ನೋಡಿ ಕೊಂಡು ಬರಲಿ
ಯಾರಿಗಾದರು ಸಹಜವಲ್ಲವೆ
ಹೆತ್ತು ಹೊತ್ತವರ ತನ್ನೆಲ್ಲ ಹತ್ತಿರದವರ ನೋಡ ಬೇಕೆಂಬ ಆಸೆ.
ಹೊತ್ತು ತರಲಿ ನೆನಪಿನ ಬುತ್ತಿಯನು
ನೆನಪು ಉತ್ತೇಜನಕಾರಿಯಲ್ಲವೆ!
ನಾವಾದರೆ
ಎಲ್ಲೆಲ್ಲೋ ತಿರುಗಿ ಬರುವೆವು
ಅವಳಿನ್ನೆಲ್ಲಿಗೆ ಹೋಗಿ ಬರಬೇಕು
ಎಲ್ಲರಿಗೂ ಸುಸ್ತು-ಸಾಕು ಇರುವುದೇ ತಾನೆ!
ನಿಜ,
ನಾನು ಬೇಡವೆಂದರೆ ಹೋಗಲಾರಳು
ಸುಮ್ಮನಾಗುವಳು
ಹಾಗೆಯೆ… ಆಮೇಲಿನದ ಕೂಡ ನಾನು ಸ್ವಲ್ಪ ವಿಚಾರ
ಮಾಡಬೇಕು-
ಕಳಿಸದಿದ್ದರೆ…
ಮೌನ ಮನೆಯನಾಳತೊಡಗುವುದು
ಮಾತು ಕತೆಯೆ ನಿಂತು ಹೋಗಬಹುದು
ಒಟ್ಟಾರೆ ಮನೆಯ ಲಕ್ಷಣವೇ ಕೆಟ್ಟು ಹೋಗಿ
ಸೂತಕವು ಮನೆಯಲ್ಲಿ ಬೀಡು ಬಿಡ ಬಹುದು
ನಿರ್ಜೀವ ಪಾತ್ರೆಗಳಿಗೂ ಜೀವ ಬರಬಹುದು.
ಮಾತು, ಗೊಣಗು, ಗುಸ್ಸದ ರೂಪತಾಳಿ
ಇರುಸು-ಮುರುಸು ಸರ್ವೇ ಸಾಮಾನ್ಯವಾಗ ಬಹುದು.
ಹೋಗಿ ಬರಲಿ
ಎಷ್ಟ ದಿನಗಳು ಮಹಾ!
ಅತ್ತಲೇ ಏನು ಹೋಗುವುದಿಲ್ಲವಲ್ಲ
ಅವಳ್ಹೋದರೇನು ಊರು, ಮನೆಯನ್ನು ಜೊತೆಯಲ್ಲಿ
ಒಯ್ಯುವಳೇನು?
ಸಮಸ್ಯೆ
ಊಟ ತಿಂಡಿಯದು ತಾನೆ!
ಅಲ್ಲೋ, ಇಲ್ಲೋ, ಎಲ್ಲೋ ಒಂದು ಕಡೆ ತಿಂದರಾಯಿತು
ಅವಳಿಲ್ಲದಿದ್ದರೇನು
ನನ್ನಷ್ಟಕ್ಕೆ ನಾನು ಬದುಕಲಾರೆನೇನು?
ಇವಳೇ ಇದ್ದಳೇನು
ನನಗೆ ತಡಾಯ ಮೊದಲು?
ಹಾಯಾಗಿ ಒಂದೆರಡುದಿನ
ಸುಖವಾದ ಬ್ರಹ್ಮಚಾರಿ ಜೀವನವ ನೆನೆಪಿಸಿ ಕೊಳ್ಳಬಹುದೆಂದು
ಉಢಾಫೆ ವಿಚಾರದಲ್ಲಿ ಉದಾರನಾಗಿ
‘ಹೋಗಿ ಬಾ’ ಎಂದೆ
ಪೇಚಿಗೆ ಸಿಕ್ಕಿಕೊಂಡೆ.
ಸಣ್ಣದು, ಪುಟ್ಟದು, ನನ್ನದೆಲ್ಲಕ್ಕು ಅವಳ ಕಡೆ ನೋಡಿ
ಅಭ್ಯಾಸವಾಗಿದ್ದ ನನಗೆ
ಅದು ಬೇಕು!
ಇದು ಬೇಡ! ವೆನಿಸಿಬಿಟ್ಟಿತು ಬೇಗ.
ಎಲ್ಲಾ ಇದ್ದು, ಏನೂ ಇಲ್ಲದಂತಾಗಿ
ಒಂಟಿ, ಒಂಟಿಯೆನಿಸಿ
ಅವಳಿಲ್ಲದ ಕೊರತೆ ದೊಡ್ಡದಾಗಿ ಬೆಳೆದು
ಬದುಕು, ಅನುಕ್ಷಣವು ದುಸ್ಸಹನೀಯ ವೆನಿಸಿ ಬಿಟ್ಟೋಯ್ತು
ಇದು ಹೀಗೆ ಮುಂದುವರಿದರೆ
ಹತ್ತಿರದಿ ನನಗೆ ಹುಚ್ಚು ಹಿಡಿಯುವುದು ಖಾತರಿ
ಯೆಂಬ ಭಯವಾವರಿಸ ತೊಡಗಿತು.
*****