ಇನ್ನೇವೆನಿನ್ನೇವೆನಯ್ಯಾ
ಎನ್ನ ಮನವೆಂಬ ಮರ್ಕಟನ ದಾಳಿ ಘನವಾಯಿತ್ತು
ಎನ್ನ ನಿಂದಲ್ಲಿ ನಿಲಲೀಯದು
ಕ್ಷಣದಲ್ಲಿ ಪಾತಾಳಕ್ಕೆ ಐದುತ್ತಿದೆ
ಕ್ಷಣದಲ್ಲಿ ಆಕಾಶಕ್ಕೆ ಐದುತ್ತಿದೆ
ಕ್ಷಣದಲ್ಲಿ ದಿಗ್ದೆಸೆಗೆ ಐದುತ್ತಿದೆ
ಕೂಡಲಸಂಗಮದೇವಾ
ಈ ಮನವೆಂಬ ಮರ್ಕಟನ ದಾಳಿಯನೆಂದಿಗೆ ನೀಗಿ ಎಂದು ನಿಮ್ಮೊಡಗೂಡುವೆನಯ್ಯಾ
[ಇನ್ನೇವೆನಿನ್ನೇವೆ – ಐದುತ್ತಿದೆ – ಹೊಂದುತ್ತಿದೆ]
ಬಸವಣ್ಣನ ವಚನ. ಮನಸ್ಸು ಕೋತಿ. ನನ್ನ ಮನಸ್ಸು ನನ್ನ ಮೇಲೆ ಮಾಡುವ ದಾಳಿ ಘನವಾದದ್ದು. ಏನು ಮಾಡಲೆಂದು ಹೊಳೆಯುತ್ತಿಲ್ಲ. ಈ ಕ್ಷಣದಲ್ಲಿ ಆಕಾಶಕ್ಕೆ ಮರುಕ್ಷಣಕ್ಕೆ ಪಾತಾಳ, ಕ್ಷಣದಲ್ಲಿ ದಿಕ್ಕುದಿಕ್ಕಿಗೆ ನಿಂದಲ್ಲಿ ನಿಲಲು ಆಗದಿದ್ದರೆ ಕೂಡಲಸಂಗಮನೊಡನೆ ಕೂಡುವುದು ಹೇಗೆ? ಕೋತಿ ಮನಸ್ಸಿನ ದಾಳಿ ಎಂದು ನಿಲ್ಲುತ್ತದೆ. ಈ ಪ್ರಶ್ನೆ ಬಹುಶಃ ನಮ್ಮೆಲ್ಲರದೂ ಹೌದು. ಮನಸ್ಸು ಕೋತಿಯಂತೆ ಅಲ್ಲ, ಮನಸ್ಸೇ ಕೋತಿ. ಹಾಗಿದ್ದ ಮೇಲೆ ಚಪಲತೆಯೇ ಅದರ ಗುಣ. ಅದನ್ನು ಒಂದೆಡೆಯಲ್ಲಿ ಸುಮ್ಮನೆ ಇರುವಂತೆ ಮಾಡುವುದು ಅಸಾಧ್ಯ ಮತ್ತು ಅಸಹಜ.
ಆದ್ದರಿಂದಲೇ ಮನಸ್ಸನ್ನು ನಿಯಂತ್ರಿಸುವ ಎಲ್ಲ ಪ್ರಯತ್ನಗಳೂ ಸಾಧನೆಗಳೂ ವ್ಯರ್ಥ. ಕೋತಿತನದ ಬಗ್ಗೆ “ಅರಿವು” ಇಟ್ಟುಕೊಳ್ಳುವುದೊಂದೇ ನಾವು ಮಾಡಬಹುದಾದ ಕೆಲಸ. ಇಲ್ಲಿ ಇನ್ನೊಂದು ಸೂಕ್ಷ್ಮವನ್ನೂ ಗಮನಿಸಿ, ನಾನು ಬೇರೆ ನನ್ನ ಮನಸ್ಸು ಬೇರೆ, ಏನು ಮಾಡಲಿ ಎಂಬ ತಹತಹ ಇಲ್ಲಿದೆ. ಹಾಗೆ ನೋಡಿದರೆ ನಾನು ಎಂಬುದು ನನ್ನ ಮನಸ್ಸಿಗಿಂತ ಭಿನ್ನ ಅಲ್ಲವೇ ಅಲ್ಲ. “ಮನಸ್ಸಿನಲ್ಲಿ ಯೋಚನೆಗಳು ಮೂಡುತ್ತವೆ” ಎನ್ನುವುದು ತಪ್ಪು, ಯೋಚನೆಗಳ ಮೊತ್ತವೇ ಮನಸ್ಸು ಎಂಬುದು ಸರಿ. ನಾನು ಆಕಾಶದೆತ್ತರ, ನಾನು ಚದರಿ ದಿಕ್ಕಾಪಾಲು ಎಂಬ ಯೋಚನೆಗಳೇ ನನ್ನ ಮನಸ್ಸು. ನಾನು ಮತ್ತು ಮನಸ್ಸು ಬೇರೆ ಬೇರೆ ಎಂದುಕೊಂಡದ್ದರಿಂದಲೇ ಮನಸ್ಸು ನನ್ನ ಮೇಲೆ ದಾಳಿ ಮಾಡುತ್ತಿದೆ ಅನ್ನಿಸುತ್ತದೆ.
ನಾನು ಬೇರೆಯಲ್ಲ, ನನ್ನ ಮನಸ್ಸು ಬೇರೆಯಲ್ಲ ಎಂದು ತಿಳಿದಾಗ ಕೋತಿ ಮನಸ್ಸಿನ ದಾಳಿ ನಿಲ್ಲುತ್ತದೆ, ಅದು ಯಾವಾಗ ಎಂಬುದೇ ಪ್ರಶ್ನೆ. ಆದ್ದರಿಂದಲೇ “ದಾಳಿಯ ನಂದಿಗೆ ನೀಗಿ” ಎಂಬ ಮಾತು ಬಂದಿದೆ. ಮನಸ್ಸಿನ ಸ್ವರೂಪದ ಬಗ್ಗೆ ಅರಿವು ಮೂಡಿದ ಕ್ಷಣವೇ ಮನಸ್ಸಿನ ಕೋತಿತನ ಮಾಯವಾಗುತ್ತದೆ, ಕೂಡಲಸಂಗಮ ದೊರೆಯುತ್ತಾನೆ.
*****