ಊರ ಮುಂದಿನ ಬಯಲಿನಲ್ಲಿ
ಇಹುದು ನಮ್ಮ ಶಾಲೆ
ಇದರ ಸುತ್ತ ಹಳ್ಳಿಯ ಜನರು
ಮಾಡುತಿಹರು ಕೊಳೆ
ಚಿಕ್ಕದಾದ ಹಳೆಯ ಕೆಂಪು
ಹೆಂಚು ಹಾಕಿರುವುದು
ಬೇಲಿ ಇಲ್ಲ ಬಯಲು ಜಾಗ
ಕತ್ತೆ ಸಂತೆ ನೆರೆವುದು
ತರಗತಿ ಇರುವವು ನಾಲ್ಕೇ ನಾಲ್ಕು
ಮೇಷ್ಟ್ರು ಮಾತ್ರ ಒಬ್ರೆ
ಹೇಳುವವರು ಕೇಳುವವರಿಲ್ಲದೆ
ಏನ್ ಹೇಳೂದು ದೇವ್ರೆ?
ನಮ್ಮ ಶಾಲೆಯ ಎಲ್ಲ ಮಕ್ಕಳು
ಒಂದೇ ಕ್ಲಾಸಲಿ ಕುಳಿತ್ರೆ
ಪಾಠ ಹೇಗೆ ತಲೆಗೆ ಹೋಗುವುದು
ಊದುತ್ತಿದ್ರೆ ಭಜಂತ್ರಿ?
ಗ್ರಂಥಾಲಯ ಕಂಪ್ಯೂಟರ್‌ಗಳು
ಇಲ್ಲಿ ಇರುವುದಿಲ್ಲ
ಕುಡಿಯುವ ನೀರು ಮೂತ್ರಾಲಯ
ಒದಗಿಸಿರುವುದಿಲ್ಲ
ಪರಿಕರಗಳಿಲ್ಲದ ಶಾಲೆಗಳಲ್ಲಿ
ಮಕ್ಕಳು ಕಲಿಯುವುದೇನನ್ನು?
ಸರ್ವಶಿಕ್ಷ ಅಭಿಯಾನಕೆ ನಾವು
ಸುಮ್ಮನೆ ಸುರಿವೆವು ಹಣವನ್ನು.
*****