ಅಮ್ಮನೇಕೆ ಮೌನವಾಗಿದ್ದಾಳೆ?
ನಕ್ಕು ನಲಿದು ನಮ್ಮೊಡನಾಡಿದ
ಬೈದು ಹೊಡೆದು ನಮ್ಮ ತಿದ್ದಿದ
ಅಮ್ಮನೇಕೆ ಮೌನವಾಗಿದ್ದಾಳೆ?
ನೋವು ನಲಿವು ಎಲ್ಲ ತಿಂದು
ಏರು ಪೇರುಗಳಲಿ ಈಜಿ
ನಮ್ಮ ಜೀವಚೇತನವಾಗಿದ್ದ
ಅಮ್ಮನೇಕೆ ಮೌನವಾಗಿದ್ದಾಳೆ?
ಪ್ರೀತಿಯ ಹಲವು ಹರವುಗಳ ಹರಡಿ
ಸಾಕು ಇನ್ನು ಪ್ರೀತಿಯ ಬಂಧನ
ತೆಗೆದುಕೊಂಡಂತೆ ಆಪೋಶನ
ಅಮ್ಮನೇಕೆ ಮೌನವಾಗಿದ್ದಾಳೆ?
ಜೀವನದ ಮುಸ್ಸಂಜೆಯಲಿ
ಯಾರ ನೆರವೂ ಬೇಡದಂತೆ
ತನ್ನಷ್ಟಕ್ಕೇ ಇರಲು ಬಯಸಿದಂತೆ
ಅಮ್ಮನಿಂದು ಮೌನವಾಗಿದ್ದಾಳೆ.
ಮೌನದಲ್ಲೇ ಸುಖ ಕಂಡಂತೆ
ಮಾತು ಮರೆತೇ ಹೋದಂತೆ
ಅಪ್ಪನಿಗೂ ಸವಾಲಾದಂತೆ
ಮೌನದಲ್ಲಿ ಏನನ್ನೋ ಅರಸುತ್ತಿದ್ದಾಳೆ.
ಕಳೆದುಹೋದ ತನ್ನತನವ ಹುಡುಕುವಂತೆ
ತನಗಾಗಿ ತಾನು ಬದುಕಬೇಕೆನ್ನುವಂತೆ
ಎಲ್ಲರ ಮಧ್ಯೆ ಇದ್ದೂ ಇಲ್ಲದಂತೆ
ಅಮ್ಮನಿಂದು ಅಪರಿಚಿತಳಾಗುತ್ತಿದ್ದಾಳೆ.
ಅವಳ ಮೌನ ಪ್ರಶ್ನೆಯಾಗಿ
ನಮ್ಮ ಕಾಡಬೇಕೆಂಬಂತೆ
ಅದಕ್ಕುತ್ತರ ನಾವೇ ಹುಡುಕಬೇಕೆಂಬಂತೆ
ಅಮ್ಮ ಮೌನವಾಗಿದ್ದಾಳೆ.
ಅಮ್ಮನೇಕೆ ಇಷ್ಟೊಂದು ಬೇರೆಯಾಗಿದ್ದಾಳೆ?
*****