ಕವಿ ಸಮಯವಲ್ಲ ಮಟ ಮಟ ಮಧ್ಯಾಹ್ನ
ಬೇವಿನ ಮರದ ಬೊಡ್ಡೆಗೆ ಒರಗಿದ ಅವ್ವನ
ಎದೆಯು ತುಂಬಿದ ಗಾಳಿ ಸಳಸಳ
ಒಳ ಸರಿದು, ಎದೆಯ ಭಾರವ ಇಳಿಸಿ
ಕಾಯ ಜೀವದ ನೋವ ತಣಿಸಿತು ಮತ್ತೆ
ಗಿಡದಲ್ಲಿಯ ಪುಟ್ಟ ಹಕ್ಕಿ ಹಾಡಿತು.
ಕವಿ ಸಮಯವಲ್ಲ ಬಯಲ ತುಂಬ ನಿಶ್ಯಬ್ದ
ಎಲೆ ಎಲೆಗಳು ಹರಿದಾಡಿದ ರಿಂಗಣದ ಸದ್ದು.
ಅರಿವಾಗದೇ ಅರಿವ ಹರಿವು ಹರಿದು ಮೌನ,
ಬೆಳಕಿನಲಿ ಮಾತಾಗಿದೆ. ಅಡೆತಡೆಯಿಲ್ಲದ ಧ್ಯಾನ
ತೋಪಿನ ಮರಗಳಿಗೆ ಸೋಕಿ ಒಳ ಹೊರಗೂ
ನೆರಳು, ಬುಡದ ಮಣ್ಣಿನ ನರಳಿಕೆ ಮರಕೆ.
ಕವಿ ಸಮಯವಲ್ಲ ಸಂಚರಿಸುವ ಪಾದಗಳ
ಗುರುತುಗಳು, ಬೆವರ ಹನಿಗಳ ಹೊತ್ತು ಸಾಗಿದ
ದಾರಿಗಳು, ಗಂಧ ರುಚಿಗಳ ಹೂಗಳು ಅರಳಿದ
ಸುವಾಸನೆ, ಚಿಗುರು ಚಿಮ್ಮಿದ ಹಸಿರ ನಾದಕೆ,
ಪುಲಕಗೊಂಡ ಸಕಲ ಭೋಗ ಭಾಗ್ಯಗಳ ಬಯಲು,
ಹೌದು ಅಲ್ಲಗಳು ನೆರಳಾಟ ನಡೆಸಿದ ಎರಡರಿಂದ
ಕಂಗೆಟ್ಟ ಕವಿ ಕಂಪಿಸಿದ.
*****