ಎಲ್ಲಿ ಹೋಗಲಿ ಹೇಗೆ ಬದುಕಲಿ
ಎಲ್ಲಿ ಹಾಡಲಿ ಎಲ್ಲಿ ನಲಿಯಲಿ
ನಮ್ಮ ಕನಸುಗಳಿಗೆ ಕಿಚ್ಚು ಇಟ್ಟರು
ಬದುಕಿನೊಂದಿಗೆ ಇವರ ಚೆಲ್ಲಾಟ
ಬಂಗಲೆಗಳಲ್ಲ ಅರಮನೆಗಳಲ್ಲ
ಪ್ರಕೃತಿಯೇ ನಮ್ಮ ಮಡಿಲು
ನಮ್ಮಷ್ಟಕ್ಕೆ ನಮ್ಮನ್ನು ಬಿಡಿ ಬದುಕಲು
ಕೇಳುವವರ್‍ಯಾರು ನಮ್ಮ ಆಕ್ರಂದನ
ಅಪ್ಪಚ್ಚಿಯಾದ ಮರಿಗಳೆಷ್ಟೋ
ಚೂರು ಚೂರಾದ ತತ್ತಿಗಳೆಷ್ಟೋ
ಗೂಡ ಕಟ್ಟಲೆಲ್ಲಿ ಮರಿ ಮಾಡಲೆಲ್ಲಿ?
ಎಲ್ಲಿ ಹಾಡಲಿ ಜೋಗುಳವ
ಹಸಿರುಸಿರೇ ನಮ್ಮ ಜೀವ
ಕುತ್ತು ತಂದರು ಪ್ರಾಣವಾಯುವಿಗೆ
ಬಂದಿತು ಸಂಚಕಾರ ನಮ್ಮ ನೆಲೆಗೆ
ಪರಿಸರವಾದಿಗಳಲ್ಲಿ ಅಡಗಿಹರು?
ಸಾಲು ಮರದ ತಿಮ್ಮಕ್ಕನೇ
ಬಾ ನೋಡಿಲ್ಲಿ-
ಕರಗಸ ಕತ್ತಿ ಕೊಡಲಿ
ಯಮದೂತರ ಅಟ್ಟಹಾಸ
ರಸ್ತೆ ಅಗಲೀಕರಣದಲಿ
ನಿತ್ಯ ನಡೆಸುತಿಹರು
ಸಾಲು ಮರಗಳ ಮಾರಣ ಹೋಮ
ಆಗುವುದು ಪ್ರಕೃತಿ ವಿಕೃತಿ
ಇನ್ನೆಲ್ಲಿಯ ಚಿಲಿಪಿಲಿ ಕಲರವ
ಬೆಳ್ಳಿಚುಕ್ಕಿ ಮೂಡುವುದೆಂತು
ಕನಸುಗಳ ಕಟ್ಟುವವರ್‍ಯಾರು?
ರೋದನವ ಕೇಳುವವರಾರು?
*****
೨೭ ಮೇ ೨೦೧೦ ರ ಸುಧಾದಲ್ಲಿನ ಎಳೆಯರ ಅಂಗಳದಲ್ಲಿ ಪ್ರಕಟ
೬-೬-೨೦೧೦ ರ ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭದಲ್ಲಿ ಪ್ರಕಟ.