ನಮ್ಮ ಶತ್ರುವು ನಮಗೆ ಕಾಣುತ್ತಿಲ್ಲ
ವಿಜಯವು ಹೇಗೆ….
ಇನ್ನು ವಿಜಯವು ಹೇಗೆ?
ಕಾಣುವ ದಾರಿ ಕಂಡರೂ ತುಳಿಯುತ್ತಿಲ್ಲ
ಮಾತುಗಳೇಕೆ….
ಇನ್ನು ಭವಿಷ್ಯ ಹೇಗೆ? //ಪ//
ಭೂಮಿಗೆ ಇಲ್ಲ ಬರ; ಆದರೂ ಕೊಳೆಗೇರಿಗಳು
ನದಿಗಳಿಗಿಲ್ಲ ಬರ; ಆದರೂ ಹೋರಾಟಗಳು
ತಪ್ಪಿದೆ ತಾಳ ಎಲ್ಲಿ?
ತಪ್ಪಿವೆ ಹೆಜ್ಜೆಗಳೆಲ್ಲಿ?
ಬಲ್ಲವರಾರು ಇದನು?
ಕೇಳಲು ಇಹರೆ ಇದನು? ||೧||
ಇಲ್ಲಿಯವರೆಗೂ ಗಂಟು; ಬಿಡಿಸಿಕೊಳ್ಳೆವೆ ಇದನು
ನರನೆ ಹಾಕಿದ ಗಂಟು; ಬಿಡಿಸನೆ ನರಮಾನವನು
ಆದರೂ ಗಗನಕೆ ದೃಷ್ಟಿ
ಇದು ಯಾವ್‌ಬಗೆಯ ಸೃಷ್ಟಿ
ತಿಳಿಯದಿದ್ದರೆ ನೆಲವ
ಸೇರಲೆಬೇಕು ತಳವ ||೨||
ಜೊತೆಯವರು ನಡೆದಿರಲು; ಮುಂದಕೆ ಇನ್ನೂ ಮುಂದಕೆ
ನಮ್ಮ ಹೆಜ್ಜೆಗಳು ಯಾಕೆ; ಹಿಂದಕೆ ಇನ್ನೂ ಹಿಂದಕೆ
ಅನ್ಯರಿಗಿರದ ಶತ್ರು
ನಮಗೆ ಮಾತ್ರವೆ ಹೇಳಿ
ಅವರು ಕಾಣಲು ಭವಿಷ್ಯ
ನಮಗೆ ಏತಕೆ ಜೋತಿಷ್ಯ? ||೩||
*****