ಆರೂ ಇಲ್ಲವೆಂದು ಆಳಿಗೊಳಲುಬೇಡ ಕಂಡೆಯಾ
ಏನ ಮಾಡಿದಡೂ ಆನಂಜುವಳಲ್ಲ
ತರಗೆಲೆಯ ಮೆಲಿದು ಆನಿಹೆನು
ಸರಿಯ ಮೇಲೊರಗಿ ಆನಿಹೆನು
ಚೆನ್ನಮಲ್ಲಿಕಾರ್ಜುನಯ್ಯಾ
ಕರ ಕೇಡನೊಡ್ಡಿದಡೆ ಒಡಲನು ಪ್ರಾಣವನು ನಿಮಗರ್ಪಿಸಿ ಶುದ್ಧಳಹೆನು
[ಆರೂ-ಯಾರೂ, ಆಳಿಗೊಳಲುಬೇಡ-ದುಃಖಗೊಳ್ಳಬೇಡ, ಆನಂಜುವಳಲ್ಲ-ನಾನು ಹೆದರುವವಳಲ್ಲ, ಆನಿಹೆನು-ನಾನಿರುವೆನು, ಸರಿ-ಕತ್ತಿಯ ಅಲಗು, ಕರ ಕೇಡು-ಅತಿಯಾದ ಕಷ್ಟ]
ಅಕ್ಕ ಮಹಾದೇವಿಯ ವಚನ. ಈ ವಚನವನ್ನು ಯಾರಿಗೆ ಹೇಳುತ್ತಿರಬಹುದು? ತನಗೆ ತಾನೇ, ಅಥವಾ ತನ್ನನ್ನು ಪರೀಕ್ಷಿಸಲು ಬಯಸಿದ ಮತ್ತೊಬ್ಬರಿಗೆ, ಅಥವ ಚನ್ನಮಲ್ಲಿಕಾರ್ಜುನನಿಗೇ ಹೇಳುತ್ತಿದ್ದಾಳೆಯೋ ಏನೋ. ಮೂರನೆಯ ಸಾಧ್ಯತೆ ಸೂಕ್ತವೆನಿಸುತ್ತದೆ.
ನನಗೆ ಯಾರೂ ಇಲ್ಲ, ಅನಾಥಳು ಎಂದು ನಿರ್ಲಕ್ಷ್ಯ ಮಾಡಬೇಡ, ನಾನು ತರಗೆಲೆಗಳನ್ನು ತಿಂದುಕೊಂಡಿದ್ದೇನೆ. (ಮರದ ಎಲೆಗಳನ್ನೇ ತಿಂದುಕೊಂಡು ತಪಸ್ಸು ಮಾಡುವ ಕ್ರಮವೂ ಇತ್ತೆಂದು ತೋರುತ್ತದೆ. ಗಿರಿಜೆಯು ಶಿವನ ಕುರಿತು ತಪಸ್ಸು ಮಾಡಿದಾಗ ಕೆಲವು ಕಾಲ ಎಲೆಗಳನ್ನೇ ತಿಂದು ಇದ್ದಳೆಂಬ ಕಥೆ ಇದೆ). ಚೂಪಾದ ಕತ್ತಿಯ ಮೇಲೆ ಒರಗಿದ್ದೇನೆ. ಚನ್ನಮಲ್ಲಿಕಾರ್ಜುನನನ್ನು ಬಯಸಿ ನನಗೆ ನಾನೇ ಹೀಗೆ ದಂಡನೆ ಕೊಟ್ಟುಕೊಳ್ಳುತ್ತಿರುವಾಗ ಇನ್ನೇನು ಆಗಲು ಸಾಧ್ಯ. ಚನ್ನಮಲ್ಲಿಕಾರ್ಜುನ ಇನ್ನೂ ಅತಿ ಕೆಡುಕನ್ನೇನಾದರೂ ಒಡ್ಡಿದರೆ ದೇಹ, ಪ್ರಾಣ ಎರಡನ್ನೂ ಅವನಿಗೇ ಅರ್ಪಿಸಿಬಿಡುತ್ತೇನೆ.
ನನಗೆ ಇರುವುದು ಚೆನ್ನಮಲ್ಲಿಕಾರ್ಜುನ ಮಾತ್ರ ಅವನೇ ನನನ್ನು ಯಾರೂ ಇಲ್ಲವೆಂದು ನಿರ್ಲಕ್ಷ್ಯ ಮಾಡಿದರೆ ಅದೇ ಪರಮ ಕೇಡು. ಹಾಗೆ ಮಾಡಿಯಾನೇ ಎಂಬ ಆತಂಕದ ದನಿಯೂ ಇಲ್ಲಿ ಕೇಳುವುದೇ? ಹಾಗಾಗುವುದಾದರೆ ಪ್ರಾಣ, ದೇಹ ಎರಡೂ ಅವನಿಗೇ ಅರ್ಪಣೆಯಾಗಲಿ ಅನ್ನುವಾಗ ಹತಾಶೆ ಇದೆಯೋ, ಗಟ್ಟಿ ಮನಸ್ಸು ಇದೆಯೋ?
*****