ಸೃಷ್ಟಿ ಸೂಬಗನು ಮೊಗೆ ಮೊಗೆದು ಕುಡಿದು
ಮೌನದರಮನೆಯಲ್ಲಿ ಗರಿ ಬಿಚ್ಚಿದ ಕಥನ
ಹಿಮದೊಳಗಿನ ಬೆಂಕಿಯಂತೆ ಸಂತೈಸಿಕೊಂಡವನು
ಮಣ್ಣ ಕಣದಿಂದ ಮಿಡತೆಯಾಗಿ ಎದ್ದು ಬಂದವನು.
ಹುಲ್ಲು ಗರಿಕೆ ಬಿದಿರ ಮೇಳೆಯ ಕಾಡಿನ
ಜಿನುಗುವ ನೀರ ಒರತೆಯಾಗಿ
ಹುಟ್ಟು ಸಾವುಗಳ ಜಾಡು ಹಿಡಿದವನು
ಕಾಡಿನ ಏಕಾಂತದಲ್ಲಿ ಹಕ್ಕಿಗಳ ಹುಡುಕಾಡಿದವನು.
ಬೊಚ್ಚು ಬಾಯಿಯಲ್ಲಿ ಹಲ್ಲುಗಳು ಹುಟ್ಟಲು
ಗಿಡಮೂಲಿಕೆಗಳ ಶೋಧಿಸಿದವನು.
ಆಗಸದಲ್ಲಿ ಫೈಯಿಂಗ್ ಸಾಸರ್ಸ್ ಹಾರಿಸಿ,
ಮಾಯಾ ಲೋಕದಲ್ಲಿ ಚಂದ್ರನ ಚೂರು ಕಂಡವನು.
ಕಾಡಿನ ಸಂತನ ಪಯಣ ಹುಲಿಯೂರಿನಿಂದ
ಆರಂಭ, ಜುಗಾರಿ ಕ್ರಾಸ್‌ನಲ್ಲಿ ನಿಂತು ನಿರೀಕ್ಷಣೆ,
ಚಿದಂಬರ ರಹಸ್ಯ ಭೇದಿಸುವ ತವಕದಲ್ಲಿ
ಅಬಚೂರಿನ ಪೋಸ್ಟಾಫೀಸಿನ ನಿರ್ಣಾಯಕ ಘಟ್ಟದಲ್ಲಿ.
ಮನುಷ್ಯ ನಿರ್ಮಿತ ನಾಗರೀಕ ಗೋಡೆಗಳಾಚೆ
ತಬರನಿಗಾಗಿ ತುಡಿದು ಚಿಟ್ಟೆ ಏರೋಪ್ಲೇನ್ ಹತ್ತಿದವನು.
ಕಾರ್ವಾಲೋದಿಂದ ಕಿರಗೂರಿನ ಗಯ್ಯಾಳಿಯ ಬಳಿಗೆ
ಭಾವಲೋಕದಲ್ಲಿ ಬ್ರಹ್ಮಾಂಡ ಮೇಳ.
ದೇವರು ದರ್ಮಗಳಿಲ್ಲದ ಲೋಕದಲಿ ವಿಹಾರ,
ಚೀಂಕ್ರನಿಂದ ಅರಿಸ್ಟಾಟಲ್‌ನವರೆಗೆ
ಮನುಷ್ಯರ ಮಿಸ್ಸಿಂಗ್ ಲಿಂಕ್ಸ್ ಜೋಡಿಸುತ್ತ
ವಿಜ್ಞಾನಿ, ಋಷಿಗಳ ಮುಖಾಮುಖಿ ಮಾಡುತ್ತ
ಬದುಕು ಸವೆಸಿದ ನೀನು ಪ್ರವಾದಿಯಲ್ಲ,
ಸಂತನಲ್ಲದ ಸಂತ ಕಾಡಿನ ದಾವೇದಾರ.
*****