ಒಂದು ದೀರ್ಘ ಮಳೆಗಾಲದ ಸಂಜೆ
ಹೆದ್ದಾರಿ ಹಾವಿನಂತೆ ಫಳಫಳ ಹೊಳೆಯುತ್ತಲಿದೆ.
ಒಂದು ಖಚಿತ ಧ್ವನಿಯಲ್ಲಿ ಕತ್ತಲೆ ನನ್ನ ಕಿಟಕಿಯ
ಹಾಯ್ದು ಬಂದಿದೆ. ಮೈ ಕೊರೆಯುವ ಚಳಿಯ
ಮಬ್ಬಿನಲಿ ಒಲೆಯು ನೀಲಿ ಜ್ವಾಲೆಯ ಉಗುಳುತ್ತಿದೆ.
ಮತ್ತು ಚಹಾ ಕುದಿಯುತ್ತಿದೆ.
ಆಗ ಒಂದು ನಿವೇದನೆಯ ಪತ್ರ ಬರೆದೆ.
ದುಂಡಾದ ಮೇಜಿನ ಮೇಲೆ ಚಹಾ ಕಪ್ಪುಗಳು
ಸಪ್ಪಳ ಹರಡಿ ಕೂತಿವೆ. ಮತ್ತೆ ಮಾಳಿಗೆಯಿಂದ
ಹನಿಗಳು ಜಂಪಲು ಹಿಡಿದಿವೆ, ಒರಗಿ ಕುಳಿತ
ತಲೆದಿಂಬಿನ ಕವರಿನ ಮೇಲೆ ಯಾರದೋ ವಿಷಾದ
ಹರಡಿದೆ, ಮತ್ತೆ ಮಳೆ ಜೋರಾಗಿ ಬರುತ್ತಿದೆ.
ಸ್ವಲ್ಪ ಹೊತ್ತು ಮಾತುಗಳು ಮೂಕವಾಗಿ
ಮೂಲೆ ಹಿಡಿದು ಕುಳಿತಿವೆ. ಯಾರೂ ಇಲ್ಲದ ಮನೆ
ಕೌನೆರಳು ಹಾಸಿದೆ. ಒಂದು ವಿರಹ ಗೀತೆ ಮತ್ತು
ಕಥೆಗಳು ಹೇಳದ ಧ್ವನಿಗಳು, ಈ ಸಂಜೆ ಒಂದು
ಮೆರವಣಿಗೆ ಹೋಗಿವೆ. ಮತ್ತೆ ಒಂದು ವಿರಾಮ
ಕೋಣೆಯಲಿ ತುಂಬಿದೆ ಮಳೆ ಹೊಯ್ಯುತಿದೆ.
ಮೋಡಗಳು ಬಾಗಿಲಿಗೆ ಬಂದು ನಿಂತಿವೆ. ಒಳಗೆ
ಬಿಕ್ಕುಗಳು ಯಾವುದೂ ಸರಳವಲ್ಲ ಎಂಬ ಮಾತಲಿ
ಮೌನದ ಕಂಬಳಿ ಹೊದ್ದು ಮಲಗಿವೆ, ಗೋಡೆ ಮೇಲೆ
ಹಲ್ಲಿ ಲೊಚಗುಡುತ್ತಿದೆ. ಸ್ವಲ್ಪ ಅಳು
ಸಂಜೆಗತ್ತಲಲಿ ಅಡಗಿ ಕುಳಿತಿದೆ. ಯಾರೋ ಮನೆಯ
ಸುತ್ತ ಸುಳಿದಾಡುತ್ತಿದ್ದಾರೆ. ಮತ್ತೆ ಹನಿ ಜೋರಾಗಿ ಒಡೆದಿದೆ.
*****