ಯುದ್ಧ ಯುದ್ಧ ಯುದ್ಧ
ಎಲ್ಲೆಲ್ಲೂ ಯುದ್ಧ!
ದೇಶ ದೇಶಗಳ ಗಡಿಗಳಲ್ಲಿ,
ದ್ವೇಷದ ಉರಿಹತ್ತಿದಲ್ಲಿ,
ಮತಾಂಧತೆಯ ಮರುಳು ಮುತ್ತಿದಲ್ಲಿ
ಅಹಂಕಾರ ಭುಗಿಲೆದ್ದಲ್ಲಿ, ಪ್ರೀತಿ ಮರೆಯಾದಲ್ಲಿ
ಎಲ್ಲೆಲ್ಲೂ ಯುದ್ಧ; ಮೃತ್ಯು ಕುಣಿತ.
ಉರುಳುವುದು ಹೆಣಗಳ ಸಾಲು ಸಾಲು.
ಭೂಮಿತಾಯಿಯ ಮಡಿಲೆಲ್ಲ ರಕ್ತದೋಕುಳಿ.
ಮನೆ ಮನದೊಳಗೂ ಕುರುಕ್ಷೇತ್ರ!
ಇಲ್ಲಿ ರಕ್ತದೋಕುಳಿಯಿಲ್ಲ
ಹರಿಯುತ್ತದೆ ಕಣ್ಣೀರ ಕೋಡಿ!
ಮಾಜುವುದಿಲ್ಲ ಕೆನ್ನೆಯ ಮೇಲಿನ ಕಣ್ಣೀರ ಗುರುತು
ತುಟಿಯ ಅಂಚಿನ ನೋವಿನ ಅವ್ಯಕ್ತ ಗೆರೆ.
ಇಲ್ಲಿ ಮೃತ್ಯು ಕುಣಿತವಿಲ್ಲ
ಹಣಗಳು ಉರುಳುವುದಿಲ್ಲ.
ಸಾಯುತ್ತವೆ ಮನಸ್ಸು ಮನಸ್ಸುಗಳು,
ಕಳಚಿಕೊಳ್ಳುತ್ತವೆ ಬೆಸೆದಿದ್ದ ಕೊಂಡಿಗಳು.
ಎಲ್ಲೆಲ್ಲೂ ನಡೆಯುತ್ತಲೇ ಇವೆ ಯುದ್ಧ
ಭಾವನೆಗಳ ಯುದ್ಧ, ಅಹಂಗಳ ಯುದ್ಧ
ಸಮಾನತೆಗಾಗಿ ಯುದ್ಧ, ಹಕ್ಕುಗಳಿಗಾಗಿ ಯುದ್ಧ
ಮನೆಮನೆಯಲ್ಲಿ ಮನಮನದಲ್ಲಿ ಯುದ್ಧ.
ಇಲ್ಲಿ ಸಮರ ವಿರಾಮವಿಲ್ಲ.
ಯಾರೂ ಶಾಂತಿಯ ಗೆರೆ ಎಳೆಯುವುದಿಲ್ಲ.
ನಮಗೆ ನಾವೇ ಶಾಂತಿದೂತರು
ಜೀವನ ಸಮರದಲಿ
ಗೀತೋಪದೇಶ ಮಾಡಬೇಕಾದವರು!
*****