ಸುಸಮರ್‍ಥನಾದ ವಿದ್ಯುತ್ ಪುತ್ರನೊಬ್ಬ ತಾನೀ ಭೂಮಿಗಿಳಿದು ಬಂದ
ಅಪ್ರತಿಮ ತ್ವರಿತಗತಿ ಅಗ್ನಿ-ಪಾದಗಳಿಂದ.
ಮಾನವನ ಮೈ ಕಟ್ಟು ಘನಗರ್‍ಜನೆಯ ತೊಟ್ಟು,
ನರಗರ್‍ಭದಲ್ಲಿ ಹುಟ್ಟಿತ್ತು ಬೆಳಕು.
ಸ್ವರ್‍ಗದತಿ ಶಾಂತಗತಿ, ಮಹಿಮೆಯಾ ಮಾಧುರ್‍ಯ, ಪರಿಶುದ್ಧರಾಗ
ಗರಿಗೊಂಡ ಬಲ ಇಳಿದು ಬಂದವಾಗ.
ಎಲ್ಲ ದೇವತೆಗಳೂ ಒಂದೆ ಮರ್‍ತ್ಯ ಶರೀರದಲ್ಲಿ ಬಾಳಿದವು
ಒಂದೇ ಹೆಸರ ತಾಳಿದವು.
ಅಗಲಗಲ ಗತಿಯ ಅಲೆ ಮಸಕು ಭೂಮಂಡಲದಿ ಬಂತು ಬಳಲಿ
ಉತ್ಫುಲ್ಲಸ್ವಪ್ನೋತ್ಥಗುಂಫಗಳಲಿ.
ಭವ್ಯತೆಯ ಕರುವಿಟ್ಟ ಹಾಗೆ ಬಾಳಾಗಿತ್ತು
ಕಡಲಗಲ ಕೈ ಕಾಲ-ಚಕ್ರ ಅಮುಕಿತ್ತು.
ಮಾನವನ ಆತ್ಮ ಮತ್ತೊಮ್ಮೆ ಪಡೆದಿತು ಬಾಳ ಸಾರಥ್ಯ
ಧೀರ ಉದ್ಧತ ದೇವದೇವತೆಗಳಾತಿಥ್ಯ.
ಪ್ರಪ್ರಭಂಜನ ಪಕ್ಷ ಉತ್‌ಕ್ಷಿಪ್ತ ವಾಯುಪಥದಲ್ಲಿ ಹಾರಿತ್ತು
ಭವ್ಯ ಆದರ್‍ಶಕ್ಕೆ ಗುರಿಯಿಟ್ಟು ಎಸೆದ ಈಟಿಯ ಹಾಗೆ ಏರಿತ್ತು.
ಡೆಂಡಣಿಸಿ ಕಳಚಿ ಬಿದ್ದವು ಪುರಾತನಾಯಸ ಕವಚ
ಗೋಡೆ ಸಿಡಿದೊಡೆದು ಬಿದ್ದಿತು ಪುರಾಣ ಪ್ರಕೃತಿ
ತರುಣತರ ಸೌಂದರ್‍ಯ, ಸುವಿಚಾರ, ಸುಪ್ರಭೆಯ ಜಗದಿ
ಹೊಕ್ಕ ದೇವನು ಮತ್ತೆ ತನ್ನ ಹೊಸತನದಿ.
ಮೂಡಿತ್ತು ದೇವವಾಣಿಯ ಸೊಲ್ಲು ಮಾನವರ ತುಟಿಯಲ್ಲು
ಹೃದಯ ಎಚ್ಚತ್ತಿತ್ತು ಮಿಂಚು ಬೆಡಗಿನ ಬಿಳಿಯ ನಸುಕುಗಳಲು
ಗಾಳಿ ಬೆಳಕಿನ ಬಟ್ಟೆ, ಉಸಿರು ಹರ್‍ಷದ ಕುಸರು
ದೇವಲೀಲೆಯ ಆಟದಂತೆ ಬಾಳು.
*****