ಇರುಳೆಲ್ಲ ಹಣ್ಣಾಗಿ ಬೆಟ್ಟಿಂಗಳಾದಂತೆ
ಬೇಸಿಗೆಯ ಬಿಸಿ ಬಾನಬಸಿರಿನಲ್ಲಿ
ಕಡಲೆದೆಯ ಉಪ್ಪುಂಡು ನೀರ ಮುತ್ತಾದಂತೆ
ಚಿಗುರೇಳುವೊಲು ಮಣ್ಣ ಮಾಸಿನಲ್ಲಿ
ನಂಜೆದೆಯ ಆಳದಲಿ ಮಡಗಿದ್ದ ಕಾರುಣ್ಯ
ಝರಿಯೆದ್ದು ಮೇಲಕ್ಕೆ ಹರಿದಹಾಗೆ
ಹೂವಗಲ್ಲಕೆ ಸೂಜಿದುಟಿಯು ತಾಕಿರುವಾಗ
ಮಕರಂದ ಜೇನಾಗಿ ಬರುವಹಾಗೆ
ನೂರಾರು ನೋವುಗಳ ನಕ್ಕಿಸುತ ಜೀವನವ
ಮಧುರ ಮಧುವನು ಗೈವುದಾವಶಕ್ತಿ ?
ಕಳಚಿ ಬೀಳುತಲಿರಲು ಹಿಡಿದೆತ್ತಿನಡೆಸುವದು
ಬೇಕೇನು ಪ್ರತಿಫಲವು? ಸಾಕು ಭಕ್ತಿ
*****