ಕಳವಳದ ಮೂರ್ತಿ ತಾ ಕಂಗೆಟ್ಟು ನಿಂತಿಹುದು
ತಳಮಳಕೆ ತೀರವೆಲ್ಲಿರುವದವನ
ಹುಳುವು ಹುಪ್ಪಡಿಗಿಂತ ಕೀಳಾದಬಾಳುವೆಯ
ಅಳುತಬಾಳುತ್ತಿಹನು ಸಾವಬಯಸಿ
ಗೇಣು ಹೊಟ್ಟೆಯ ತುಂಬೆ ಬೊಟ್ಟು ಬಟ್ಟೆಯ ಹೂರೆಯೆ
ಪ್ರಾಣವನೆ ಒಪ್ಪಿಸಿಹ ಸಿರಿವಂತಗೆ
ಗಾಣದೊಳು ಸಿಕ್ಕಿರುವ ಕಬ್ಬಿನೊಲು ಜಬ್ಬಾಗಿ
ತ್ರಾಣವೆಲ್ಲವ ಕಳೆದುಕೊಂಡಿರುವನು
ರೋಮರೋಮಗಳಲ್ಲಿ ತೂರಿ ಬರುತಿದೆ ನೋವು
ಭೂಮಂಡಲದಿ ಅವಗೆ ತಾಣವಿಲ್ಲ
ಸಾಮಗಾನದಿ ಶಾಂತಿದೇವತೆಯ ಕರೆಯುವರು
ಪ್ರೇಮವಿರಹಿತ ಪೃಥ್ವಿಗೆಲ್ಲಿ ಶಾಂತಿ ?
ಸತ್ತಿಹರು ಅಜ್ಜಾನು ಅಬ್ಜಜನ ನರಳುತ್ತ
ಬಿತ್ತಿಹರು ಜನಮನದಿ ಕ್ರಾಂತಿಬೀಜ
ಹೊತ್ತಲಿದೆ ಆರದದು ಎಂದಿಗೂ ಎಚ್ಚರವು
ನೆತ್ತಿಯಲಿ ಕಣ್ಣುಳ್ಳ ಧನದೊಡೆಯನೇ
ಮಾನವನೆ ನಿನೊಬ್ಬ ? ಮಾನವರ ಮರುಕವನು
ನೀನರಿಯದಿಹೆಯಲ್ಲ ಕಲ್ಲೆದೆಯವ
ಜನ್ನದಲಿ ಆಹುತಿಯ ಹಾಕುತಿರುವರು ಅವರು
ಧನ್ಯರಾಗುವರವರು ಸಿದ್ದಿಯಲ್ಲಿ
*****
(ಮೈಕೆಲ್ ಆಂಜಲೋನ Dying slave ಎಂಬ ಚಿತ್ರ ನೋಡಿ)