ವಿಭೀಷಣನ ನಿರ್ಗಮನ
“ಅಗ್ರಜಾ ಇದಿಷ್ಟು ವಾಲಿ ಸುಗ್ರೀವರ ವೃತ್ತಾಂತ. ನೀನೇ ಯೋಚಿಸಿ ನೋಡು, ಶ್ರೀರಾಮನಲ್ಲೇನಿದೆ ತಪ್ಪು; ಪರಸ್ತ್ರೀಯರನ್ನು ಅಪಹರಿಸಿ ಭೋಗಿಸಿದವನಿಗೆ ಸರಿಯಾದ ಶಿಕ್ಷೆಯಾಯಿತು.”
“ಅಂದರೆ ನೇರವಾಗಿ ಬೆರಳು ತೋರಿಸಿ ನನ್ನನ್ನೇ ಅಪರಾಧಿಯಾಗಿ ನಿಲ್ಲಿಸುತ್ತಿರುವೆ; ಈಗ ನನ್ನ ಸರದಿ. ಆ ನಿನ್ನ ಶ್ರೀರಾಮ ಅದು ಹೇಗೆ ಕಡಲನ್ನು ದಾಟಿ ಬಂದು ನನ್ನನ್ನು ಕೊಲ್ಲುತ್ತಾನೋ ನೋಡಿಯೇ ಬಿಡುತ್ತೇನೆ.”
“ಅಣ್ಣಾ, ಗುರಿಸಾಧಿಸುವ ಛಲವುಳ್ಳವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ. “ಮನಸ್ಸಿದ್ದರೆ ಮಾರ್ಗ” ಧರ್ಮಮಾರ್ಗದಲ್ಲಿ ಸತ್ಯಮಾರ್ಗದಲ್ಲಿ ನಡೆಯುವವನಿಗೆ ಮೊದಲಿಗೆ ವಿಘ್ನಗಳು, ಅಡೆತಡೆಗಳು ಉಂಟಾದರೂ ನಂತರ ಎಲ್ಲವೂ ಸರಿಯಾಗುತ್ತದೆ. ತಪ್ಪು ಮಾಡಿದವನಿಗೆ ಮೊದಮೊದಲು ಎಲ್ಲವೂ ಸರಾಗವಾದರೂ ಅಂತ್ಯದಲ್ಲಿ ಕಷ್ಟಕೋಟಲೆಗಳು ಎದುರಾಗಿ ದುಃಖದಲ್ಲಿ ಕೊನೆಯಾಗುತ್ತದೆ.”
“ನನ್ನ ಅಂತ್ಯ ಹಾಗೇ ಆಗಬೇಕೆಂದಿದ್ದರೆ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ನೀನೇ ಹೇಳುತ್ತೀಯಲ್ಲ. ನಮ್ಮ ಕೈಲೇನಿದೆ ಎಲ್ಲಾ ಹರಿಚಿತ್ತವೆಂದು”
“ಅಣ್ಣಾ ಮನುಷ್ಯನಾಗಿ ಹುಟ್ಟಿದ ಮೇಲೆ ಪಾಪ ಪುಣ್ಯಗಳ ವಿಚಾರ ಮಾಡಬೇಕು. ಸತ್ತ ಮೇಲೆ ನಮ್ಮ ಜೊತೆ ಬರುವುದು ಹೆಂಡತಿ ಮಕ್ಕಳು, ಅಣ್ಣತಮ್ಮಂದಿರು ಸ್ನೇಹಿತರಲ್ಲ ನಾವು ಗಳಿಸಿದ ಪಾಪಪುಣ್ಯಗಳೇ ಹಿಂದೆ ಬರುವುದು. ಪರೋಪಕಾರವೇ ಪುಣ್ಯವು ಅನಾಥರಿಗೂ, ಅಂಗಹೀನರಿಗೂ ಅನ್ನ ವಸ್ತ್ರಗಳನ್ನು ನೀಡುವುದು, ಕೆರೆ ಬಾವಿಗಳನ್ನು ಕಟ್ಟಿಸುವುದು, ಗೋದಾನ, ಭೂದಾನ, ವೇದಗಳಲ್ಲಿ ತಿಳಿಸಿರುವಂತೆ ಯಜ್ಞಯಾಗಾದಿಗಳನ್ನು ಮಾಡುವುದು, ನೊಂದವರಿಗೆ ಸಾಂತ್ವನ ಹೇಳುವುದು ಇವೇ ಮೊದಲಾದ ಮಾನವೀಯ ಗುಣಗಳೇ ಪುಣ್ಯಕಾರ್ಯಗಳು. ಇಂತಹ ಪುಣ್ಯಕಾರ್ಯ ಮಾಡಿದವರಿಗೆ ಸ್ವರ್ಗಪ್ರಾಪ್ತಿಯಾಗುವುದು. ಮತ್ತೆ ಮನುಷ್ಯಜನ್ಮ ದೊರೆಯುವುದಿಲ್ಲ. ಪರರ ಪೀಡೆಯೇ ಪಾಪ! ಪರಸ್ತ್ರೀವ್ಯಾಮೋಹ, ಪರರ ದ್ರವ್ಯ ಧನವನ್ನು ನುಂಗುವುದು, ಪರರ ಆಸ್ತಿಗಾಗಿ ಜಗಳ, ಕೊಲೆ, ಅನಾಥರನ್ನು ಅಂಗವಿಕಲರನ್ನು ಹೀಯಾಳಿಸುವುದು. ಅಹಂಕಾರದಿಂದ ಮೆರೆಯುವುದು. ಒಬ್ಬರ ಉತ್ಕರ್ಷವನ್ನು ಸಹಿಸದೆ ಅಸೂಯೆ ಪಡುವುದು. ನಾಸ್ತಿಕರಾಗಿ ಯಜ್ಞಯಾಗಾದಿಗಳನ್ನು ಕೆಡಿಸುವುದು, ಸಜ್ಜನರನ್ನು ಸಂಕಟಕ್ಕೆ ಗುರಿಪಡಿಸುವುದು, ಇವೇ ಮೊದಲಾದ ಕಾರ್ಯಗಳಿಂದ ಪಾಪ ಸಂಗ್ರಹವಾಗುತ್ತದೆ. ಅವನಿಗೆ ನರಕವೇ ಗತಿ! ಅಣ್ಣಾ ನೀನು ಸಾಮಾನ್ಯನಲ್ಲ. ಶಿವಭಕ್ತನು, ಮಾತೃ ಸೇವಾದುರಂಧರನು, ಪ್ರಜಾಪಾಲಕನು ಒಂದು ಕಪ್ಪು ಚುಕ್ಕೆ ಚಿತ್ತಾರವನ್ನು ಕೆಡಿಸುವಂತೆ ನಿನ್ನಲ್ಲಿರುವ ಒಳ್ಳೆಯ ಗುಣಗಳನ್ನು ಒಂದೇ ಒಂದು ಕೆಟ್ಟ ಗುಣ ನುಂಗಬಾರದು, ಪಾಪಿಗಳಿಗೆ ಮುಕ್ತಿಯೇ ಇರುವುದಿಲ್ಲ. ತಮ್ಮ ಪಾಪಕ್ಕೆ ತಕ್ಕಂತೆ ಪ್ರಾರಬ್ಧಕ್ಕನುಸಾರವಾಗಿ ದುಃಖಗಳನ್ನುಭವಿಸುತ್ತಾ ಪ್ರಾಣಿಗಳಾಗಿ ಹುಟ್ಟುವರು, ನಾನಾ ಜನ್ಮಗಳನ್ನು ತಾಳುವರು. ಪರಮಾತ್ಮನ ಅವಕೃಪೆಗೆ ಪಾತ್ರರಾಗುವರು. ಅಗ್ರಜಾ ನೀವು ಒಬ್ಬರೇ ಇದ್ದಾಗ ಕೂಲಂಕಷವಾಗಿ ವಿಚಾರ ಮಾಡಿ, ನಿಮಗೆ ಜ್ಞಾನೋದಯವಾಗುತ್ತದೆ.”
“ವಿಭೀಷಣ ನಿನ್ನ ಉಪದೇಶವನ್ನು ಕೇಳವಷ್ಟು ವ್ಯವಧಾನ ನನಗಿಲ್ಲ. ನಾನೀಗಲೇ ಮಂತ್ರಿಗಳು ಸೇನಾಧಿಪತಿಗಳೊಂದಿಗೆ ಚರ್ಚಿಸಿ ಯುದ್ಧಕ್ಕೆ ಸಜ್ಜುಗೊಳಿಸಬೇಕು. ನಿನಗೆ ಅಣ್ಣನೆಂಬ ಗೌರವ ವಿಶ್ವಾಸವಿದ್ದರೆ, ನನ್ನೊಂದಿಗಿದ್ದು ನನಗೆ ಸಹಾಯಕನಾಗಿ ಯುದ್ಧ ಮಾಡು; ಯುದ್ಧದಲ್ಲಿ ಸತ್ತರೆ ವೀರಸ್ವರ್ಗ! ಗೆದ್ದರೆ ಈ ಲಂಕೆಯ ಸಾರ್ವಭೌಮನಾಗಿ ನಿನ್ನಿಷ್ಟದಂತೆ ಸೀತೆಯನ್ನು ಒಪ್ಪಿಸುತ್ತೇನೆ. ರಾಮನು ತನ್ನ ತಪ್ಪೊಪ್ಪಿಕೊಂಡು ಶರಣಾದ ಮೇಲೆ ಅಲ್ಲಿಯವರೆಗೆ ಯಾರೇ ಏನು ಹೇಳಿದರೂ ನಾನು ಕೇಳುವುದಿಲ್ಲ.”
“ಇಷ್ಟು ಹೇಳಿದರೂ ನಿನಗೆ ನನ್ನ ಮಾತು ಪಥ್ಯವಾಗಲಿಲ್ಲ. ರಾಮನು ಶ್ರೀಮನ್ನಾರಾಯಣನ ಅಂಶ, ಅವನು ಶರಣಾಗುವುದಿಲ್ಲ. ತನ್ನ ಎದುರು ಬಂದವರನ್ನು ಶರಣಾಗಿಸುತ್ತಾನೆ. ನೀನೊಮ್ಮೆ ಅವನನ್ನು ನೋಡು ಅವನ ಕಂಗಳ ಕಾಂತಿಗೆ, ವದನದ ತೇಜಸ್ಸಿಗೆ ಎಂಥವರಿಗೂ ಭಕ್ತಿ ಮೂಡುತ್ತದೆ. ತಮಗರಿವಿಲ್ಲದೆ ಅವನ ಪಾದ ಸೇವಕರಾಗುತ್ತಾರೆ”
“ಥೂ ಹೇಡಿ! ನೀನು ಸರಿ! ರಾಮನಿಗೆ ಪಾದ ಸೇವಕನಾಗಿರುವುದಕ್ಕೆ ಅದಕ್ಕೆ ಕಾಯುತ್ತಿದ್ದೀಯಾ. ನನ್ನ ಲಂಕೆಯ ಮೇಲೆ, ನನ್ನ ಸಿಂಹಾಸನದ ಮೇಲೆ ನಿನ್ನ ಕಣ್ಣು, ಅದಕ್ಕೆ ಈ ಸೋಗು; ಆಷಾಡಭೂತಿತನ, ರಾವಣ ಯುದ್ಧದಲ್ಲಿ ಸೋಲಲಿ, ಅವನ ವಂಶ ನಿರ್ವಂಶವಾಗಲಿ, ನನಗೂ ನನ್ನ ಮಕ್ಕಳಿಗೂ ಈ ರಾಜ್ಯ ಕೋಶ, ಸಂಪತ್ತು ನನಗೆ ಸಿಗುತ್ತದೆ ಎಂದು ಕನಸು ಕಾಣುತ್ತೀದ್ದೀಯಾ. ಶ್ರೀರಾಮನ ಪಕ್ಷವನ್ನು ಸೇರಿ ನಮ್ಮ ಬಲಾಬಲಗಳನ್ನು ತಿಳಿಸಿ ಹೇಗಾದರೂ ಸರಿ, ನನ್ನನ್ನು ಸೋಲಿಸಬೇಕೆಂದು ಹಂಚಿಕೆ ಹಾಕಿದ್ದೀಯಾ, ಆಯಿತು, ತೊಲಗಿಹೋಗು. ರಾಮನ ಪಕ್ಷ ಸೇರಿಕೋ ನನ್ನ ಕಣ್ಣೆದುರಿಗಿರಬೇಡ. ಕೊಡಲಿಯ ಕಾವೇ ಮರಕ್ಕೆ ಮೃತ್ಯು ಎನ್ನುವಂತೆ ನಮ್ಮ ವಂಶಕ್ಕೆ ನೀನೊಬ್ಬ ಕಳಂಕ ತರಲು ಹುಟ್ಟಿದ್ದೀಯಾ, ಹೋಗು ತಮ್ಮನೆಂದು ನಿನಗೆ ಜೀವದಾನ ಮಾಡಿದ್ದೇನೆ” “ಆಯಿತು ನಿಮ್ಮ ಇಷ್ಟವಿದ್ದಂತಾಗಲಿ ಪರಮಾತ್ಮನ ಇಚ್ಚೆ ಇದ್ದಂತಾಗಲಿ. ಅಣ್ಣಾ ನನಗೆ ಆಶೀರ್ವದಿಸಿ ಒಂದು ಮಾತು ತಿಳಿದುಕೊಳ್ಳಿ ನೀವು ಹೇಳಿದಂತೆ ನಾನು ಗೋಮುಖವ್ಯಾಘ್ರನಲ್ಲ. ತ್ರಿಕರಣ ಪೂರ್ವಕವಾಗಿಯೂ ನಾನು ನಿಮ್ಮ ಒಳ್ಳೆಯದನ್ನೇ ಬಯಸುತ್ತೇನೆ. ರಾವಣೇಶ್ವರನಿಗೆ ಒಳ್ಳೆಯ ಬುದ್ಧಿ ದಯಪಾಲಿಸಲಿ, ಈ ಲಂಕೆ ಹಿಂದಿನಂತೆ ಸುಖ ಸಮೃದ್ಧಿಯಿಂದ ಕೂಡಿರಲಿ ಎಂದು ಸರ್ವಥಾ ಬಯಸುತ್ತೇನೆ, ಬರುತ್ತೇನೆ ಅಣ್ಣ” ಕಾಲುಗಳನ್ನು ಮುಟ್ಟಿ ಹಿಂದೆ ತಿರುಗಿಯೂ ನೋಡದೆ ಅರಮನೆಯನ್ನು ದಾಟಿದನು.
*****
ಮುಂದುವರೆಯುವುದು