ನನ್ನ ಮನಸ್ಸೊಂದು
ಬಿಳಿಯ ಹಾಳೆ
ಅದರಲಿ ನೀವು ಬರೆದಂತೆ
ಇರುವುದು ನನ್ನ ನಾಳೆ!
ನನಗಿಲ್ಲ ನನ್ನತನ
ಹುಟ್ಟುತ್ತಾ ಬರೆದರು
ನನ್ನ ಭವಿಷ್ಯ
ನನ್ನ ಹೆತ್ತ ತಂದೆ.
ಬೆಳೆದಂತೆ ಅಂದರು
ನಿನ್ನ ಜೀವನದ
ನಾಳಿನ ಲಿಪಿಕಾರ
ನಿನ್ನ ಕೈಹಿಡಿದ ಗಂಡ.
ನನಗಿಲ್ಲ ನನ್ನತನ
ಬರೆದದ್ದ ಅಳಿಸುವ ದಿಟ್ಟತನ.
ಅವನೂ ಬರೆದ
ಅವನಿಗೊಪ್ಪುವಂತೆ.
ಮನಸ್ಸು ನನ್ನದು
ಹಾಳೆ ನನ್ನದು
ಲಿಪಿಕಾರರು ಮಾತ್ರ
ಬೇರೆ ಬೇರೆ.
ಅಪ್ಪನ ಲೇಖನಿ ಕುಸಿದಾಗ
ಬರೆಯ ಬಂದರು
ನನ್ನ ಮಕ್ಕಳು
ಭವಿಷ್ಯಗಳಿಲ್ಲದ ನನ್ನ ನಾಳೆ.
ನನ್ನದಲ್ಲದ ಲೇಖನಿಯಲ್ಲೆ
ಬರೆಯುತ್ತಾ ಬಂದ
ನನ್ನ ಜೀವನದ ಕೊನೆಯ ಸಾಲುಗಳ
ನಾನೇ ಬರೆಯುವ
ಸಾಹಸ ತೋರಿ ಬರೆದೇ ಬಿಟ್ಟೆ
ಭವಿಷ್ಯ ತುಂಬಿದ ನನ್ನ ನಾಳೆ!
*****