ಕಾಲಿಲ್ಲದ ಕುದುರೆಯೇರಿ ರಾವುತಿಕೆಯ ಮಾಡಬೇಕು
ಕಡಿವಾಣವಿಲ್ಲದ ಕುದುರೆಯ ನಿಲ್ಲಿಸಬೇಕು
ಕಾಲಿಲ್ಲದ ಕುದುರೆಯ ಬೀದಿಯಲ್ಲಿ ಕುಣಿಸಾಡಬಲ್ಲಡೆ
ಇಹಲೋಕಕ್ಕೆ ವೀರನೆಂಬೆ ಪರಲೋಕಕ್ಕೆ ಧೀರನೆಂಬೆ
ಆಮುಗೇಶ್ವರಲಿಂಗಕ್ಕೆ ಅಧಿಕನೆಂಬೆ
[ರಾವುತಿಕೆ-ಕುದುರೆಯ ಸವಾರಿ, ಧೀರ-ವಿವೇಕಿ, ಅಧಿಕ-ಹೆಚ್ಚು, ಮಿಗಿಲು]
ಆಮುಗೆ ರಾಯಮ್ಮನ ವಚನ ಇದು. ಇಲ್ಲಿರುವ ಸಂಕೇತ ತೀರ ಸ್ಪಷ್ಟವಾಗಿಯೇ ಇದೆ. ಕುದುರೆಯ ಸವಾರಿ ಕಷ್ಟವಿರಬಹುದು ಆದರೆ ಅಸಾಧ್ಯವಲ್ಲ. ಕಲಿತುಕೊಂಡರೆ ಯಾರು ಬೇಕಾದರೂ ರಾವುತರಾಗಬಹುದು, ಕಲಿತುಕೊಂಡರೆ ಯಾರು ಬೇಕಾದರೂ ಕುದುರೆಯನ್ನು ಕುಣಿಸಬಹುದು. ಓಡುತ್ತಿರುವ ಕುದುರೆಯನ್ನು ನಿಲ್ಲಿಸಲೂಬಹುದು.
ಆದರೆ ಮನಸ್ಸು ಅನ್ನುವುದು ಕಾಲಿಲ್ಲದ ಕುದುರೆ, ಅದರ ಸವಾರಿ (ರಾವುತಿಕೆ) ಸಾಧ್ಯವಾಗುವುದಾದರೆ;
ಮನಸ್ಸು ಅನ್ನುವುದು ಕಾಲಿಲ್ಲದ ಕುದುರೆ, ಆದ್ದರಿಂದಲೇ ಎತ್ತ ಹೋಗುವುದೆಂದು ಅರಿವಾಗದು. ಅದನ್ನು ನಿಲ್ಲಿಸಲು ಸಾಧ್ಯವಾಗುವುದಾದರೆ;
ಮನಸ್ಸು ಅನ್ನುವುದು ಕಾಲಿಲ್ಲದ ಕುದುರೆ, ಅದು ನಮ್ಮಿಚ್ಛೆಯಂತೆ ಬೀದಿಯಲ್ಲಿ, ಇತರರಿಗೂ ತಿಳಿಯುವಂತೆ, ಕುಣಿಸಲು ಆಗುವುದಾದರೆ-
ಆಗ ಅಂಥವರನ್ನು ಈ ಲೋಕದ ವೀರರು, ಪರಲೋಕದ ವಿವೇಕಿಗಳು (ಧೀರ-ಧೀ=ವಿವೇಕ, ಬುದ್ಧಿ) ಎನ್ನುತ್ತೇನೆ ಅನ್ನುವುದು ರಾಯಮ್ಮನ ಮಾತು.
ನಾವು ಬಹಳಷ್ಟು ಜನ ಮನಸ್ಸಿನ ಕುದುರೆಯ ಸವಾರರಲ್ಲ, ಕುದುರೆಗೆ ವಶರಾಗಿರುವುದು ಕೂಡ ಗೊತ್ತಿರದಂತೆ ಅದರಿಚ್ಛೆಯಂತೆ ನಡೆಯುತ್ತಾ ಸ್ವತಂತ್ರರೆಂಬ, ಧೀರರೆಂಬ, ವೀರರೆಂಬ ಭ್ರಮೆಯಲ್ಲಿರುವವರು, ಅಲ್ಲವೇ?
ಈ ವಚನದೊಂದಿಗೆ ಅಲ್ಲಮನ ಕೊಟ್ಟ ಕುದುರೆಯನೇರಬಹುದು ಅನ್ನುವ ಸುಪ್ರಸಿದ್ಧವಾದ ವಚನವನ್ನು ಜ್ಞಾಪಿಸಿಕೊಳ್ಳಿ. ಅಲ್ಲೂ ಕುದುರೆಯ ರೂಪಕ ಬಳಕೆಯಾಗಿದೆ, ಬೇರೆಯ ರೀತಿಯಲ್ಲಿ, ಬೇರೆಯ ಉದ್ದೇಶಕ್ಕೆ.
*****