ ಹರಿಯುತ್ತಿದೆ ನದಿ. ಮೀನುಗಳ ಒಡಲು,
ಶರತ್ಕಾಲದ ತುಸು ಹಳದಿ ಎಲೆ ಎದುರಿದೆ ನಿರಾಳವಾಗಿ,
ಆಗಸದ ತುಂಬ ನೆನಪುಗಳ ಚುಕ್ಕಿ ಚಂದ್ರಮ ಅರಳುವಾಗ,
ಅಮ್ಮ ದೇವರ ಮುಂದೆ ನೀಲಾಂಜನ ಹಚ್ಚಿದಾಳೆ.
ಸ್ಪರ್ಶಕ್ಕಾಗಿ ಕಾದ ಸಂಜೆಯ ನೆರಳು ಬರೆದ ಅಕ್ಷರಗಳ,
ತಬ್ಬಿಕೊಂಡಿವೆ ಜಗದ ಜನರ ಬೆವರಿನ ನಿಟ್ಟುಸಿರು.
ಸಾವಿರ ಕವನಗಳ ಬೇರು ಮೌನಗರ್ಭದಲ್ಲಿ ಮೊಳೆತು,
ಸಂಜೆ ಚಂದ್ರ ಉದಯಿಸುತ್ತಾನೆ ಹೊಸ ಪ್ರತಿಮೆಗಳ ಹೊತ್ತು.
ಮರದಲ್ಲಿ ಹೂವು ಅರಳಿ ಕಂಪ ತೇಲಿದ ಕವನ,
ಸುಮ್ಮನೆ ಒಂದು ಖುಷಿಯ ಚಿಲುಮೆಯ ಕಿಡಿ.
ಸುಖದಲ್ಲಿ ಮಿಂದವರ, ದುಃಖದಲ್ಲಿ ಬಳಲಿದವರ,
ರಾತ್ರಿಯ ಕನಸುಗಳು ತೊಳೆಯುತ್ತವೆ. ಮತ್ತೆ ಶುಭ್ರ
ಮುಂಜಾವಿಗೆ ಕಾದಿವೆ ಕಣ್ಗಳು.
*****