ನೆತ್ತರ ಕಡಲಲಿ ಉತ್ತರ ಹುಡುಕುವ
ಚಿತ್ತದ ಮದರಸ ಸುರಿಯುತಿದೆ
ಸುಂದರ ವನದಲ್ಲಿ ಚಂದಿರ ಸೊರಗಿ
ಕತ್ತಿ ಕಠಾರಿಯ ಬೆಳೆಯುತ್ತಿದೆ.
ನೆತ್ತರ ಮಳೆಯಲಿ ಕತ್ತಲ ಬೆಳೆಗಳು
ತೂಗುವ ತೆನೆಗಳು ಕೆನೆಯುತ್ತಿವೆ
ಮಂದಿರ ಸಿಡಿಲು ಮಸೀದಿ ಗುಡುಗು
ಬೆಳಕಿನ ಕಣ್ಣು ಕರಗುತ್ತಿವೆ.
ತುಂಬಿದ ಕಣ್ಣಲಿ ಕುದಿಯಿತು ಕತ್ತಲು
ಕೆನ್ನೆಯ ಮೇಲೆ ಸಾವಿನ ಸಾಲು
ನರಳುವ ಕರುಳಿಗೆ ಕೊಡುವುದು ಏನು?
ಮನೆಮನೆ ತುಂಬ ಸಾಸಿವೆ ಕಾಳು!
ಹಾದಿಬೀದಿಯ ತುಂಬ ಬಿದ್ದ ಹೂಗಳ ತುಳಿದು
ಚಿಮ್ಮಿ ಹಾರಿತು ರಕ್ತ-ಜೀವಮುಕ್ತ!
ಎತ್ತ ಹೋಯಿತೊ ಎದೆಯು ಹಕ್ಕಿಗಾಡಿನ ಗೂಡು
ಬಿದ್ದ ಕಟ್ಟಡದಲ್ಲಿ ಬೆಂದಾಯಿತೊ
ಸಾಮರಸ್ಯದ ಕರೆಗೆ ಸಹಿ ಹಾಕಿತೊ!
*****