ಹಾಳು ಪಟ್ಟಣದ ಬಂಡೆಯ ಬಳಗದ
ಕೊರಗಿನ ಮೌನದ ಕೂಗನು ಕೇಳಿ!
೧
“ಹೇಳಲಿಕಾಗದ ಕಾಲದಿಂದಲೂ
ತಾಳಿ ಗಾಳಿ-ಮಳೆ ಚಳಿ-ಬಿರುಬಿಸಿಲು
ಸೊಗಸೇನನೊ ಬದುಕಿಗೆ ಬಯಸಿದೆವು,
ಹಗಲಿರುಳೂ ತಪದೊಳು ಬಳಲಿದೆವು….
ಆದರು ನಮಗಿಹ ಹೆಸರೇನು ?
ಬಂಡೆಯೆ ಅಲ್ಲವೆ ? ಬೇರೇನು ?”
೨
“ನಿಂದೆಡೆಯೊಳೆ ಅಲುಗಾಡದೆ ನಿಂದು
ಒಂದೆ ಮನದಿ ಮಾಡಿದ ತಪವಿಂದು
ನಮಗೇತಕೆ ಕೊಡದಿರುವುದೊ ಫಲವ!
ಕೇಳುವೆವಾರಲಿ ನೆರವಿನ ಬಲವ ?
ನಮಗಿಹ ‘ಬಂಡೆ’ಯ ಹೆಸರನ್ನು
ತವಿಸುವರಾರೂ ಬರರೇನು?”
೩
“ನಮ್ಮೊಡನೆಯೆ ನೆಲದೊಳು ಮೂಡಿದುವು,
ನಮ್ಮೊಂದಿಗೆ ತಪದೊಳು ಕೂಡಿದುವು,
ಎನಿತೆನಿತೋ ಘನತೆಯ ಪದವೊಂದಿ
ಜನದಲಿ ಹೊಸ ಹೊಸ ಹೆಸರನು ಹೊಂದಿ,
ಹೆಮ್ಮಯ ಕೀರ್‍ತಿಯ ಗಳಿಸಿದುವು
ನಮ್ಮಯ ಕುಲಬಂಧುಗಳೆ ಅವು!
೪
“ಹಂಪೆಯಧೀಶನ ಶ್ರೀಶಿವಲಿಂಗ !
ವಿಜಯನಗರ ಕೋಟೆಯ ಅಂಗಾಂಗ !
ಅರಮನೆ ಸಿರಿಮನೆ ಗಜ-ತುರಗಾಲಯ !
ಅರಸಿಯರಂತಃಪುರ ಗುರುನಿಲಯ !
ಹೆಸರಿಂತೆನಿತನೊ ಪಡೆದಿಹವು-
ನಮ್ಮಯ ಕುಲಬಂಧುಗಳೆ ಅವು !
೫
“ದೊರೆಗಳ ಶಾಸನವೊರೆಯುವುವೆನಿತೋ
ಗರತಿಯ ಬದುಕನು ಮೊರೆಯುವುವೆನಿತೋ !
ವೀರರ ಬಲುಹನು ಹಾಡುತಲೆನಿತೊ, ಉ-
ದಾರರ ಚಾಗವನಾಡುತಲೆನಿತೋ-
ಹೆಮ್ಮೆಯ ಹೆಸರನು ತಳೆದಿಹವು-
ನಮ್ಮಯ ಬಳಿಯಿದ್ದುವಲೆ ಅವು?
೬
“ವಿಜಯ ವಿಟ್ಠಲನ ಚಿತ್ರದ ತೇರು!
ಗುಡಿ ಗೋಪುರ ಮಂಟಪಗಳ ಕುಸುರು !
ಎನಿತು ಕಲಾಕೃತಿ ಅನಿತಕು ಹೆಸರು,
ನಮಗೇನಿರುವುದು ಬರಿ ಬಿಸಿಯುಸಿರು !
ಕೆಲವೆ ಕಾಲ ಬಾಳಿದರು ಅವು-
ಹೆಮ್ಮೆಯ ಹೆಸರನು ಬೆಳಗಿದುವು!
೭
“ಬಲ್ಲಿದರಾರೋ ಬಂದಿಲ್ಲಿಳಿಯುತ
ಇಲ್ಲಿಹ ನಮ್ಮವರನು ಎಚ್ಚರಿಸುತ
ಒಳ್ಳೆಯ ಒಳ್ಳೆಯ ರೂಪವ ಕೊಡಿಸಿ,
ಬಂಡೆಯೆಂಬ ಬರಿ ಹೆಸರನು ಬಿಡಿಸಿ,
ಮನ್ನಣೆಯೊಲವನು ಸಲ್ಲಿಸಿದರು-
ಧನ್ಯರಲ್ಲಿ ಅವರಡಗಿದರು ?
೮
“ಬರುವರೆ.. ಬರಲಿರುವರೆ…. ಯಾರಾದರು
ಮರಳಿ ರಾಜ್ಯವನ್ನು ಕಟ್ಟುವರೆ ?
ಅರಮನೆ-ಗುಡಿಗಳಿಗಿರದಿರೆ ಹೋಗಲಿ
ಸೆರೆಮನೆಗಾದರು ನಮ್ಮನು ಬಳಸಲಿ !
ಬರಲಿರುವರು ಬೇಗನೆ ಬರಲಿ-
ನಮಗೂ ಹೆಸರೊಂದನು ತರಲಿ!
* * *
ಹಾಳುಪಟ್ಟಣದ ಬಂಡೆಯ ಬಳಗದ
ಗೋಳಿನ ಮೌನದ ಕೂಗನು ಕೇಳಿ!
*****