ಓ ಕನ್ನಡಿಗ
ತಾಯ್ ನುಡಿಯ ಬೆನ್ನುಸಿರು ನೀನಾಗಿ
ಜೀವ ನರನಾಡಿಗಳಲಿ ಧಮನಿಯಾಗಿ
ಬಾನಾಡಿಯಾಗಿ ಕನ್ನಡ ಬಾವುಟ ಹಾರಿಸಿ
ಮೇರು ಶಿಖರಕೆ ತಾಯ್ನಾಡ ಕೀರ್ತಿ ಹಬ್ಬಿಸು ಬಾ ||
ಹಸಿರು ಹೊದ್ದ ನೆಲಕೆ ಬರಗಾಲ ಬಂದಿಹುದು
ಉಳಿವುದೆಂತು ಫಲವು ಹೆರರ ಹೊಲಗಳಲಿ
ಮನುಕುಲದ ಕೆಳೆಯ ಸೆಲೆಯಾಗಿ
ತಂಪನೆರೆದು ತಣಿಸುವಂತೆ ವರುಣನಾಗಿ ಬಾ ||
ಕಡುಕತ್ತಲು ಆವರಿಸಿದೆ ಮನೆ ಮನಗಳಲಿ
ಬಲ್ಲವರ ಹಿರಿಯಾಟ ಪರಸೊತ್ತಿಗೆಯಲಿ
ಮೆರೆದಾಡಿ ಹಸನಾಗಿ ಕೂಡಿ ನಭವ
ಬೆಳದಿಂಗಳ ಪ್ರಜ್ವಲತೆಯ ತೇಜಪುಂಜನಾಗಿ ಬಾ ||
ಅಂತರಂಗ ತರಂಗಗಳ ಮದ್ದಲೆಯಿಂ ಎಬ್ಬಿಸಿ
ತನನ ನಾದಸ್ವರಗಳ ನಿನಾದದಲಿ ನಲಿದು
ಡಿಂಡಿಮ ಡಮರುಗ ನಾದ ಮದ್ದಲೆಯಲಿ ಮೊಳಗಿ
ಪುಳಕಿತ ಶಂಖನಾದ ಸ್ವರವಾಗಿ ಬಾ ||
*****