ಮನಸ್ಸು ಮೈ ಹೊರೆ ಎನಿಸಿದಾಗ
ನಿನ್ನೆಡೆಗೆ ಹೊರಳುತ್ತೇನೆ. ಈ ವೇಳೆಯಲಿ
ಸಾಕಷ್ಟು ಹೇಳುವದಿದೆ. ಅನಿಸಿಕೆಗಳು
ನಿವೇದನೆಗಳಾಗಿ, ಸಾವಿನಾಚೆಯ ಬೆಳಕು.
ಈ ಬದುಕು ದುಡಿಮೆಗೆ ಸಿಗದ ಮಜೂರಿ,
ನೊಂದಣಿಗೆ ಸಿಗದ ದಿನದ ಜೀಕುಗಳು,
ಕಂಡದ್ದು ಕಂಡಂತೆ ಹೇಳುವ ಕನ್ನಡಿಗೂ
ನೂರಾರು ಚೂರುಗಳು.
ಲೋಕದ ಪ್ರಶ್ನೆಗಳಿಗೆ ತನಿಖೆಗಳು ಉಂಟು.
ನಿನ್ನ ತನಿಖೆಗಳಿಗೆ ಪ್ರಶ್ನೆಗಳಿಲ್ಲ. ಮಣಿಯ
ಸರದಲ್ಲಿ ಚಿಮ್ಮುವ ಬೆಳಕ ಕಾಂತಿಯ ಬಣ್ಣಗಳ
ಪ್ರತಿಫಲಿಸಿದ ಕಾಮನ ಬಿಲ್ಲು. ತರ ತರದ ದಿಗಂತ
ಆಕಾಶದ ಅಂಗಳದಲಿ ಪದರ ಬಿಚ್ಚಿ ಹರಡಿದ
ಚಿಕ್ಕಿಗಳು, ನನ್ನಲ್ಲಿಗೆ ಇಲ್ಲ ಸುಖ-ದುಃಖಗಳ
ಸರಮಾಲೆ, ನಿನ್ನ ಇಚ್ಛೆಯಂತೆ ನಾನೀಗ ಉರಿಯುವ
ಕಿಡಿಯ ನಿಗಿ ನಿಗಿ ಕೆಂಡ.
ಬೆಳಕಿನಾಚೆಯ ಬೆಳಕು, ಮಳೆ, ಮೋಡ, ನಿಖರ
ಕಣ್ಣುಗಳ ಕಾಂತಿ, ಚೆಲ್ಲುವ ನೆರಳಲಿ ಮತ್ತೆ
ಕಿಡಿಯ ಕಿರಣಗಳು ಅಡಗಿಕೊಂಡು ಉನ್ನತ್ತ ಕಾವ್ಯ
ಸಣ್ಣ ಪುಟ್ಟ ಎಟುಕುವ ವಿಸ್ಮಯಗಳ ಲೋಕ.
ಏಕಾಂತದಲಿ ದ್ರವೀಕರಿಸಿ ನದಿ ಹರಿದ ಮನುಕುಲ
ಕರೆದು ನಿಟ್ಟುಸಿರು ಬಿಟ್ಟೆ, ಕಣ್ಣು ಮಿಟುಕಿಸಿ
ಕರೆವ ಕೊರಳ ತುಂಬ, ನೀನು ಧ್ವನಿಯಾಗಿ
ಕೇಳಿಸಲೇ ಇಲ್ಲ ನಾನೀಗ ಚಿರವಿರಹಿ.
*****