(ಹರೀಂದ್ರನಾಥ ಚಟ್ಟೋಪಾಧ್ಯಾಯರ ಒಂದು ಇಂಗ್ಲೀಷ್ ಕವಿತೆಯ ಅನುವಾದ)
ಭೂಮ್ಯಾಕಾಶದ ಕೆಂಪುಗಳೆಲ್ಲವು
ಕೂಡುತೆ ಹಬ್ಬವ ಮಾಡಿದವು.
ಬಂದವು ಅಲ್ಲಿಗೆ ಬಗೆ ಬಗೆ ಕೆಂಪು,
ಗುಲಾಬಿ ಪೂಗಳ ಪರಿಮಳ ಕೆಂಪು,
ಮಸಣದ ಜ್ವಾಲೆಯ ಗುಟ್ಟಿನ ಕೆಂಪು,
ಅರುಣ ಕಿರಣಗಳ ಸಂಜೆಯ ಕೆಂಪು,
ಮುದ್ದು ಕೂಸುಗಳ ಕೆನ್ನೆಯಕೆಂಪು,
ಗಿಳಿಗಳ ಚುಂಚಿನ ಅಳಿಯದ ಕೆಂಪು,
ಒಣಗಿದ ಹಣ್ಣಿನ ಒಣ ಒಣ ಕೆಂಪು,
ಹಕ್ಕಿಯ ಕಂಗಳ ಗುಡ್ಡಿಯಕೆಂಪು,
ಪ್ರೇಮದ ಹೃದಯದ ಒಂಟಿಗ ಕೆಂಪು!
ಸಾಗಿತು ಹಬ್ಬವು ಕೂಡಲು ಕೆಂಪು!
ನಿಂತಿತು ಹೊರಬದಿ ಒಂದೇ ಕೆಂಪು!
ಅದುವೇ ಮನುಜನ ಕ್ರೋಧದ ಕೆಂಪು !
*****