ಬಲೆಯಲಿ ಸಿಕ್ಕ ಮೀನಿನಂತೆ ನಾನೀಗ
ಒದ್ದಾಡುತ್ತಿರುವೆ ನಿನ್ನ ಪ್ರೇಮದ ಸೆಳತದಲಿ.
ಸರಳುಗಳಾಚೆಯ ಬೆಳಕು ಗೋಡೆಯ
ಮೇಲೆ ಹರಡಿ ಹಾಸಿವೆ ನೆರಳುಗಳು ಬಿತ್ತಿಯಲಿ.
ನನ್ನ ಈ ಪ್ರೇಮದ ಅಲಾಪ ಗೀತೆಗಳ
ಪ್ರೀತಿ ಸಂಜೆ ಬೆಳ್ಳಕ್ಕಿಗಳು ನಿನ್ನ ನೆತ್ತಿಗೆ
ಸವರುತ್ತವೆ.
ನಿರುತ್ತರದ ಗಾಳಿ ಮೆಲ್ಲಗೆ ನನ್ನ ಕೋಣೆಯೊಳಗೆ
ನುಸುಳಿ ನೆನಪುಗಳ ಚಾದರ ಹೊದಿಸುತ್ತದೆ.
ಬಯಲಲಿ ಹಾಡುವ ಹಕ್ಕಿಗಳು ಒಡಲಾಳದ
ನೋವಿನ ಧ್ವನಿಯನ್ನು ಬೆಟ್ಟ ಕಣಿವೆಗಳಲಿ
ರಿಂಗಣಿಸುತ್ತವೆ.
ನೀಲಿ ರೆಕ್ಕೆಯ ಹಕ್ಕಿ ದಿನಾಲೂ ನನ್ನ ಮನೆಯ
ಪಾಗಾರದ ಮೇಲೆ ಕುಳಿತು ಕಂಪನದ ಹಾಡು
ಹಾಡುತ್ತದೆ.
ಕತ್ತಲೆಯಲಿ ಬದುಕು ಗಾಯಗಳು ನಡೆಯುತ್ತವೆ
ಯಾರದೋ ದಪದಪ ಹೆಜ್ಜೆಗಳು ಹಿತ್ತಲಲ್ಲಿ ಕೇಳಿವೆ.
ಹೊಟ್ಟೆಯಲ್ಲಿ ಸಂಕಟ ತುಂಬಿ, ತುತ್ತು ಗಂಟಲಲಿ
ಇಳಿಯದ ಹೊತ್ತಿನಲಿ ಸಂಜೆ ಕರಗುತ್ತಿದೆ.
ನೊರೆಹಾಲ ಕಡಲಿಗೆ ಯಾರಿಲ್ಲದ ಮೌನ
ಗಾಳಿ ನಕ್ಷತ್ರಗಳ ತುಂಬ ನಿನ್ನದೇ ಉಸಿರು.
*****