ಇಷ್ಟ ದೇವತೆಯೆಂದು
ಅಷ್ಟ ಸ್ತೋತ್ರವ ಹಾಡಿ
ಧನ-ಕನಕ ಅರ್ಪಿಸಿ
ಪೂಜಿಸಿದವರೆ…
ಎಲ್ಲಿ ನಾರಿಯರು
ಪೂಜಿಸಲ್ಪಡುತ್ತಾರೋ
ಅಲ್ಲಿ ದೇವತೆಗಳ ಹಾಜರಿ
ಪ್ರಮಾಣಿಸಿದವರೇ…
‘ತಾಯಿಗಿಂತ ದೇವರಿಲ್ಲ…
ಜನನಿ ತಾನೆ ಮೊದಲ ಗುರುವು’
ಕಂಠಪಾಠ ಒಪ್ಪಿಸಿ
ಉದ್ದಂಡ ನಮಸ್ಕರಿಸಿ
ಧನ್ಯರಾದವರೇ…
ಶಿಲೆ, ಕಲೆ, ಕಾವ್ಯಗಳಲ್ಲಿ
ಬಣ್ಣಿಸಿ, ಮಾತುಗಳ
ಮಹಾಪೂರ ಹರಿಸಿ
ಸಂಭ್ರಮಿಸಿದವರೇ…
ಕಟ್ಟು-ಕಟ್ಟಳೆ ವಿಧಿಸಿ
ನಿಷೇಧಗಳ ಹೊರೆ ಹರಿಸಿ
ಕಣ್ಗಾವಲಿರಿಸಿ ಕಾಪಾಡಿದ
ಧರ್ಮ ಸಂರಕ್ಷಕರೇ…
ಕಲ್ಲು, ಮಣ್ಣು, ನೀರು
ಗಿಡ, ಮರ, ಹೂವು, ಹಣ್ಣು
ಪಶು-ಪಕ್ಷಿ, ಕ್ರಿಮಿ-ಕೀಟಗಳಲ್ಲಿ
ನನ ಕಂಡು ಕರಗಿದ
ಪವಿತ್ರಾತ್ಮರೇ…
ಕಟ್ಟ ಕಡೆಯ ಮನುಷ್ಯನನು
ಮುಟ್ಟಬಾರದು
ಹೆಣ್ಣು ಹುಟ್ಟಬಾರದು
ಇದಲ್ಲವೆ ಅಲಿಖಿತ ಅನುಶಾಸನ?
ರಕ್ತಗತವಾಗಿ ಹರಿದು
ಉಳಿದಿರುವ ಮರಣಶಾಸನ!
ಮುಟ್ಟುವ ಹಕ್ಕಿಗೆ
ಹುಟ್ಟುವ ಹಕ್ಕಿಗೆ
ಅಂತಃಸಾಕ್ಷಿಯೇ ಮೈಯಾಗಿ
ಅಂತಃಕರಣವೇ ಕೈಯಾಗಿ
ರುಜು ಮಾಡಬೇಕಿದೆ.
ನಾನಳಿದು ಹೇಗೋ ಉಳಿದು
ನಮ್ರವಾಗಿ ಕೆಳಗಿಳಿದು
ಬೆಟ್ಟದಡಿ ಹುಲ್ಲಾಗಿ
ಗಿಡದಡಿ ಕಲ್ಲಾಗಿ ಬಾಳುವೆ.
ಹೇಳು ಏನಾಗುವೆ
ಹೇಳು…ನೀ ಏನಾಗುವೆ?
*****