ಕೆಂಪು ನಿಯಾನ್ ಲೈಟಿನ ಬೆಳಕಲ್ಲಿ ಕರೀ
ರಸ್ತೆ ಮೈ ಕಾಯಿಸಿಕೊಂಡು ಉದ್ದುದ್ದ
ಹರಿದ ರಾತ್ರಿ, ರಸ್ತೆಯ ತುದಿಯ
ಮರದ ನೆರಳು ದೂರದಿಂದ ಭೀಮಾಕೃತಿ.
ಮುರಿದ ಒಣಗಿದ ಬಾಳೆಯಲೆಯಂತೆ,
ಅಲ್ಲಲ್ಲಿ ಚದುರಿದ ಕಸಗಳು ಮೆಲ್ಲಗೆ
ಬೀಸುವ ಗಾಳಿಗೆ ಅತ್ತಿಂದಿತ್ತ ಚಲಿಸಿವೆ,
ದಾರಿಗುಂಟ ಒಜ್ಜೆಯ ನೆನಪಿನ ಲಾರಿಗಳು
ಸರಿದಿವೆ.
ಮಧ್ಯರಾತ್ರಿಯ ಮೌನದ ಕತ್ತಲೆಯಲಿ
ಅವರಿವರ ನೆರಳುಗಳು ಸೈಕಲ್ಲುಗಳು
ಸರಿದು ಹೋಗಿವೆ ಬರೀ ಗಾಲಿಗಳ ಗುರುತು
ಉಳಿಸಿ, ಸಿನೇಮಾ ಪರಧೆಯ ಕನಸುಗಳು
ಮುತ್ತಿಕೊಂಡಿವೆ.
ನಿರಾಳವಾಗಿ ಮಧ್ಯೆ ರಸ್ತೆಯಲ್ಲಿ ಮಲಗಿದ
ಬೀದಿ ನಾಯಿಗೆ ಹೆಣ್ಣು ನಾಯಿಯೊಂದು ಸಿಕ್ಕಿದೆ
ಯಾವ ವಾಹನದ ಸಪ್ಪಳನೂ ಅವುಗಳನ್ನು
ಕಂಗೆಡಿಸಿಲ್ಲ ಮತ್ತೆ ಮರಿಗಳು ಹುಟ್ಟುವ ಬೀಜಗಳು ಹರಿಸಿವೆ.
ಬೆಳಗಿನ ಸೂರ್ಯನ ಬಿಸಿಲಿಗೆ ಕಂಪಿಸಿ ಕೆಂಪಾದ
ಹೂ ತೊಟ್ಟು ಕಳಚಿಕೊಂಡು ಗೊತ್ತಾಗದಂತೆ
ನೆಲವ ಅಪ್ಪಿದೆ, ಬಯಲಲಿ ಬೀಸಿದ ಗಾಳಿಗೂ
ಅವರಿವರ ನೆರಳನ್ನು ಹೊತ್ತು ತಿರುಗಾಡುವ
ಭಾರದ ಇರುಳು.
*****