ಸೌಂದರ್‍ಯಸರಸಿಯೊಳು ಕವನೀಯ ಸುಕುಮಾರ
ಸಿರಿರಾಜಹಂಸವಾಗಿ
ಇಂದು ಮೂಜಗ ಮೀರಿ ಅವರ ಗದ್ದುಗೆ ಏರಿ
ಆಳ್ವ ಅಧಿಕಾರಿಯಾಗಿ
ಋತುರಾಜ ನವತರುಣ ಮಧುವನದ ಅಭಿರಾಮ
ಮೃದು ಮಂದವಾಯುವಾಗಿ
ಅತಿರೂಪಲಾವಣ್ಯ ಅರೆದೆರೆದು ಬಿರಿಬಿರಿದ
ಅರಳು ಹೂದುಂಬಿಯಾಗಿ
ಸುರಗಂಗೆ ತೆರೆಯಾಗಿ ಕೊಚ್ಚಿಕೊಳ್ಳುವೆ ಪಾಪ
ಹರಿದು ಪಾತಾಳ ಮುಟ್ಟಿ
ಮೆರೆವ ಕವಿಕುಲಕುಮುದ ಗರ್‍ಭಸ್ಥ ನಿತ್ಯಸುಧೆ
ಸುರಿಸುರಿಸಿ ಧಾರಿಗಟ್ಟಿ
ಮಕರಂದ ಶರಸೂರೆಯಾಗಿರುವ ಮೃದುಮೃದುಲ
ಕುಸುಮ ನಲಿನಲಿಯುವಲ್ಲಿ
ಸುಕುಮಾರ ಒಳ್ಳಿಮಂಟಪದಲ್ಲಿ ಅಡಗಿ ಮೈ
ಮರೆವೆನಾನಂದದಲ್ಲಿ
ಮನ್ಮನ ಮಹಾಸಿಂಧು ತಳತನಕ ಮುಳುಗುವೆನು
ಮುತ್ತುರತ್ನಂಗಳಲ್ಲಿ
ಜನ್ಮ ಜನ್ಮದ ವಿಪುಲ ಭೋಗಭಾಂಡಾರವನು
ಒಡೆಯುವೆನು ಯೋಗದಲ್ಲಿ
ರವಿಯ ರಥವನ್ನೇರಿ ವಿಶ್ವಭ್ರಮಣವ ಮಾಡಿ
ನಗುವೆನಾ ಆಡಿ ಹಾಡಿ
ಸವಿಸುಖದ ಕಲ್ಪನಾಕಾಶದೊಳು ಹಾರುವೆನು
ಮೋಡಗಳ ಜೋಡಿಗೂಡಿ
ಸುರಸ್ವರ್‍ಗಲೋಕದಾ ಅವರದೂತನು ನಾನು
ನನಗಿಲ್ಲ ಆಹುದು ಬಹುದು
ತಿರುಕರಲಿ ತಿರುಗಿದರು ರಾಜರ್‍ಷಿ ಬ್ರಹ್ಮರ್‍ಷಿ
ದೇವರ್‍ಷಿ ನಾನೆ ಹೌದು
ಚಿರಗಾನ ಲಹರಿಯಲಿ ಸಿರಿಬೆಡಗ ಬೆರಸುತಲಿ
ಬೆಳಸುವೆನು ಭಾವವನ್ನು
ಅರಿಯಲಾರದ ಗೂಢ ಗೀತೆಯಲ್ಲಿ ಹಾಡುವೆನು
ಭುವನದಲ್ಲಿ ಸ್ವರ್‍ಗವನ್ನು
ಝರಿಯಲ್ಲಿ ಬೆರೆಯುವೆನು ಸೇರುವೆನು ಹೂವಿನಲಿ
ನಲಿನಲಿದು ಬಾಳುತಿರುವೆ
ಬರಿಬಯಲಿನಾಕಾಶದುಡಿಯಲ್ಲಿ ಹೊಡಕರಿಸಿ
ಹಕ್ಕಿಯೊಲು ಹಾಡುತಿರುವೆ
*****