ಸೀತಾಪಹರಣ
ಅರಮನೆಯ ಸಕಲ ಸೌಭಾಗ್ಯ ಸುಖಸಂತೋಷಗಳನ್ನು ಮರೆತು ಸೀತಾರಾಮ ಲಕ್ಷ್ಮಣರು ಕಾಡಿನಲ್ಲಿ ಪರಿಸರದ ಮಡಿಲಿನಲ್ಲಿ ಸಾಗಿಸುತ್ತಿದ್ದರೂ ಕಾಡು ಎಷ್ಟೇ ಸುಂದರವಾಗಿದ್ದರೂ ದುಷ್ಟ ಪ್ರಾಣಿಗಳ ದುಷ್ಪರಾಕ್ಷಸರ ಆವಾಸ್ಥಾನ ಕಿಡಿಗೇಡಿಗಳಾದ ರಾಕ್ಷರು ತಮ್ಮ ಪಾಡಿಗೆ ತಾವಿರದ ಸಜ್ಜನರನ್ನು ಸತಾಯಿಸಿ, ಹಿಂಸಿಸಿ ವಿಚಿತ್ರವಾದ ಆನಂದ ಪಡುತ್ತಿದ್ದರು. ಋಷಿಪುಂಗವರು ಈ ದಾನವರ ಕಾಟ ತಾಳಲಾರದೆ ಎಂದಿಗೆ ಇವರ ಕಥೆ ಮುಗಿಯುವುದೋ ಎಂದು ಪುರುಷೋತ್ತಮನ ದಾರಿ ಕಾಯುತ್ತಿದ್ದರು. ಶ್ರೀರಾಮನ ಆಗಮನದಿಂದ ಅವರೆಲ್ಲ ಸಂತಸ ಪಟ್ಟು ದುಷ್ಟ ಸಂಹಾರಕ್ಕಾಗಿ ಕ್ಷಣಗಣನೆ ಮಾಡುತ್ತಿದ್ದರು.
ಚಿತ್ರಕೂಟದಲ್ಲಿ ವಾಸಮಾಡುತ್ತಿದ್ದಾಗ ನಡೆದ ಘಟನೆಯಿದು. ಹಿಂದೆ ಜಯಂತನೆಂಬ ನಾಮವುಳ್ಳ ಯಕ್ಷನು ಅತ್ರಿ ಮುನಿಯ ಶಾಪದಿಂದ ಕಾಕಾಸುರನೆಂಬ ರಾಕ್ಷಸನಾಗಿದ್ದನು. ಒಂದು ದಿನ ಸೀತೆಯ ಸುಂದರ ರೂಪವನ್ನು ಕಂಡು, ಘೋರರೂಪವನ್ನು ತಾಳಿ ಸೀತೆಯನ್ನು ಕುಕ್ಕಲು ಬರಲು ಭಯದಿಂದ ರಾಮನನ್ನು ಬಿಗಿದಪ್ಪಿದಳು. ಆಗ ಶ್ರೀ ರಾಮನು ಅಲ್ಲೇ ಬಿದ್ದಿದ್ದ ದರ್ಭೆಯನ್ನು ಮಂತ್ರಿಸಿ ಅದರ ಮೇಲೆ ಪ್ರಯೋಗಿಸಲು ಕಾಕಾಸುರನ ಬೆನ್ನಟ್ಟಿತು. ಅವನು ಮೂರು ಲೋಕಗಳನ್ನು ಹೊಕ್ಕರೂ ಬಿಡಲಿಲ್ಲ. ಕೊನೆಗೆ ಶರಣಾಗತನಾಗಿ ಪ್ರಾಣಭಿಕ್ಷೆ ಬೇಡಿದನು. ಆಗ ರಾಮಚಂದ್ರನು ಆಕಾಕಾಸುರನ ಒಂದು ಕಣ್ಣನ್ನು ಕಿತ್ತು ತೆಗೆದು ಒಂದೇ ಕಣ್ಣು ಎರಡೂ ಕಡೆ ಕಾಣುವಂತೆ ಮಾಡಿದನು. ಅಂದಿನಿಂದ ಕಾಗೆಗೆ ಒಂದೇ ಕಣ್ಣಾಯಿತು. ಶಾಪವಿಮುಕ್ತನಾದ ಜಯಂತನು ಸ್ವರ್ಗದ ದಾರಿ ಹಿಡಿದನು.
ಮತ್ತೊಮ್ಮೆ ಮೂವರೂ ದಂಡಕಾರಣ್ಯದಲ್ಲಿ ಸಂಚರಿಸುವಾಗ ವಿರಾಧನೆಂಬ ರಾಕ್ಷಸನು ಸೀತಾದೇವಿಯನ್ನು ನೋಡಿ ಮೋಹಿತನಾಗಿ ಮೂವರನ್ನು ಹಿಡಿದು ರಾಮನನ್ನು ಬಲಗಡೆ; ಲಕ್ಷಣನನ್ನು ಎಡಗಡೆ ಹೆಗಲ ಮೇಲೆ, ಜಾನಕಿಯನ್ನು ತಲೆಯ ಮೇಲೆ ಕುಳ್ಳಿರಿಸಿ, ದಕ್ಷಿಣದಿಕ್ಕಿಗೆ ಹೊರಟನು. ಶ್ರೀರಾಮನ ಕಣ್ಸನ್ನೆಯ ಮೇರೆಗೆ ಇಬ್ಬರೂ ಒಂದೊಂದು ಭುಜಗಳನ್ನು ಛೇಧಿಸಲು ಅವನು ಜಾನಕಿಯನ್ನು ಕೆಳಗಿಳಿಸಿ ಮೂವರನ್ನು ನುಂಗಲು ಬಾಯಿತೆರೆದನು. ಆಗ ಶ್ರೀರಾಮನು ಬ್ರಹ್ಮಾಸ್ತ್ರದಿಂದ ಶಿರವನ್ನು ಕತ್ತರಿಸಿದನು. ಆಗ ಅವನು ಗಂಧರ್ವರೂಪಧರಿಸಿ ಮೂವರಿಗೂ ನಮಸ್ಕರಿಸಿ ಸ್ವರ್ಗಕ್ಕೆ ಹೋದನು. ಮುಂದೆ ಸೀತಾರಾಮಲಕ್ಷ್ಮಣರು ಶರಭಂಗ ಮುನಿಯ ಆತಿಥ್ಯಪಡೆದು ಅಗಸ್ತ್ಯ ಮುನಿಯ ಆಶ್ರಮ ಪ್ರವೇಶಿಸಿದರು. ಅಗಸ್ತ್ಯರ ತಪಪ್ರಭಾವದಿಂದ ಆಶ್ರಮ ಸದಾಹಸಿರಾಗಿ ಪ್ರಾಣಿ ಪಕ್ಷಿಗಳು ಬೇಧವಿಲ್ಲದೆ ಸಹಚರರಾಗಿ ಕೂಡಿ ಆಡುತ್ತಿದ್ದವು. ಶ್ರೀರಾಮನು ಪತ್ನಿ ಸಮೇತವಾಗಿ ಒಂದು ಮಾಸ ಆಶ್ರಮದಲ್ಲಿ ವಾಸವಾಗಿದ್ದನು. ಅಗಸ್ತ್ಯರು ರಾಮಚಂದ್ರನಿಗೆ ಅನೇಕ ದಿವ್ಯಾಸ್ತ್ರಗಳನ್ನು ಕೊಟ್ಟು ಮಂತ್ರೋಪದೇಶ ಮಾಡಿ ಇದರಿಂದ ನೀಚರ ಸಂಹಾರ, ಜಗತ್ತಿಗೆ ಕಲ್ಯಾಣವಾಗುವುದೆಂದು ಆಶೀರ್ವದಿಸಿ ಕಳಿಸಿಕೊಟ್ಟರು. ಶ್ರೀರಾಮರು ಅವನ್ನೆಲ್ಲಾ ಪರಿಗ್ರಹಿಸಿ ಪಂಚವಟಿ ಸೇರಿದರು.
ಪಂಚವಟಿಯತ್ತ ಬರುವಾಗ ವಿಚಿತ್ರ ಪಕ್ಷಿವೇಷದ ಖಗವನ್ನು ಕಂಡು ನಮಸ್ಕರಿಸಲು “ನೀವು ಯಾರು ? ಎಲ್ಲಿಂದ ಬಂದಿರಿ? ಎಂದು ಕೇಳಿತು. ಶ್ರೀರಾಮನು ಪೂರ್ವಾಪರ ವಿಷಯ ತಿಳಿಸಲು ದಶರಥನ ಮರಣದ ಸುದ್ದಿ ಕೇಳಿ ಕಣ್ಣೀರು ಸುರಿಸಿದನು. ಆಗ ಶ್ರೀರಾಮನು “ತಾವು ಯಾರು? ನಮ್ಮ ತಂದೆಯವರ ಪರಿಚಯ ಹೇಗಾಯಿತೆಂದು?” ವಿನಯದಿಂದ ಕೇಳಲು ಖಗವು “ಕಶ್ಯಪನ ಏಳನೇ ಹೆಂಡತಿ ವಿನುತೆಗೆ, ಆರುಣ, ಗರುಡ ಎಂಬ ಇಬ್ಬರು ಮಕ್ಕಳು, ಅರುಣನು ಸೂರ್ಯನಿಗೆ ವಾಹನವಾದನು. ಗರುಡನು ವಿಷ್ಣುವಿನ ವಾಹನವಾದನು. ಅರುಣನಿಗೆ ಸಂಪಾತಿ, ಜಟಾಯು ಎಂಬ ಇಬ್ಬರು ಮಕ್ಕಳು. ನಾನೇ ಜಟಾಯು, ನಾವಿಬ್ಬರೂ ಇಂದ್ರನ ಹತ್ತಿರ ಸೇವಕರಾದೆವು, ರಾಕ್ಷಸರ ಕಿರುಕುಳ ಹೆಚ್ಚಾದಾಗ ನಿಮ್ಮ ತಂದೆಯಾದ ದಶರಥನ ಸಹಾಯದಿಂದ ಇಂದ್ರನು ನಿಶಾಚರರಾದ ವಿವಾತ, ಕವಚರನ್ನು ಕೊಂದು ಹಾಕಿದನು. ನಿಮ್ಮ ತಂದೆಯವರ ಸಹಾಯವನ್ನು ಮರೆಯುವಂತಿಲ್ಲ; ಅಂದಿನಿಂದ ನಾನೂ ನಿನ್ನ ತಂದೆಯವರು ಒಡಹುಟ್ಟಿದವರಿಗಿಂತ ಹೆಚ್ಚಾದೆವು, ಮುಂದೆ ನಾವು ಬೇರೆ ಬೇರೆಯಾದೆವು. ನನ್ನ ಸ್ನೇಹಿತನ ಮಗನಾದ ನಿನ್ನನ್ನು ಕಂಡು ಸ್ನೇಹಿತನನ್ನು ಕಂಡಷ್ಟೇ ಆನಂದವಾಯಿತು. ಪಿತೃವಾಕ್ಯ ಪರಿಪಾಲಕನಾದ ನಿನಗೆ ಸಹಾಯ ಮಾಡುವುದು ನನ್ನ ಪೂರ್ವಜನ್ಮ ಸುಕೃತ. ನೀವು ನಿರ್ಭಯದಿಂದ ಈ ಪಂಚವಟಿಯಲ್ಲಿರಿ. ನಿಮ್ಮ ಸಹಾಯಕ್ಕೆ ನಾನಿರುತ್ತೇನೆಂದು” ಆಶ್ವಾಸನೆ ನೀಡಿತು. ಗೋದಾವರಿ ನದಿ ತೀರದ ಪಂಚವಟಿಯಲ್ಲಿ ಪರ್ಣಶಾಲೆಯನ್ನು ಕಟ್ಟಿಕೊಂಡು ಮೂವರು ಸುಖದಿಂದ ಇರುತ್ತಿರಲು ಬ್ರಹ್ಮರ್ಷಿಗಳಲ್ಲಿ ಶ್ರೇಷ್ಠರಾದ ಜಬಾಲಿ ಋಷಿಗಳ ದರ್ಶನವಾಯಿತು. ಅವರು ಶ್ರೀರಾಮನಿಗೆ ಪೂರ್ವಜರಾದ ನಳ, ಹರಿಶ್ಚಂದ್ರರ ಕಥೆಗಳನ್ನು ಅವರು ಪಟ್ಟ ಕಷ್ಟವನ್ನು ವರ್ಣಿಸಿ ಸಮಾಧಾನ ಮಾಡಿದರು.
ಒಂದು ದಿನ ಲಕ್ಷ್ಮಣನು ಕಂದಮೂಲಗಳನ್ನು ತರಲು ಅರಣ್ಯಕ್ಕೆ ಹೋದಾಗ ಆಕಾಶ ಮಾರ್ಗದಿಂದ ಒಂದು ಖಡ್ಗವು ಇಳಿದು ಬರುತ್ತಿರುವುದರಿಂದ ನೋಡಿ ಲಕ್ಷ್ಮಣನು ಅದನ್ನು ತೆಗೆದುಕೊಂಡು ಅಲ್ಲಿಯೇ ತಪಸ್ಸು ಮಾಡುತ್ತಿದ್ದ ಶೂರ್ಪನಖಿಯ ಮಗನಾದ ಜಂಬೂಕುಮಾರನು ಹತನಾದನು. ಅದನ್ನು ಕಂಡು ಸೌಮಿತ್ರಿಯು ತನಗೆ ಬ್ರಹ್ಮಹತ್ಯಾದೋಷ ಪ್ರಾಪ್ತವಾಯಿತೆಂದು ಚಿಂತಿಸುತ್ತಿರಲು ಅಗಸ್ತ್ಯಮುನಿಗಳು ಬಂದು “ಅವನು ರಾಕ್ಷಸನು ತನ್ನ ಮಾವ ರಾವಣನಿಗಿಂತಲೂ ಬಲಿಷ್ಠನಾಗಿ ಲಂಕೆಯನ್ನು ಪಡೆಯಬೇಕೆಂದು ತಪವನ್ನಾಚರಿಸುತ್ತಿದ್ದನು. ಒಂದು ವೇಳೆ ಆ ಖಡ್ಗವು ಜಂಬೂಕುಮಾರನಿಗೆ ದೊರೆತಿದ್ದರೆ ರಾವಣನಿಗಿಂತಲೂ ಹೆಚ್ಚು ಕ್ರೂರಿಯೂ ನೀಚನಾಗುತ್ತಿದ್ದನೆಂದು ಲೋಕಕಂಟಕನಾಗುತ್ತಿದ್ದನೆಂದು ಅವನನ್ನು ಸಂಹರಿಸಿದ್ದು ಒಳ್ಳೆಯದಾಯಿತೆಂದು ಹೇಳಿ ಸಮಾಧಾನ ಪಡಿಸಿದರು. ತನ್ನ ಮಗನ ಮರಣವಾರ್ತೆಯನ್ನು ಕೇಳಿ ಶೂರ್ಪನಖಿ ಕಿಡಿಕಿಡಿಯಾದಳು. ರಾಮಲಕ್ಷ್ಮಣರ ಮೇಲೆ, ಸೇಡು ತೀರಿಸಬೇಕೆಂದು ಹಲ್ಲಲ್ಲು ಕಡಿಯುತ್ತಾ ಪರ್ಣಕುಟಿಯನ್ನು ಹುಡುಕುತ್ತಾ ಬಂದಳು. ಪರ್ಣಕುಟಿಯಲ್ಲಿ ರಾಮಲಕ್ಷ್ಮಣರ ದಿವ್ಯ ಮಂಗಳ ಮೂರುತಿಯನ್ನು ಕಂಡು, ಸೀತಾಮಾತೆಯ ದಿವ್ಯ ಸೌಂದರ್ಯವನ್ನು ದಂಗು ಬಡಿದು ನಿಂತಳು. ಜಗತ್ತಿನಲ್ಲಿ ಇಷ್ಟೊಂದು ಸುಂದರರಾದ ಪುರುಷರು ಇರುವರೇ. ಆಶ್ಚರ್ಯಚಕಿತಳಾಗಿ ಅವರ ರೂಪಕ್ಕೆ ಮಾರುಹೋಗಿ ಕಾಮಪೀಡಿತಳಾಗಿ, ಇವರನ್ನು ವಶಮಾಡಿಕೊಳ್ಳಲು ತನ್ನ ರಾಕ್ಷಸಿಯ ರೂಪ ತೊರೆದು ಉತ್ತಮ ಸ್ತ್ರೀರೂಪ ಧರಿಸಿದಳು. ನೋಡಿದವರು ಮರುಳಾಗಬೇಕು ಹಾಗೆ ಅಪ್ಸರೆಯರ ತರಹ ಶೃಂಗರಿಸಿಕೊಂಡು ರಾಮನ ಮುಂದೆ ನಿಂತು ಪ್ರಣಯ ಬಿಕ್ಷೆ ಬೇಡಿದಳು. ರಾಮನಾದರೋ ತಾನು ಮದುವೆಯಾಗಿರುವೆನೆಂದು, ಏಕಪತ್ನಿವ್ರತಸ್ಥನೆಂದು ಪರ್ಣಶಾಲೆಯಲ್ಲಿ ನನಗಿಂತಲೂ ಸುಂದರನಾದ ನನ್ನ ತಮ್ಮನಿದ್ದಾನೆ. ಅವನನ್ನು ವರಿಸು” ಎಂದು ವಿನೋದಕ್ಕಾಗಿ ಹೇಳಿದನು. ಶೂರ್ಪನಖಿಯು ರಾಮನನ್ನು ಬಿಟ್ಟು ಲಕ್ಷ್ಮಣನ ಬೆನ್ನು ಹತ್ತಿದಳು. ತನ್ನನ್ನು ಮದುವೆಯಾಗೆಂದು ಪೀಡಿಸ ಹತ್ತಿದಳು. ಲಕ್ಷ್ಮಣನು ಸಾಮದಾನ ಬೇಧದಿಂದ ಅವಳನ್ನು ಸಾಗಹಾಕಲು ಪ್ರಯತ್ನಿಸಿದನು, ಕೆರಳಿದ ಶೂರ್ಪನಖಿ ಮುನಿದು ಮಾರಿಯ ಅವತಾರ ತಾಳಿ ಇದಕ್ಕೆಲ್ಲಾ ಕಾರಣ ಈ ಸೀತೆ, ಸೀತೆಯಿರುವುದರಿಂದ ಇವರು ತನ್ನನ್ನು ಮದುವೆಯಾಗಲು ಹಿಂಜರಿಯುತ್ತಿದ್ದಾರೆಂದು ನನ್ನ ಸುಖಕ್ಕೆ ಅಡ್ಡಿಯಾದ ಇವಳನ್ನು ಮುಗಿಸಬೇಕೆಂದು ಸೀತೆಯನ್ನು ಕೊಲ್ಲಲು ಹೋದಳು, ಇವಳ ಹಾವಭಾವ ನಡೆನುಡಿಗಳಿಂದ ಇವಳು ಸಾಮಾನ್ಯ ಸ್ತ್ರೀಯಲ್ಲ, ರಕ್ಕಸಿಯೆಂದು ತಿಳಿದು ಸ್ತ್ರೀಹತ್ಯೆ ಮಾಡಬಾರದೆಂದು ಅವಳ ಕಿವಿ, ಮೂಗುಗಳನ್ನು ಕೊಯ್ದನು. ಅವಳು ಚೀರಾಡುತ್ತಾ ಖರರಾಕ್ಷಸನ ಬಳಿಗೆ ಹೋಗಿ ನಡೆದ ಸಂಗತಿಯನ್ನು ವಿವರಿಸಿದಳು. ಅವರೆಲ್ಲಾ ಪಂಚವಟಿಯ ಮೇಲೆ ದಾಳಿ ಮಾಡಿದರು. ಆ ಸಂಗ್ರಾಮದಲ್ಲಿ ಖರ, ದೂಷಣ, ತ್ರಿಶಿರರೆಂಬ ಮೂವರು ರಾಕ್ಷಸರು ಮೃತರಾದರು. ಆಮೇಲೆ ಏನಾಯಿತೆಂದು ನಿಮಗೆ ಗೊತ್ತೇ ಇದೆ. ಶೂರ್ಪನಖಿಯ ಮಾತುಗಳನ್ನು ನಂಬಿ ಸತ್ಯಾಸತ್ಯತೆಗಳನ್ನು ಪರೀಕ್ಷಿಸದೆ ಮಾಯಾಜಾಲದಿಂದ ರಾಮಲಕ್ಷ್ಮಣರನ್ನು ಸೀತೆಯಿಂದ ದೂರ ಕಳಿಸಿ. ಸೀತೆಯನ್ನು ಕದ್ದು ತಂದಿರಿ, ರಕ್ಷಣೆಗಾಗಿ ಧಾವಿಸಿದ ಜಟಾಯುವಿನ ಪ್ರಾಣ ತೆಗೆದು, ಪುಷ್ಪಕ ವಿಮಾನದಲ್ಲಿ ಸೀತೆಯನ್ನು ತಂದು ಅಶೋಕವನದಲ್ಲಿಟ್ಟು ಗೋಳು ಹುಯ್ದುಕೊಳ್ಳುತ್ತಿರುವಿರಿ. ಇದು ನಿಮ್ಮ ಘನ ಕಾರ್ಯವೇ? ನಿಮ್ಮ ಹೆಸರಿಗೆ ಕಳಂಕ ತರುವ ಕೆಲಸ ಮಾಡಿರುವುದು ಧರ್ಮ ಸಮ್ಮತವೇ?”
“ಹಿಂದೆ ಸ್ವಯಂವರ ಕಾಲದಲ್ಲಿ ನಾನು ಸೀತೆಯಿಂದ ಅವಮಾನಿತನಾಗಿದ್ದೆ. ಕೆಲವು ದಿನಗಳಾದರೂ ಸೀತೆಯನ್ನು ಲಂಕೆಗೆ ಒಯ್ಯುವೆನೆಂದು ಪ್ರತಿಜ್ಞೆ ಮಾಡಿದ್ದೆ. ಅದಕ್ಕೆ ತಕ್ಕ ಸಮಯ ಕೂಡಿ ಬಂತು ಅಷ್ಟೆ”
“ಕಾಲ ಮಿಂಚಿಲ್ಲ. ಅಗ್ರಜಾ ಈಗಲಾದರೂ ಸೀತೆಯನ್ನು ಶ್ರೀರಾಮನಿಗೆ ಒಪ್ಪಿಸಿ ಶತ್ರುತ್ವವನ್ನು ತೊರೆದು ಮಿತ್ರರಾಗೋಣಾ”
“ಈ ರಾವಣ ಯಾರಲ್ಲೂ ಶರಣಾಗತನಾಗಿ ಮಿತೃತ್ವ ಪಡೆದಿಲ್ಲ. ಯುದ್ಧ ನಡೆಯಲಿ ಗೆದ್ದರೆ ಸೀತೆ ನನ್ನವಳು, ಸೋತರೇ ನೋಡೋಣಾ ; ಈಗ ಆ ಮಾತೆಲ್ಲಾ ಬೇಡ ಮಾತು ಮಾತಿಗೂ ನನ್ನದೇ ತಪ್ಪೆಂದು ವಾದಿಸುತ್ತೀಯಲ್ಲ. ಆ ನಿನ್ನ ರಾಮ ನನ್ನ ಪ್ರಾಣ ವಾಲಿಯನ್ನು ಮರದ ಮರೆಯಲ್ಲಿ ನಿಂದು ಕೊಂದನಲ್ಲ ಅದು ನ್ಯಾಯವೇ ಕ್ಷತ್ರಿಯ ಧರ್ಮವೇ ಹೇಳು ನೋಡೋಣಾ.”
“ಆಣ್ಣಾ ಪೂರ್ತಿಯಾಗಿ ವಿಷಯ ತಿಳಿಯದೆ ಮಾತನಾಡಬೇಡ, ವಾಲಿ, ಸುಗ್ರೀವರ ನಡುವೆ ಏನಾಗಿತ್ತೆಂದು ನಾನು ಹೇಳುತ್ತೇನೆ ಕೇಳು?”
*****
ಮುಂದುವರೆಯುವುದು