ಆಡ್ವಾಣಿ ಒಬ್ಬರೇ ಅಲ್ಲ ಟೋಟಲಿ ರಾಜಕಾರಣಿಗಳ ಗ್ರಹಗತಿನೇ ನೆಟ್ಟಗಿಲ್ರಿ

ಪಾಕಿಸ್ತಾನಕ್ಕೆ ಟೂರ್ ಹೋಗಿ ಬಂದ ಮ್ಯಾಗೆ ಯಾಕೋ ನಂ ಅಡ್ವಾಣಿ ಸ್ಥಾನಮಾನ ಶೇಕ್ ಆಗಲಿಕ್ ಹತ್ತೇತಿ. ಬರೋಬ್ಬರಿ ಹೇಳ್ಬೇಕಂದ್ರೆ ಯಾಕೋ ಇತ್ತಿತ್ಲಾಗೆ ರಾಜಕಾರಣಿಗ ನಸೀಬೇ ಖೊಟ್ಟಿ ಆಗಾಕ್ ಹತ್ತೇತ್ ನೋಡ್ರಿ. ಅಟ್ ದಿ ಫಸ್ಟ್ ಅಡ್ವಾಣಿ ಇಸ್ಯಕ್ಕೆ ಬರೋಣ್ರಿ. ಜಿನ್ನಾ, ಮಸೀದಿ, ಹಿಂದೂ ದೇಸದ ಬಗ್ಗೆ ಆಡಿದ ಒಂದೊಂದು ಆಣಿಮುತ್ತೂ ಅಡ್ವಾಣಿ ಬೆಲೆಯಾ ಮಗ್ಗಲು ಅಕ್ಕಿ ಬೆಲಿ ತರ ಕುಸಿಯಂಗೆ ಮಾಡುತ್ರಪಾ. ಆರೆಸೆಸ್ಸು ಭಜರಂಗಿ ಬಿಜೆಪಿ ಅಂಗಾರಾಗೋತು. ಆದ್ರೇನು ಬ್ಯಾರೆ ಖದೀಮ ಲೀಡರ್ರೇ ಪಕ್ಷದಾಗಿಲ್ಲದ ಅಧೋಗತಿ ಅರ್ಥ ಮಾಡಿಕ್ಕಂಡುಮ್ಯಾಗೆ ಕುಲ್ಡುಗಣ್ಣಿಗಿಂತ ಮೆಳ್ಳುಗಣ್ಣು ಮೇಲು ಅಂತ ಕೂಲಾತು. ಆದ್ರೂ ಹೀನ ಸುಳಿಯ ಅರ್‌ಎಸ್ಸೆಸ್ಸು ಮೂರು ದಿನದ ಮೀಟಿಂಗ್ ಮಾಡಿ ಅಡ್ವಾಣಿ ಜನ್ಮ ಜಾಲಾಡಿ ರಾಜೀನಾಮೇನೇ ಸರಿಯಾದ ಸಿಕ್ಸೆ ಅಂತ್ಲೆ ಗುಡಿಗ್ಲಿಕ್ ಹತ್ತಿತು. ಹೆದರ್ಕಂಡ ಬಿಜೆಪಿ
ಪರಿಹಾರ್ಥವಾಗಿ ಅದ್ವಾಣಿಯ ಕಾರ್ಯದರ್ಶಿ ಕನ್ನಡಿಗ ಸುಧೀಂದ್ರ ಕುಲಕರ್ಣಿ ಬಲಿ ತಕ್ಕೊಂಡು ತಿಪ್ಪೆ ಸಾರಿಸೋ ಕೆಲಸ ಮಾಡಿ ಸಂಗ ಪರಿವಾರ್ದ ಮಂಗ್ಯಾಗಳಿಗೆ ಸಮಾಧಾನ ಮಾಡೋ ನಾಟಕ ಆಡ್ತು.

ಅಟ್ರಾಗೆ ಅಯೋಧ್ಯೆ ರಾಮಜನ್ಮ ಭೂಮಿ ಮ್ಯಾಗೆ ಉಗ್ರರು ದಾಳಿ ಮಾಡಿ ಶ್ರೀರಾಮನ ಪಾದಾರವಿಂದ ಸೆರ್ಕೋಬೇಕೆ! ಪಾಕ್‌ಗೆ ಅಡ್ವಾಣಿ ಹೋಗಿ ಹಿಂದೂಗಳ ಬಗ್ಗೆ ಅಡಲಾಯವಾಗಿ ಮಾತಾಡಿದ್ಕೆ ಲಷ್ಯರ್.ಎ.ತೊಯೇಬಾಗೆ ಈಟೊಂದು ದಮ್ಮು ಬಂತು ಅಂತು ರಾಂಗ್ ರಾಂಗ್ ಆದ ಪಕ್ಷದ ಬಾಂಧವರೆ, ಈಗ ಹಿಂಗಾಗೋತಲ್ಲ ಅದ್ವಾಣಿ ಜವಾಬ್ ಕೊಡ್ಲಿ ಮತ್ತೆ ಅಂತ ಫೈಟಿಂಗ್ ಬಿದ್ದರು. ಅದುರು ಬಿದ್ದ ಅದ್ವಾಣಿ ಕೊಡಲೇ ಕಾಂಗ್ರೆಸ್ ಮ್ಯಾಲೆ ಮುರ್ಕೊಂಡು ಬಿದ್ದು ದೇಶದ ಆಂತರಿಕ ಭದ್ರತೆನೇ ಕುಸಿದ್ಯೆತೆ. ಹಿಂಗಾಗಿ ರಾಜ್ನ ಮತ್ತು ಕೇಂದ್ರ ಸರ್ಕಾರ ಐದು ಮಿನೀಟ್ ಒಳಗಾಗಿ ರಾಜಿನಾಮೆ ಕೊಡಬೇಕೆಂತ ಗಂಟಲ ನರ ಹರ್ಕೋತಾ ಅಯೋಧ್ಯೆ ಬಸ್ ಹತ್ಯಂಗಾತ್ರಪಾ. ಮೂರನೇ ದಿನ ಏನಾತು? ಹೋದ ಪಿಶಾಚಿ ಅಂದ್ರೆ ಬಂದೆ ಗವಾಕ್ಸೀಲಿ ಆಂಬಂಗೆ ೧೨ ವರ್ಷದ ಓಲ್ಡ್ ಇನ್ಸಿಡೆಂಟು ಮತ್ತೆ ಅಡ್ವಾಣಿ ಹೆಗಲೇರಿತು. ಬಾಬ್ರಿ ಮಸೀದಿ ಧ್ವಂಸ ಮಾಡಿದ ಕೇಸ್ನಾಗೆ ಆರೋಪ ಮುಕ್ತರನಾಗಿಸಿದ್ದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದು ಮಾಡಿದ ಹೈಕೋಲ್ಟು ಅಡ್ವಾಣಿಯಾ ರದ್ದಿಗೆಸೆಯಬೇಕೆ! ಕುಂಕುಮದ ಜೋಷಿ ಅರೆಬರೆ ಸನ್ಯಾಸಿ ಉಮ್ಮಕ್ಕು ಸಿಂಗಾಲು ಬಾಲಕ ಗಿರಿರಾಜ ಕಿಸೋರ್ಗೂ ಹೈಕೋಲ್ಟಿಂದ ವಕ್ಕರಗತಿ ಬಂತು. ಪಂಚಾಂಗ ತೆಗೆಸಿ ನೋಡಲಾಗಿ ಅಡ್ವಾಣಿ ಅಂಡ್ ಪಾಲ್ಪಿ ಉಡುಪಿ ಕಡೆ ನೋಡ್ತು. ಎಗೇನ್ ಅಡ್ವಾಣಿ ಪಾಕ್ ಗೆ ಹೋಗಿ ಜಿನ್ನಾಗೆ ಉಗ್ದು ಉಪ್ಪಾಕಿ ಮಸೀದಿ ಉಲ್ಡಿದ ಡಿಸೆಂಬರ್ ೬ನೇ ತಾರೀಕಿನಂದೇ ನನ್ನ ಜನ್ಮ ದಿನಾಚರಣೆ ಆಚರಸ್ತಿನಿ ಅಂತ ಘೋಷಿಸಿ, ಭಾರತಾನಾ ಹಿಂದೂಸ್ತಾನ ಮಾಡ್ತೀನಿ ಅಂತ ಪ್ರತಿಜ್ಞೆ ಮಾಡಿ ಹಿಂದಿರುಗಿ ಬಂದ್ರೆ ಮಾತ್ರ ಗ್ರಹಗತಿ ಬದಲಾದೀತು ಇಲ್ಲಾ ಅಡ್ವಾಣಿ ಬಾಡಿ ಜೇಲು ಪಾಲಾಗೋ ಬ್ಯಾಡ್ಟೇಮ್ ಮಗ್ಗಲಾಗೇ ಐತೆ ಅಂಬೋ ಅಭಿಪ್ರಾಯವನ್ನು ಖುದ್ ಪೇಜಾವರರೇ ಅನುಗ್ರಹಿಸಿದರಂತೆ. ಇಬ್ಬಂದಿ ವಾಜಪೇಯಿ ಬಾಯಿ ಚಪ್ಪರಿಸುತ್ತಾ ಕಣ್ಣು ಮುಚ್ಚಿ `ಅಡ್ವಾಣಿ ಒಬ್ಬರ್ದೇ ಏನ್ ಟೋಟಲಿ ರಾಜಕಾರಣಿಗಳಿಗೀಗ ಬ್ಯಾಡ್ಡ್ ಟೇಂ ಬಂದು ಬಡ್ಕೊಂಡೇತೆ’ ಎಂದು ಅಲವಕ್ಕಿ ಹಂಗೆ ನುಡಿಯಲಾಗಿ ಅವರ ಅನುಂಯಾಯಿಗಳಿಗೆ ಪಾಜಪೇಯಿ ವಾಣಿನಾಗೆ ಇಪ್ಪ ಕಹಿ ಸತ್ಯವೇ ಕಣ್ಣೆದುರು ಸಿನಿಮಾ ರೀಲಿನಂಗೆ ಬಿಚ್ಚಿಕ್ಕಂತು. ಅಡ್ವಾಣಿ ಟೀಕೆ ಟಿಪ್ಪಣಿ ಮಾಡಿದ್ದೇ ಯಶವಂತ ಸಿನ್ಹನ್ನ ವಜಾ ಮಾಡಲಾತು. ಪಾಸ್ಟಾವನ್ಗೆ ಲೈಟಾಗಿ ಹಾರ್ಟ್ ಅಟ್ಯಾಕ್ ಆತು. ಅರುಣ್ ಜೇಟ್ಲಿ ಬಿಪಿ ಏರಿಸ್ಕಂಡು ಆಸ್ಪತ್ರೆ ಸೇರಂಗಾತು. ಮಾಜಿ ಪಿ.ಎಂ. ಚಂದ್ರಸೇಕ್ಕರ್ಗೆ ಕ್ಯಾನ್ಸರ್ ಬಂತು. ರಾಮಜನ್ಮಭೂಮಿ ಮ್ಯಾಗೆ ಅಟ್ಯಾಕ್ ಮಾಡಿದ್ದರ ಫಲವಾಗಿ ಗೃಹಮಂತ್ರಿ ಸಿವ್ರಾಜ ಪಾಟೀಲು ಉತ್ತರ ಪರದೇಸದ ಮುಲಾಯಂಸಿಂಗರ್ನ ಇರೋಧ ಪಕ್ಷ ಅಡ್ಡಾದಿಡ್ಡಿ ಎಳೆದಾಡಿ ರಾಜೀನಾಮೆ ಕೇಳಂಗಾತು ಹೌದ್ರಿಲ್ಲೋ.

ಮಾರಾಷ್ಟ್ರದ ಕಡಿಗೆ ನೋಡಿದ್ರೆ ನಾರಾಯಣ ರಾಣೆ ತಿರುಗಿಬಿದ್ದು ರಾಣರಂಪ ಮಾಡಿಕ್ಯಂಡು ಶಿವಸೇನೆಯ ಭಾಳಠಾಕ್ರೆ ಸಿವಸಿವ ಅನ್ನಂಗಾಗೇತೆ. ಡೂಪ್ಲಿಕೇಟ್ ಕೊಂಗಾಟ ಡುಮ್ಮಿ ಜಯಲಲ್ತನ್ನ ಕೇರ್ ಮಾಡ್ದಂಗೆ `ಸೇತು ಸುಮುದ್ರಂ’ ಕಾಮಗಾರಿಗೆ ಚಾಲನೆ ನೀಡಿ ಕಾಂಗೈ ಜಯಬೇರಿ ಬಾರಿಸಿದ್ದಕ್ಕಿಂತ ಹೆಚ್ಚಾಗಿ ಫಂಕ್ಷನ್‌ನಾಗೆ ಮೊಗ ಮಾಡಿ ಕರುಣಾನಿಧಿ ಕುಂತಿದ್ದು ನೋಡಿ ಗ್ಯಾಸ್ಟ್ರಿಕ್ ರೈಸ್ ಆಗಿ ಜಯ ಮತ್ತೋಟು ಡಿಮ್ಮಿಯಾದ ಸುದ್ದಿ ಬಂದೈತೆ ನಂಬಿದ್ರೆ ನಂಬಿ ಬಿಟ್ಟರೆ ಬಿಡಿ.

ಆಂಧ್ರದ ಕಡಿಗೆ ಚೂಸ್ತೆ ಅಕ್ಕಡ ಕೂಡ ಸಚಿವಲ ಪರಿಸ್ಥಿತಿ ಅಂತ ಬಾಗಲೇದು. ನಕ್ಸಲ್ರಿಗೆ ಹೆದರ್ಕೊಂಡು ಐದು ಮಂದಿ ಟಿ.ಆರ್.ಎಸ್ ಸಚಿವರು ಯಾರಿಗೂ ಹೇಳ್ದೆ ಕೇಳ್ದೆ ರಾಜೀನಾಮೆ ರಾಸಿ ಒಗೆದು, ಪದವಿಗಿಂತ ಮನ ಪ್ರಾಣಮೇ ಮುಖ್ಯಂ ಅಂದವರೆ ಗೊತ್ತಾತಿಲ್ರಿ.

ಕರ್ನಾಟಕದ ಕಡಿಗೆ ಮೂತಿ ಹೊಳ್ಳಿಸಿದ್ರ ಧಮ್ಮಿಲ್ಲದ ಧರಂಸಿಂಗಿನ ಸೀಟೇ ಅದುರಿ ಅಲ್ಲಾಡಕತ್ತೇತ್ರಿ. ಸುಮ್ಗಿರಲಾರ್ದೆ ಅದೆಲ್ಲೋ ಇರುವೆ ಬಿಟ್ಕಂಡ್ರು ಅನ್ನಂಗೆ ಸುದ್ದಿ ಸಚಿವ ಶಿವರಾಮು, ರೇವಣ್ದಂದು ಲೋಕೋಪಯೋಗಿ ಖಾತೆ ಅಲ್ಲ. ಅದು ದುರುಪಯೋಗಿ ಖಾತೆ ಅಂತ ಕ್ಯಾತೆ ತೆಗ್ದು ಬಿಡೆಪಿಯೋರ ಕೈನಾಗೆ ಸಿಕ್ಕು ಹೈರಾಣಾಗಿ-ರಾಜೀನಾಮೆ ಕೊಡೋ ಹೊತ್ತು ಬಂದೇತೆ. `ನೀನಾರ ಕೊಡು ಇಲ್ಲ ರೇವಣ್ಣಾರ ಕೊಡ್ಲಿ’ ಜಗಳಕ್ಕೇ ನಿಂತು ಕೂಗು ಮಾರಿ ಯಡೂರಿ, ರೇವಣ್ಣನ ಹೆಸರು ನನ್ನ ನಾಲ್ಗೆ ಮ್ಯಾಗೆ ಬಂದಿಲ್ಲ ಅಂತ ಅಪಾಲಜಿ ಪತ್ರ ಬರ್ಕೊಂಡು ಓದಿದ್ರೂ ಇರೋಧ ಪಕ್ಷದೋವು ಪಟ್ಟು ಬಿಡಂಗಿಲ್ಲ. `ನಾನ್ ನೀವ್ ಕುಂತು ಮಿಕ್ಸಚರ್ ಪಾಲ್ಟಿನೋರು ಇಚಾರ ಮಾಡ್ಕಂತೀವಿ ಬಿಡ್ರಿ’ ಅಂತ ದಬರಿ ಮೋರೆ ಧರಂ ಬಾಯಿ ಬಡ್ಕೊಳ್ಳೋ ಟೀಮ್ನಾಗೆ ಗಾರ್ಡನ್ ಸಚಿವ ಅಲಂಗೂರು ಸೀನಿವಾಸ ಕಾಂಗ್ರಸ್ನೋರ್ಗೆ `ಶನಿ ಸಂತಾನ’ ಅಂತ ಬಿರುದು ಕೊಟ್ಟು ಬೆಣ್ಣೆ ತಕ್ಕೊಂಡ ಮಂಗ್ಯಾ ಆಗವನೆ. ಈ ಸಂಕಷ್ಟದ ದಿನದಾಗೇ ಡಿಸಿ‌ಎಂ ಸಿದ್ರಾಮು ಅತ್ತ ದರಿ ಇತ್ತ ಪುಲಿ ನಾ ಎತ್ತ ಪೋಗಲಯ್ಯಾ ಇಲಿ ಅಂತ ಮೈಸೂರು ಸಾಯಿತಿಗಳ ಸಂಗಡ ಸೆಮಿನಾರ್ ನೆಡಿಸಿದ್ರೂವೆ ಹಾದಿ ಕಾಣದಾಂಗಾಗೇತ್ರಿ. ಹುಬ್ಳಿನಾಗೆ ದಲಿತ ಹಿಂದುಳಿದೋರ ಸಭೆ ಮಾಡಿ ಅವರ್ನ ಮುಂದಕ್ಕೆ ತರ್ತಿವ್ನಿ ಇಲ್ಲ ನಾನಾರ ಮುಂದಕ್ಕೆ ಬರ್ತಿವ್ನಿ ಅಂತ ಸಿದ್ರಾಮು ಹೊಂಟಿರೋದು ನೋಡಿ ಸೈರಣೆಗೆಟ್ಟ ಗೌಡ್ರು, ಅದೆಲ್ಲಾ ಬುಟ್ಟುಬುಟ್ಟು ನಂ ಜೊತೆ ರಾಜಿ ಕಬೂಲಿಗೆ ಬರ್ಲಿ. ದಲಿತರು ಹಿಂದುಳಿದೋರು ಸಾಬರು ಕಿರಿಸ್ತಾನ್ರಿಗೆಲ್ಲಾ ಇರೋನು ಒಬ್ನೇ ಲೀಡರ್. ಆವನೇ ಈ ಗೌಡ ನನ್ನ ಮುಂದೆ ಸಿದ್ರಾಮ ಯಾವ ಗೂಂಜಾಯಿ ಎಂದು ಗುಡುಗಿದ್ದೂ ಸುದ್ದಿಯಾಗೇತೆ. ಸಿಟ್ಟಿಗೆದ್ದ ಸಿದ್ರಾಮು ಮೈನಾಗ ಹುಬ್ಳಿ ಸಮಾವೇಸ ಮಾಡೇ ಮಾಡ್ತೀನಿ ಅಂಬೋ ಆವೇಶ ಪಟ್ರೋಲ್ ಡೀಸೆಲ್ ಬೆಲೆ ಏರ್ದಂಗೆ ಏರ್ಲಿಕ್ ಹತ್ತೇತೆ. ಮೋರ್ ಓವರ್ ಮೈಸೂರು ತಾವ್ ಜೆಸಿಬಿ ಯಂತ್ರ ಚಾಲ್ನೆಯಾ ರಾಹು ಕಾಲ್ದಾಗೆ ಮಾಡಿದ್ಕೇ ಅವತ್ನಿಂದ ಈವತ್ತಿನ ತಂಕ `ಸಿದ್ರಾಮಯಣ’ ನೆಡಿತಾ ಐತೆ ಅಂತ ಗಿಳಿ ಸಾಸ್ತ್ರದೋರು ಹೇಳಿದ ಮಾತು ಕೇಳಿ ಸಿದ್ರಾಮಣ್ಣನ ಗಂಟ್ಲಾಗೆ ಅನ್ನ ನೀರು ಇಳಿದಂಗೆ ಆಗೇತಂತೆ ಕಣ್ರಿ.

ಗೋಡ್ರು ಬ್ಯಾರೆ ಸಿದ್ದುನ ಔಟ್ ಮಾಡಿ ರಾಜಸೇಕರ ಮೂತ್ರಿ ಸೀನಿವಾಸ ಪರಸಾದನ್ನ ಒಳಗಡಿಗೆ ಹಾಕ್ಕಂಬಾನ ಅಂಬೋ ಹಿಕ್ಮತ್ ನಡೆಸವರೆ. ಸಿದ್ರಾಮು ಸಂಗಡ ಅಬ್ಬಬ್ಬಾ ಅಂದ್ರೆ ಐದಾರು ಸಚಿವರು ಹೋದಾರು ಅಂಬೋ ಸಾಯಿಲ್ ಸನ್ ಗೌಡ್ರ ಲೆಕ್ಕಾಚಾರ ಎಂದೂ ಮಿಸ್ಟೆಕ್ ಆಗಾಕಿಲ್ಲ ಬುಡಿ ಅಂತ ಗೌಡ್ರ ಸೆಕೆಂಡ್ ಸನ್ ಕೊಮಾರ ರಾಮ ಸೆಡ್ ಹೊಡಿಲಿಕ್ ಹತ್ತವನೆ. ಒಟ್ನಾಗೆ ಡೆಲ್ಲಿಯಿಂದ ಕರ್ನಾಟಕದ ಗಲ್ಲಿ ತಂಕ ರಾಜಕಾರಣಿಗಳ ಗ್ರಗತಿ ನೆಟ್ಟಗಿದ್ದಂಗಿಲ್ರಿ.

ಯಾವುದೆಂಗಾರ ಆಗವಲ್ ದ್ಯಾಕೆ ರಾಮನ ಬರ್ತ್ ಪ್ಲೇಸ್ ಮ್ಯಾಗಾದ ಉಗ್ರರ ದಾಳಿಯಿಂದ ಅಗ್ದಿ ರಾಂಗ್ ಆಗಿ ಬಿಜೆಪಿ ವಿಹಿಂಪ ಭಜರಂಗಿಗಳು ಮಾಡಿದ ಪ್ರತಿಭಟ್ನೆ, ಬಂದ್ ಸಾಂತಿಯುತವಾಗಿ ನೆಡ್ದು ದೇಸದ ಸಾಂತಿ ಕದಡದೆ ಹೋದ್ದು ಕಂಡಾಗ ದೇಸದ ಗ್ರಗತಿನಂತೂ ನೆಟ್ಟಗೈತೆ ಅಂತ ದೊಡ್ಡ ನಿಟ್ಟುಸಿರು ಬಿಡಂಗೆ ಆಗೈತೆ .

ಹೌದ್ರಿಲ್ಲೋ?
*****

( ದಿ. ೨೭.೦೭.೨೦೦೫)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಳೊಂದು ಶಾಸ್ತ್ರ ಹಾಳೋ
Next post ಇಳಿಹೊತ್ತು

ಸಣ್ಣ ಕತೆ

  • ದೇವರ ನಾಡಿನಲಿ

    ೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…