ತೇಲುತಿರುವ ಮುಗಿಲುಗಳಿಗೆ
ಬಳಿದನೊಬ್ಬ ಬಣ್ಣವ
ಎಂಥ ಬಣ್ಣ ಅಂಥ ಬಣ್ಣ ಇನ್ನೆಲ್ಲೂ ಕಂಡುದಿಲ್ಲ
ಹೂವುಗಳಿಗೂ ಹಚ್ಚಿಯಾಯ್ತು ಮರಗಳಿಗೂ ಮೆತ್ತಿಯಾಯ್ತು
ಮಿಕ್ಕುದಿನ್ನು ಮಣ್ಣಿಗೆ
ಚಂದವುಳ್ಳ ಹೆಣ್ಣಿಗೆ
ಹಾರುತಿರುವ ಹಕ್ಕಿಗಳಿಗೆ
ಇತ್ತನೊಬ್ಬ ರಾಗವ
ಎಂಥ ರಾಗ ಅಂಥ ರಾಗ ಇನ್ನೆಲ್ಲು ಕೇಳಿದಿಲ್ಲ
ನದಿಗೂ ಅದನು ಇತ್ತುದಾಯ್ತು ಝರಿಗೂ ಸ್ವಲ್ಪ ಕಲಿಸಿಯಾಯ್ತು
ಮಿಕ್ಕುದಿನ್ನು ಕಡಲಿಗೆ
ಅಕ್ಕರೆಯ ಮಡಿಲಿಗೆ
ಋತುಗಳಾವರ್‍ತನಕ್ಕೆ
ಬರೆದನೊಬ್ಬ ಸೂತ್ರವ
ಎಂಥ ಸೂತ್ರ ಅಂಥ ಸೂತ್ರ ಇನ್ನೆಲ್ಲು ಓದಿಲ್ಲ
ಹಗಲಿಗದನು ಹೇಳಿಯಾಯ್ತು ಇರುಳಿಗೂ ತಿಳಿಸಿಯಾಯ್ತು
ಮಿಕ್ಕುದಿನ್ನು ನಿದ್ದೆಗೆ
ನಿದ್ದೆಯೊಳಗಿನ ಕನಸಿಗೆ
*****