ಅರಿವಿಂಗೆ ಸಿಕ್ಕದುದ ನೆನೆಯಲಮ್ಮಬಹುದೆ ಅಯ್ಯಾ
ನೆನಹಿಂಗೆ ಬಾರದುದ ಕಾಂಬುದು ಹುಸಿ
ಮುಟ್ಟಿ ಪೂಜಿಸುವ ಮಾತು ಮುನ್ನವೇ ದೂರ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು
[ನೆನೆಯಲಮ್ಮಬಹುದೆ-ಧ್ಯಾನಿಸಲು ಯತ್ನಿಸಬಹುದೆ-ಕಾಂಬುದು-ಕಾಣುವುದು, ಮಾಣು-ಬಿಡು]
ಘಟ್ಟಿವಾಳಯ್ಯನ ವಚನ. ಈ ವಚನ ಅರಿವನ್ನು ಕುರಿತ ನಮ್ಮ ಕಲ್ಪನೆಗಳನ್ನೆಲ್ಲ ಪ್ರಶ್ನಿಸುತ್ತಿದೆ.
ಅರಿವು ಅನ್ನುವುದು ನೆನಪಿಗೆ ಕೂಡ ಸಂಬಂಧಿಸಿದ್ದು ಎಂದುಕೊಂಡಿದ್ದೇವೆ. ನಮ್ಮ ಇಡೀ ಶಿಕ್ಷಣ, ಸಂಸ್ಕೃತಿ ಎಲ್ಲವೂ ನೆನಪಿಗೆ ಸಂಬಂಧಿಸಿದ್ದು, ನೆನಪನ್ನೇ ಆಧರಿಸಿದ್ದು ಅಲ್ಲವೇ? ಆದರೆ ಸತ್ಯ ಅನ್ನುವುದು ಇದ್ದರೆ ಅದು ನೆನಪಿಗೆ ಸಿಲುಕದು. ಅರಿವಿಗೆ ಸಿಲುಕದು. ಅರಿವಿಗೆ ಬಾರದಿರುವ ಸತ್ಯ ನೆನಪಿಗೆ ಬರುತ್ತದೆಯೇ? ನೆನಪಿಗೆ ಬರುವುದೇನಿದ್ದರೂ ನಮ್ಮ ಹಳೆಯ ಅನುಭವ, ಕೇಳಿದ ಮಾತು ಇಂಥವೇ ಅಲ್ಲವೇ? ಯಾವುದು ನಮ್ಮ ನೆನಪಿನಲ್ಲಿ ದಾಖಲಾಗಿದೆಯೋ ಅದನ್ನು ಮಾತ್ರ ನಾವು ಈಗ ಗುರುತಿಸುತ್ತೇವೆ. ಯಾವುದು ನೆನಪಿಗೆ ಬಾರದೋ ಅದು ನಮಗೆ ಕಾಣುವುದೂ ಇಲ್ಲ. ನೆನಪನ್ನೇ ಆಧರಿಸಿಕೊಂಡಿರುವ ನಮ್ಮ ಕಾಣ್ಕೆ, ನಮ್ಮ ಅರಿವು ಸತ್ಯವನ್ನು ಕಾಣಿಸಿಕೊಡಲಾಗದು. ಹೀಗಿರುವಾಗ ಮಾತಿಗೆ ಸಿಲುಕದ, ನೆನಪಿಗೆ ಆಹಾರವಾಗದ ಸತ್ಯವನ್ನೋ ದೇವರನ್ನೋ ಮುಟ್ಟುವುದು ಪೂಜಿಸುವುದು ಅಸಾಧ್ಯ ಅನ್ನುತ್ತಾನೆ ಘಟ್ಟಿವಾಳಯ್ಯ.
ನಡುಗನ್ನಡದಲ್ಲಿ ನೆನೆ ಎಂಬ ಮಾತನ್ನು ಧ್ಯಾನಿಸು ಅನ್ನುವ ಅರ್ಥದಲ್ಲಿ ಬಳಸುವುದುಂಟು. ಧ್ಯಾನಿಸುವುದು ಏನಿದ್ದರೂ ನಮಗೆ ಗೊತ್ತಿರುವ, ನಮ್ಮ ಗ್ರಹಿಕೆಗೆ ಬಂದಿರುವ, ಧ್ಯಾನಿಸಬಲ್ಲ ಸಂಗತಿಗಳನ್ನು ಮಾತ್ರವೇ.
ಇಂಗ್ಲೀಶ್‌ನ ರಿಕಾಗ್ನಿಶನ್ ಎಂಬ ಮಾತು ನೆನೆದುಕೊಳ್ಳೋಣ. ಅದು ರಿ (ಮತ್ತೆ) ಕಾಗ್ನಿಶನ್ (ಗ್ರಹಿಸುವುದು, ಗುರುತಿಸುವುದು). ನಮ್ಮ ಜ್ಞಾನದ ಕಲ್ಪನೆ, ಅರಿವಿನ ಕಲ್ಪನೆ ಎಲ್ಲವೂ ನೆನಪನ್ನು ಮಾತ್ರ ಆಧರಿಸಿದ್ದು, ಅದರಂತೆ ನಾವು ಈ ಮೊದಲು ದೇವರನ್ನು, ಸತ್ಯವನ್ನು ಕಂಡಿಲ್ಲವಾದರೆ, ಕಂಡ ನೆನಪು ನಮ್ಮಲ್ಲಿಲ್ಲವಾದರೆ ಈಗ ಒಂದು ವೇಳೆ ದೇವರು, ಸತ್ಯ ನಮ್ಮ ಕಣ್ಣೆದುರಿಗೇ ಇದ್ದರೂ ಗುರುತಿಸಲಾರೆವು. ಹೀಗಿರುವಾಗ ನಾನು ಸತ್ಯವನ್ನು ಕಂಡೆ, ದೇವರನ್ನು ಕಂಡೆ ಅನ್ನುವ ಮಾತುಗಳೇ ಸರಿಯಲ್ಲ, ಅದು ಅಸಾಧ್ಯ ಅನ್ನುತ್ತಿರುವಂತಿದೆ ಘಟ್ಟಿವಾಳಯ್ಯ.
*****