‘ಭವತಿ ಭಿಕ್ಷಾಂದೇಹಿ’
ಭಿಕ್ಷಾಪಾತ್ರೆ ಹಿಡಿದು
ಮನೆ ಮನೆಯಿಂದಲೂ
ಬೇಡಿ ತಂದಿದ್ದು
ಕರಗದ ದಾರುಣ ಸಂಕಟವನ್ನೇ
ಅಗಿದು ಜಗಿದರೂ ತೀರದ ನೋವು
ಸುಮ್ಮನೇ ಪಚನವಾದೀತೇ?
ಬೊಗಸೆಯಲಿ ಆಪೋಷಿಸಿ
ನೀಗಿಕೊಂಡ ಬೋಧಿಸತ್ವನೇನೋ
ಬುದ್ಧನಾಗಿಹೋದ!
ಆದರೆ ಒಳಗಿಳಿದದ್ದು ಸುಮ್ಮನುಳಿದೀತೆ?
ಹೃದಯ ತುಂಬಿ ಕುಡಿದದ್ದು
ಕರುಳೇ ಬಿರಿದು
ನೊಂದ ನೋವೇ ಕಾರುಣ್ಯರಸವಾಗಿ
ಕಣ್ಣು ತುಂಬಿ
ತಣ್ಣಗೆ ಹರಿದು ನೀರಾಗಿ
ಕಣ್ಣೀರ ಸರೋವರವೇ ಮಡುಗಟ್ಟಿತು.
ಸುಡು ಕಾವಿಗೂ ಆವಿಯಾಗದೇ
ಉಳಿದ ದ್ರವರೂಪಿ ನೋವೆಲ್ಲ
ಸೋಸಿ ಸೋಸಿ ತಿಳಿಯಾದ
ಸ್ವಚ್ಛ ನೀರಿನೊಳಗೆ
ಅಚ್ಛ ಬಿಳಿ ಕಮಲ ಬಿರಿದು
ಅದರೊಳಗೆ
ಅರಳಿಕೊಂಡವಳು
ಆ ಬುದ್ದನದೇ ಹೆಣ್ಣುರೂಪ
ತಾರಾ
*****
[ಟಿಬೇಟಿಯನ್ ಬೌದ್ಧಧರ್ಮದ ಪರಿಕಲ್ಪನೆಯಲ್ಲಿ- ನೋವು ನುಂಗಿದ ಬುದ್ಧನ ಸಂಕಟ ಕಣ್ಣೀರಾಗಿ ಹರಿದು ಉಂಟಾದ ಸರೋವರದಲ್ಲಿ ಅರಳಿದ ಕಮಲದಿಂದ ಬುದ್ಧನ ಸ್ತ್ರೀರೂಪವೊಂದು ತಾರಾ ಬುದ್ಧಳಾಗಿ ಹೊರಹೊಮ್ಮಿದ ಕಥೆಯಿದೆ.]