ಗೋಪಿಯರೊಡನಾ ಬೃಂದಾವನದಲಿ
ಲೀಲಾ ನಾಟಕವಾಡಿದ ನಲಿದು
ಬೃಂದಾವನವೇ ಕೃಷ್ಣನ ಬಾಲ್ಯದ
ತವರೂರಾಯಿತು ಜಸವನು ಮೆರೆದು.
ಹಿರಿಯರು ಬಂದರು ಹಿರಿತನ ಮರೆದು
ಎಳೆಯರು ಕುಣಿದರು ಕೃಷ್ಣನ ಕರೆದು
ತರುಣಿಯರೆಲ್ಲರು ಮೋಹವ ತೊರೆದು
ಕೊಳಲಿನ ಕೃಷ್ಣನ ರೂಪವ ನೆನೆದು
ಕೃಷ್ಣನ ಕೊಳಲಿನ ಗಾನವ ಕೇಳ್ದು
ಎಲ್ಲರು ಬರುವರು ಆತುರ ತಳೆದು.
ಜನನ-ಮರಣ ಜಂಜಾಟವ ಗೆಲಿದು
ಆತ್ಮದ ದರ್‍ಶನ ಮಾಡಿದ ತಾಣ
ಕೀಳ್ಮೇಲೆಂಬುದು-ಆಳ್-ಪೆಣ್ ಎಂಬುದು
ಮಾಸಿದ ಪಾವನ ಭೂಮಿ ನಿದಾನ.
ಪಶುಪಾಲನೆಯ ಕೃಷಿಕರ ಮಾನ
ಕೃಷ್ಣನ ಕೊಳಲಿನ ಮಧುರಸ ಪಾನ
ಎಲ್ಲರೊಳೊಂದೇ ನೋಟದ ಮೌನ
ಏನಿದು ಎಲ್ಲೂ ಮೆರೆವನು ಜಾಣ
ಮನಕದ್ದೊಯ್ದನು ಜನವನು ಕಾಣ
ಎಲ್ಲರ ಸೆಳೆಯುವ ಮೋಹನ ಬಾಣ.
ಯಮುನಾ ತೀರದ ಮರಗಳ ಮರೆಯಲಿ
ಬೆಟ್ಟದ ಮೇಗಡ ಸರ್‍ವರ ಒಳಗೆ
ಲಾಸ್ಯದಿ ಮೂಡುವ ತಾಪವನಳೆಯುತ
ಬಿಂಬಿಸುತಿರುವನು ಬರುತಲಿ ಹೊರಗೆ
ಗೋಪಿಯರ ಧ್ವನಿ ಕೇಳಿತು ಧರೆಗೆ
ದೂರವ ಕಾಣದೆ ಬಂದರು ಹೇಗೆ?
ಎಲ್ಲಿದೆ ಧಾವತಿ ಮನವೊಂದಾಗೆ
ಒಂದೇ ಕಾಂಬುದು ನೋಡಲು ಹೊರಗೆ
ಆತ್ಮದ ದರ್ಶನ ಮಾಡುತ ಒಳಗೆ
ಭಕ್ತರು ನಿಂದರು ಕೃಷ್ಣನ ಕರೆಗೆ-
ಬೃಂದಾವನದಲಿ ಸರ್‍ವರು ಸ್ತ್ರೀಯರು
ಕೃಷ್ಣನ ಹೂರತಿನ್ನಾವನು ಪುರುಷ
ಮೀರಾದೇವಿಯ ದರ್‍ಶನದಿಂದಲಿ
ಗೋಸ್ವಾಮಿಯ ಮತಿಯಾದುದು ಸರಸ.
ಗೋಪಿಯರಿಟ್ಟರು ಸತ್ಯದ ಕಳಸ
ಭಕ್ತರನೆಯ್ದಿತು ಪ್ರೇಮದ ಪರುಷ
ಆದುದು ಲೋಕದ ಮನ ಸಂತೋಷ
ಇರುವುದು ಇನ್ನೂ ಕೃಷ್ಣನ ಹಾಸ
ಯಮುನಾ ತೀರದ ಮಾನವ ವೇಷ
ನೋಡದೊ ನಿರುತಂ ರೂಪೋದ್ಭಾಸ.
*****