ಯಾವ ಜನುಮದ ಪುಣ್ಯವೋ
ಎನ್ನ ಮನದುಂಬಿ ಬಾಳ ಸಂಗಾತಿಯಾಗಿ ನೀ
ಬಂದಾಗಿನ ಸಂತಸದ ಕ್ಷಣದ ಹಾಡು ಹಾಡಲೇ
ನಿನ್ನ ಕಣ್ಣಿನ ಕುಡಿಮಿಂಚು ಕೋಲ್ಮಿಂಚು
ಎನ್ನೆದೆಯ ನಾಟಿ ಮೀಟಿ ಪ್ರೀತಿ ಬೀಜವ ಬಿತ್ತಿ
ಹೃದಯದಲಿ ಮೊಳಕೆಯೊಡೆದ ಹಾಡು ಹಾಡಲೇ
ಮೋಹಕ ನಗೆಯ ಹಾಲು ಹೊಳೆಯ
ಹರಿಸಿದ ಈ ಶಿಲ್ಪ ಕಲೆಯ ಕಂಡು ಗಿರಿ ಬನದ
ಕೋಗಿಲೆಯಾಗಿ ಝರಿಯಾಗಿ ಹಾಡು ಹಾಡಲೇ
ನೀ ಮುಡಿದ ಮಲ್ಲಿಗಿ ಪರಿಮಳವ ಹೀರುತ
ಕುಲು ಕುಲು ನಗೆಯ ಮೊಗ್ಗಿನ ಮೊಗವ ಕಂಡು
ಎನ್ನಮನ ಹಿಗ್ಗಿ ಹರುಷಗೊಂಡ ಹಾಡು ಹಾಡಲೇ
ಬಾಳ ಪುಸ್ತಕವ ಬಿಚ್ಚಿ ಕಳೆದ
ಸರಸಿನ ಸೊಬಗಿನ ದಿನಗಳ ನೆನೆದು
ಸುಖ ದುಃಖದ ಸಮ್ಮಿಳನದ ಹಾಡು ಹಾಡಲೇ
ದೇವ ಕನ್ನಿಕೆಗೂ ನಾಚಿಸುವ ಚೆಲುವು ನಿನ್ನದು
ಮಗ್ಗುಲಲಿ ನೀನಿಂತರೆ ನಾನಾದೆ ಇಂದ್ರ ಚಂದ್ರ
ಕುಣಿದು ಕುಪ್ಪಳಿಸಿ ಹೆಜ್ಜೆ ಇರಿಸಿದ ಹಾಡು ಹಾಡಲೇ
ಲತೆಯಾಗಿ ಸುಮವಾಗಿ ಎನ್ನೆದೆಯ ಸುಧೆಯಾಗಿ
ಬಂದ ತಂಗಾಳಿ ಸಂಜೆಯಲಿ ಕಳೆದ
ರಸ ನಿಮಿಷದ ಬದುಕ ಹಸನಾಗಿಸಿದ ಹಾಡು ಹಾಡಲೇ
ನಿನ್ನೊಲವಿನಲಿ ಜೇನಿನಧರದ ಸವಿಯಲಿ
ಎನ್ನನ್ನಿರಿಸಿದೆ ಅಗಣಿತ ತಾರ ಲೋಕಗಳ ನಡುವೆ
ನೀನಿಲ್ಲದೆ ಸಗ್ಗದಾ ಕದವ ತೆರೆಯದ ಹಾಡು ಹಾಡಲೇ……
*****