ನಾನು ರಾಧೆಯಲ್ಲ
ನೀನು ಕೃಷ್ಣನಲ್ಲ
ರಾಧೆಯಂಥ ರಾಧೆ ನಾನು
ವಿವಶಳಾದೆನಲ್ಲ ಬೇರೆ ಏನು ಇಲ್ಲ!
ಕೊಳಲ ನುಡಿಸಿ ನೀನು
ನನ್ನ ಕರೆದೆಯಲ್ಲ
ನವಿಲಿನಂತೆ ಒಲವು
ಗರಿಯ ಬಿಚ್ಚಿತ್ತಲ್ಲ
ಮುಗಿಲಿನಂತೆ ನಿಂದೆ
ಮಿಂಚು ನೀನು ತಂದೆ
ವಿವಶಳಾದೆನಲ್ಲ ಬೇರೆ ಏನು ಇಲ್ಲ!
ದೇವರಂತೆ ನೀನು
ನಾನು ನಂಬಲಿಲ್ಲ
ದೇವರಂತೆ ನೀನು
ನನಗೆ ಕಾಣಲಿಲ್ಲ
ಪ್ರೀತಿಯಿಂದ ಕರೆದೆ
ಭೀತಿ ತೊರೆದು ಬೆರೆತೆ
ವಿವಶಳಾದೆನಲ್ಲ ಬೇರೆ ಏನು ಇಲ್ಲ!
ಯಮುನೆಯಲ್ಲಿ ನೀನು
ಕಾದು ಕೂತೆಯಲ್ಲ
ತುಂಗೆಯಲ್ಲಿ ನಾನು
ಹೇಳಿಕೊಂಡೆ ಎಲ್ಲ
ತುಳಸಿಮಾಲೆಯೊಂದು ತೇಲಿ ಬಂತು ನೋಡು
ಎದೆಯು ತುಂಬಿ ಬಂದು ಉಕ್ಕಿತೊಂದು ಹಾಡು
ವಿವಶಳಾದೆನಲ್ಲ ಬೇರೆ ಏನು ಇಲ್ಲ!
ನೀನು ಯಾರು ಎಂದು
ನಾನು ಕೇಳಲಿಲ್ಲ
ನಾನು ಯಾರು ಎಂದು
ನೀನೂ ಹೇಳಲಿಲ್ಲ
ನೀನು ಯಾರು ಎಂದು
ತಿಳಿದೂ ತಿಳಿಯಲಿಲ್ಲ
ನಾನು ಯಾರು ಎಂದು
ಹೊಳೆದೂ ಹೊಳೆಯಲಿಲ್ಲ
ಕೃಷ್ಣ ನೀನೆ ಎಲ್ಲ
ಇನ್ನು ರಾಧೆ ಇಲ್ಲ!
*****