ಜೀವನದ ಹೆಜ್ಜೆಗಳು
ಭಾರವಾದಾಗ,
ಅಕ್ಕನಂತೆ ನಾನೂ ಎಲ್ಲ ಬಿಟ್ಟು,
ಹೋದರೇನು ಎಂದನಿಸಿತ್ತು
ಹಲವು ಬಾರಿ.
ಆದರೆ ನಾನು ಹೋಗಲಿಲ್ಲ.
ಬಂಧನಗಳ ಕಳಚಿ ಹೋಗುವುದು
ಅಷ್ಟು ಸುಲಭವಿಲ್ಲ.
ನನ್ನವರನ್ನುವ ವ್ಯಾಮೋಹ
ನನ್ನ ಬಿಡಲಿಲ್ಲ.
ಅರಸಿಕೊಂಡು ಹೋಗಲು
ನನ್ನನ್ನಾವ ಚೆನ್ನಮಲ್ಲಿಕಾರ್ಜುನನೂ
ಕಾಡಿಸಲಿಲ್ಲ.
ಮೈಮುಚ್ಚುವಷ್ಟು ಕೇಶರಾಶಿ ಇದ್ದರೂ
ಹಿಂದಿನಂತೆ ಇಂದು ರಸ್ತೆಗಳು
ಸುಗಮವಾಗಿಲ್ಲ.
ಹೆಂಗಸರ ಸಮಾನತೆಗೆ ಇಂಬುಕೊಟ್ಟ
ಯಾವ ಅನುಭವ ಮಂಟಪಗಳೂ
ನನಗೆ ಕಾಣಿಸಲಿಲ್ಲ.
ಹಾಗಾಗಿ ನಾನುಳಿದೆ ಇದ್ದಲ್ಲೇ
ಅಕ್ಕನ ಶಕ್ತಿಯನ್ನು ಗೌರವಿಸಿಕೊಂಡು
ಕಳೆದು ಹೋಗುತ್ತಿದ್ದ ನನ್ನತನವ
ಬಾಚಿ ಹಿಡಿದುಕೊಂಡು.
ಭಾರವಾದ ಹೆಜ್ಜೆಗಳ
ಹಗುರ ಮಾಡಿಕೊಂಡು!
ಅಕ್ಕನಂತಾಗಲೂ
ಯಾರಿಗಾದರೂ ಸಾಧ್ಯವೇ?
*****