ಮಧುಮಧುರವಾದ ಹಿರಿಹಗಲು ಒಂದು ಬೆಳಗಿತ್ತು ಅವನ ಸುತ್ತು.
ಹರ್ಷಾವತರಣ ಆನಂತ್ಯದಿಂದ ಪ್ರಭೆ ಬೀರಿದಂತೆ ಇತ್ತು.
ಬಂಗಾರನಗೆಯ ಹೊಂಗಾವಲಲ್ಲಿ ಮೆರೆದಿಹವು ಸುಖದ ಬೀಡು,
ಬಿಡುಗಡೆಯ ಪಡೆದ ಒಳಗಡೆಯ ಎದೆಯ ಹದಹದುಳವುಳ್ಳ ನಾಡು.
ಆದೇವದೇವನಾ ಸೋಮರಸವು ಮೈಗಿಳಿದ ಮತ್ತಿನಲ್ಲಿ
ಎಂದೆಂದು ತನ್ನ ದಿವ್ಯತೆಯಲುಳಿದು ಮುಳುಗಿಹುದು ಬೆಳಕಿನಲ್ಲಿ.
ಎಲ್ಲ ದೇವರಿಗೆ ಮುದ್ದುಬಹದು, ಬಲು ಸಲುಗೆಯಲ್ಲಿ ಬಳೆದು.
ಹಿಗ್ಗಿನೊಂದೆ ಕಾಯಕದೊಳಿಹುದು ಅದು ದೇವನಾಜ್ಞೆ ತಳೆದು.
ತನ್ನ ತಾನೆ ಆಳುವದು ತನ್ನ ಸ್ವಾನಂದದಲ್ಲಿ ಬಾಳಿ
ಅದರ ಬಲದ ಸ್ವಾರಾಜ್ಯಗಳಲಿ ಅರಸೊತ್ತು ತಾನೆ ತಾಳಿ.
ಎಲ್ಲ ರೂಪಗಳು ಯಾವ ಮೋದವನು ನೆಮ್ಮಿ ನೆಚ್ಚಿ ಇಹವು
ಕ್ಷಣ-ಕ್ಷಣಕು ಅಳಿವಂಥ ಕಾಲಕೂ ಬೆಚ್ಚಿಬೆದರದಿಹವು.
ಮುತ್ತಲರಿಯದೆಂದೆಂದು ಅದನ್ನು ಪ್ರತಿಕೂಲ ಸ್ಥಿತಿಯು ಕೂಡ.
ಇಂಥ ಸಹಜ ವಿಶ್ರಾಂತಿಯಲ್ಲಿ ಅದು ವಿಲಸಿಸುವದು ನೋಡ.
ಆ ಮರಣಕೌತಣವ ಕೊಡುವ ಮೈಯ ಕ್ಷಣಭಂಗುರತ್ವವಿಲ್ಲ.
ಅಡಿಗೊಮ್ಮೆ ಎಡವಿ ಭಯದಲ್ಲಿ ಇರುವ ಸಂಕಲ್ಪವಲ್ಲಿ ಸಲ್ಲ.
ಆ ರಾಗಭೋಗದಾವೇಗಗಳನು ಬಿಗಿಹಿಡಿವುದಲ್ಲಿ ಏಕೆ?
ಸಂತೃಪ್ತವಾದ ಸುಖದೊಂದು ತಕ್ಕೆ ಇರೆ ಬೇರೆ ಪುಲಕ ಬೇಕೆ?
ಅಬ್ಬಬ್ಬ ಏನು ಅದ್ಭುತದ ಓಟ, ಕುಡಿಬೆಂಕಿ ನೋಟ, ಕೂಗು
ತನಿಪ್ರಾಣದೂರ್ಮಿ ನಿಗಿನಿಗಿಯೆ ಹರಿವ ನೆತ್ತರಿನ ತುಂಬು ತೇಗು.
ಅದು ಇಹುದು ದೇವನಗೆಯಲ್ಲಿ ಒಗೆದ ನವರತ್ನನಗರದಲ್ಲಿ
ಒರಗಿಹುದು ಎದೆಗೆ ಬೆರಗಾಗಿ ಪ್ರೇಮ ಹರಿದಿರಲು ಆಗಿ ಬಳ್ಳಿ.
ಅದಕಾವ ಬಂಧ? ಸ್ವಚ್ಛಂದದಿಂದ ಆನಂದ ಕೀರ್ತಿಸುವದು;
ಬಿಸಿಲೊಡ್ಡು ಮೈಯ್ಸಿ, ಬೆಳುದಿಂಗಳುಣಿಸಿ, ಜ್ಯೋತಿಯನೆ ಮೂರ್ತಿಸುವದು.
*****