ನೀವು ಶಿವಮೊಗ್ಗೆಯಲ್ಲಿದ್ದ ಹೊತ್ತು-
ನಾವು ಆಗ ತಾನೆ ಕಣ್ಣು ಬಿಟ್ಟಿದ್ದೆವು-ಪುಟ್ಟ ಸಸಿಗಳು
ಸಹ್ಯಾದ್ರಿಯ ಸಂಜೆ ಐದರ ಮಳೆಯಲ್ಲಿ
ತೇಲಿಬಿಟ್ಟ ಕಾಗದದ ದೋಣಿ
ಕೆಸರುಗಾಲಲ್ಲೆ ಲಾಗಾ ಹಾಕಿದ್ದೆವು!
ನೀವು ಕವಿಯೆಂದು, ನಿಮ್ಮ ಕರೆಯ ಮನ್ನಿಸಿ
ಸುರಿದ ಮಳೆಯೆಂದು ನಮಗೇನು ಗೊತ್ತು?
ಹಾಂ! ಮಳೆಯ ಅನಂತರ ಮೂಡಿತು ನೋಡಿ
ಬಣ್ಣದ ಕಾಮನ ಬಿಲ್ಲು-
ಮಾರನೆಯ ದಿನ ಹಚ್ಚ ಹಸುರು ಹುಲ್ಲಿನ ನಡುವೆ
ಲಕಲಕಿಸುವ ಹಳದಿ ಹೂವುಗಳು!
ನೀವು ಶಿವಮೊಗ್ಗೆಯಲ್ಲಿದ್ದ ಹೊತ್ತು-
ನಾವು ಆಗತಾನೆ ತೊದಲು ನುಡಿಯುತ್ತಿದ್ದೆವು-ಪುಟ್ಟ ಬಾಲಕಿಯರು
ನನ್ನೂರ ಜೋಗವ್ವ ಸಿರಿವಂತೆಯಾದಳು ನಿಮ್ಮಿಂದ
ತುಂಗೆಗೆ ಪ್ರಾಣ ತುಂಬಿದಿರಿ, ಬಾಗಿ ಬಳುಕಿದಳವಳು ಸ್ವಚ್ಛಂದ
ನೀವು ಕವಿಯೆಂದು, ಅದು ನಿಮ್ಮದೇ ಕವಿತೆಯೆಂದು….
……..ನಮಗೇನು ಗೊತ್ತು?
`ನೀ ನುಡಿಯದಿರಲೇನು…..ಬಯಲಾಗಿಹುದು ಎಲ್ಲ….’
ಕೇಳಿದವರು ತಲೆದೂಗುವಂತೆ ಹಾಡಿ ಗಿಟ್ಟಿಸಿದೆವು ಬಹುಮಾನ
‘ಕುರಿಗಳು, ಸಾರ್ ಕುರಿಗಳು….’ ನಿಮ್ಮದೇ ಪದ್ಯ ಛೂ ಬಿಟ್ಟು
ಕಳೆದೆವು ಹುಡುಗರ ಮಾನ
ಲಂಗ ದಾವಣಿಯ ಮೊಂಡು ಹುಡುಗಿಯರು ನಾವು-
ಸಭೆಗೆ ನಿಮ್ಮದೇ ಅಧ್ಯಕ್ಷತೆ, ಭಾಷಣ ಕೇಳುವ ಶಿಕ್ಷೆ!
ಹಿಂದಿನ ಬೆಂಚಿಗೆ ಆತು, ಮೂಲೆಯಲ್ಲೆಲ್ಲೋ ಕೂತು
ಕೋಟು-ಬೂಟಿನ ನಿಮ್ಮ ನಿತ್ಯ ವೇಷಕ್ಕೆ ಹ್ಯಾಟೂ ಕಲ್ಪಿಸಿ,
ಘನವಾದ ನಿಮ್ಮ ಪಂಡಿತ ಕನ್ನಡ ಭಾಷಣಕ್ಕೆ
ಕಚ್ಚೆ-ಪಂಚೆ, ಜುಬ್ಬಾ ಹೊಲಿಸಿ, ನಾಮ ಎಳೆದು
ಮುಸಿ ಮುಸಿ ನಕ್ಕಿದ್ದೆವು!
`ನಿಮ್ಮೊಡನಿದ್ದೂ ನಿಮ್ಮಂತಾಗದೆ….’
ತೆಗೆದುಕೊಳ್ಳಿ ನಿಮ್ಮ ಮಾತು ವಾಪಸ್ಸು
ನಮ್ಮೊಡನಿರಿ ಸದಾ ಹೆಚ್ಚಾಗಲಿ ಆಯಸ್ಸು.
*****