ಬಿರು ಬೇಸಿಗೆಯ ಮಧ್ಯಾಹ್ನ ದೂರದಲ್ಲಿ
ಎಲ್ಲೋ ಚಹಾದ ಅಂಗಡಿಯಲಿ ರೇಡಿಯೋ
ಹಾಡುತ್ತಿದೆ. ರಸ್ತೆ ಇಲ್ಲದ ಊರ ಬಯಲಿನ
ತುಂಬ ಸೂರ್ಯ ಚಾಪೆ ಹಾಸಿದ್ದಾನೆ.
ಮಾವಿನ ಮರದಲ್ಲಿ ಹಕ್ಕಿಗಳು ನೆರಳಿಗೆ ಕುಳಿತಿವೆ.
ಮತ್ತು ಅಂಗಳದ ನೆರಳಿನಲ್ಲಿ ನಾಯಿ ಮಲಗಿದೆ.
ಚಹಾದ ಕಪ್ಪುಗಳು ಸಪ್ಪಳ ಮಾಡುತ್ತಿವೆ
ಅಡುಗೆ ಮನೆಯಲ್ಲಿ.
ತೆರೆದ ನೀಲಿ ಆಕಾಶದಲ್ಲಿ ಒಂದೂ ಮೋಡಗಳ
ತುಣುಕುಗಳು ಇಲ್ಲ. ಈ ಪುಟ್ಟ ಕಿಟಕಿಯ ಸಂದಿಯಿಂದ
ಆಕಾಶ ನನ್ನ ಕೋಣೆಯೊಳಗೆ ಬಂದಿದೆ. ಈಗ ಒಂದು
ಹೊಸ ಹಾಡು ಪದಗಳಿಗಾಗಿ ಹುಡುಕಾಡಿದೆ.
ಚಿಗುರುವ ಬೇವಿನ ಮರಗಳ ಹೂವಾಸನೆ ಹರಡಿದೆ.
ಗಾಳಿ ಈ ಮಧ್ಯಾಹ್ನ ಅವನ ನೆನಪು ಹೊತ್ತು ತಂದಿದೆ.
ಏಕಾಂತದ ಆಲಾಪಗಳು ಹರಿಯದೇ ಮೈತುಂಬ ಬೆವರು.
ಸೂರ್ಯ ಬಾಯಾರಿ ಕುಡಿಯುತ್ತಿದ್ದಾನೆ ನದಿಗಳ ನೀರು.
ಈ ಮಧ್ಯಾಹ್ನ ಬಹಳ ಕಠೋರವಾಗಿ ಸುಡುತಿದೆ
ತಾಯಿ ಮಗುವಿನ ಹಣೆಗೆ ತಣ್ಣೀರು ಪಟ್ಟಿ ಇಡುತ್ತಿದ್ದಾಳೆ.
ಆಸ್ಪತ್ರೆಯ ಮೂಲೆಯಲಿ, ದಮ್ಮು ಹೆಚ್ಚಾದ ಮುದುಕ
ಬಿಟ್ಟು ಬಿಡಲಾರದೇ ಕೆಮ್ಮುತ್ತಿದ್ದಾನೆ. ನೆನಪುಗಳ
ಮತ್ತೆ ಜೊತೆಗೆ ಬರುವ ಸಮಯ ಕೇಳುತ್ತಿದೆ
ಖಾಯಂ ವಿಳಾಸ. ನನ್ನೊಳಿಗಿನ ಹಲವು ಗುಟ್ಟುಗಳು
ಬಾಯಿ ಬಿಡುತ್ತಿಲ್ಲ. ರೇಜಿಗೆ ಸಿಟ್ಟು ಕುದಿದು. ಈ
ಸಂಜೆಯ ಸತ್ಯಗಳು ಎದೆಗೆ ಅಮರಿಸಿವೆ.
*****