ನನ್ನಮ್ಮ ಬಂದಳು ನನ್ನಪ್ಪ ಬಂದರು
ನನ್ನಣ್ಣ ತಮ್ಮದಿರು ನನ್ನಕ್ಕ ತಂಗೇರು,
ನನ್ನವರು ಬಂದರೆಂದು ಸಂಭ್ರಮ ಪಡುವಂಗಿಲ್ಲ
ಸ್ವತಂತ್ರವಾಗಿ ಒಂದು ಕರ್ರಂದು ಬೆಳ್ಳಂದು ಮಾಡಿಡುವಂಗಿಲ್ಲ
ಕಷ್ಟ, ನಷ್ಟ ಅಂದರೆ ಕೈಲಾದ್ದ ಮಾಡುವಂಗಿಲ್ಲ
ಆದರೂ… ಈ ಮನೆ, ಆಸ್ತಿಯ ಸಹ ಯಜಮಾನಿ!
ಅಪ್ಪ ಅಮ್ಮನ ದಿನಗಳು ಆಗುತ್ತ ಬಂದವು
ಸಾಕೋದು, ಸೇವೆ ಮಾಡುವುದಂತೂ ಆಗಲಿಲ್ಲ
ಎಡಕ್ಕೂ ಬಲಕ್ಕೂ ಹೋಗಿ ನೋಡಿಕೊಂಡು, ಮಾತಾಡಿಸಿಕೊಂಡು
ಬರೋಣಾಂದ್ರೆ
ನನ್ನಿಚ್ಛೆಯಲ್ಲ,
ಇವರ ಮರ್ಜಿ ಹಿಡಿಬೇಕು
ಕಟ್ಟು ಮಾಡಿದಂಗೆ ಬಂದು ಬಿಡಬೇಕು
ತಪ್ಪಿದರೆ ಇದೇ ಕೊನೆ ಅಂಡ್ಕೊಂಡು ಬಿಡಬೇಕು,
ಇದು ನನ್ನ ಅವಸ್ಥೆ ನೋಡಿ,
ಅನ್ನ ನಾನು ತಿಂದರೆ ನನ್ನನ್ನು ಅನ್ನ ತಿನ್ನುತ್ತಿದೆ-
ಕಡುಕಷ್ಟ ಅನುಭವಿಸಿ ಜನ್ಮ ಕೊಟ್ಟವರು
ಬಿದ್ದರೆ ಎದ್ದರೆ ತಮಗೇ ನೋವಾಯಿತೆಂದವರು
ನಡೆ, ನುಡಿ ಕಲಿಸಿ
ಮಾಂಸದ ಮುದ್ದೆಯೊಂದನ್ನು ಮನುಷ್ಯಳನ್ನಾಗಿ ತಿದ್ದಿದವರು
ಆಸ್ಥೆಯಿಂದ ಹತ್ತಾರು ಕಡೆ ನೋಡಿ, ಮಾಡಿ, ಕುದುರಿಸಿ,
ಖರ್ಚುಮಾಡಿ,
ಹುಡುಗಾಟವಲ್ಲ ಇದು!
ಮುಕ್ಕಣ್ಣನ ರೀತಿ ತಾವು ವಿಷವುಂಡು
ನನಗೆ ಅಮೃತ ಉಣಿಸಿದವರು, ಅವರ
ಅವರ ರಕ್ತ ಮಾಂಸವೇ ಆದ ನಾನು
ಅವರಿಗೆ ಮಾಡಿದ್ದೇನು?-
ಸತ್ತಾಗ ಒಂದು ಕಾಯಿ, ಕಡ್ಡಿ,
ಬೊಗಸೆ, ಬೊಗಸೆ ಕಣ್ಣೀರು ಅಷ್ಟೆ!
ಛಿ! ನಾನೊಬ್ಬ ಕೃತಘ್ಞಳು.
*****