ಹುಟ್ಟಿದೂರಿನ ಬಗೆಗೆ ಇರುವ ಭಾವನಾತ್ಮಕ ನೆಲೆ ಹೇಗಿರುತ್ತದೆಯೆಂಬುದನ್ನು ಅನುಭವಿಸಿಯೇ ತಿಳಿಯಬೇಕು. ವ್ಯಾವಹಾರಿಕತೆಯನ್ನು ಮನೋಧರ್ಮವನ್ನಾಗಿ ಮಾಡಿಕೊಂಡವರಿಗೆ ಮಾತ್ರ ವಿಶೇಷ ಸೆಳೆತಗಳು ಸಾಧ್ಯವಿಲ್ಲ. ಇಂಥವರು ಎಲ್ಲಿದ್ದರೇ ಅಲ್ಲೇ ಹುಟ್ಟಿದಂತೆ ಭಾವಿಸಿ ಬಿಡುತ್ತಾರೆ; ಬಂಧನದ ನೆಲೆಗಿಂತ ಬಿಡುಗಡೆಯ ನೆಲೆಯೇ ಇವರ ಕೇಂದ್ರವಾಗುತ್ತದೆ. ಎಲ್ಲಿಂದ ಯಾವಾಗ ಬೇಕಾದರೂ ಅವರು ಬಿಡುಗಡೆಗೊಳ್ಳಬಲ್ಲರು. ಲಾಭ-ನಷ್ಟಗಳಲ್ಲಿ ಬದುಕನ್ನು ಗ್ರಹಿಸುವ ಇಂಥವರು ವಿದೇಶದ ವಯ್ಯಾರದಲ್ಲಿ ಹೂತುಹೋಗಬಲ್ಲರು. ಸ್ವದೇಶದಲ್ಲೂ ಸ್ವಾರ್ಥ ಕೇಂದ್ರಿತ ಬದುಕಿಗೆ ಮಾರಿಕೊಳ್ಳಬಲ್ಲರು. ಕಲಿತ ವಿದ್ಯೆಯಲ್ಲಿ ಹುಟ್ಟೂರ ನೆನಪನ್ನು ಹುಟ್ಟಡಗಿಸಬಲ್ಲರು.
ನಾವು ಇವತ್ತು ಯಾವುದನ್ನು ರಾಷ್ಟ್ರೀಯತೆ ಎಂದು ಭಾವಿಸುತ್ತೇವೆಯೊ ಅದಕ್ಕೆ ಪೂರಕವಾಗಿ ಉಪರಾಷ್ಟ್ರೀಯತೆಯ ಬದ್ಧತೆ ಬೇಕು. ಉಪರಾಷ್ಟ್ರೀಯತೆಯ ಮೂಲಕ ರಾಜ್ಯವೊಂದರ ವೈಶಿಷ್ಟ್ಯತೆಗೆ ಒತ್ತುಕೊಡುವಾಗ ನನ್ನ ಜಿಲ್ಲೆ ನನ್ನ ತಾಲ್ಲೂಕು, ನನ್ನವರು ಎಂಬ ಭಾವನಾತ್ಮ ಕತೆಯೂ ಬೇಕು. ಹುಟ್ಟೂರಿನ ಮೂಲಕ ದೇಶವನ್ನೂ, ದೇಶದ ಮೂಲಕ ಹುಟ್ಟೂರನ್ನೂ ನೋಡುವುದು ಸಾಧ್ಯವಾದಾಗ ನಮ್ಮ ಮನಸ್ಸು ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುತ್ತದೆ. ಇಲ್ಲದಿದ್ದರೆ, ಸ್ವಾಸ್ಥ್ಯದ ಜಾಗವನ್ನು ಸ್ವಾರ್ಥ ಆವರಿಸಿ ದೇಶ-ಊರು ಎಲ್ಲವನ್ನೂ ಅನಾರೋಗ್ಯದ ನೆಲೆಗೆ ತಂದು ನಿಲ್ಲಿಸಿ ನೋಡತೊಡಗುತ್ತದೆ.
ನನಗೆ ನನ್ನೂರು ಎನ್ನುವುದು ಯಾವತ್ತೂ ಸೆಳೆತದ ಕೇಂದ್ರ, ದೇಶ ಕೋಶಾದಿಗಳನ್ನು ಪೂರ್ತಿ ನೋಡದ ಒಂದು ವಯಸ್ಸಿನಲ್ಲಿ ನಮಗೆಲ್ಲ ಹುಟ್ಟೂರೇ ವಾಸ್ತವ; ಉಳಿದದ್ದು ಕನಸು; ಕೆಲವೊಮ್ಮೆ ಭ್ರಮೆ. ವಾಸ್ತವದ ಹುಟ್ಟೂರಿನಲ್ಲಿ ಕಟ್ಟುವ ಕನಸುಗಳು ಭ್ರಮೆಯಾಗದಂತೆ ನೋಡಿಕೊಳ್ಳುವ ಹೊಣೆ ಮತ್ತು ಹೋರಾಟವೇ ನಮ್ಮಂಥವರ ಬದುಕು.
ನಾನು ಹುಟ್ಟಿದ್ದು ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನ ಬರಗೂರು ಎಂಬ ಊರಿನಲ್ಲಿ. ಬೆಳೆದು ನಿಂತವರಿಗೆ ಬಾಲ್ಯದ ನೆನಪು ಕೊಡುವ ತಂಪು ಅನುಭವಕ್ಕೆ ಇಂದಿನ ಬಿಸಿಬದುಕು ಕಾರಣವೊ ಬಾಲ್ಯದ ಶಕ್ತಿ ಸೆಳೆತಗಳೇ ಕಾರಣವೊ, ಒಟ್ಟಿನಲ್ಲಿ ಈ ಹೊತ್ತು ಕೂಡ ನನ್ನೊಳಗೆ ನನ್ನೂರು – ಬರಗೂರು – ಒಂದು ಭಾವನೆಯಾಗಿ ತುಂಬಿಕೊಳ್ಳುತ್ತದೆ. ಕಳೆದುಹೋದ ದಿನಗಳಿಗೆ ಕಳವಳಿಸುತ್ತ ಗತವೈಭವದ ವರದಿಗೆ ನನ್ನೂರನ್ನು ಸೇರಿಸುವ ಇಚ್ಛೆ ನನ್ನದಲ್ಲವಾದರೂ, ವಾಸ್ತವದ ಒಳಆವರಣವನ್ನು ಅನಾವರಣಗೊಳಿಸಿಕೊಳ್ಳುವ ಒಳ ಇಚ್ಛೆ ಒತ್ತಡವಾಗುತ್ತಿದೆ…
ಆಗ ನಾನಿನ್ನು ಶಾಲಾ ಬಾಲಕ, ನಮ್ಮೂರಲ್ಲಿ ಒಂದು ಪ್ರಾಥಮಿಕ ಶಾಲೆ, ಮತ್ತೊಂದು ಮಾಧ್ಯಮಿಕ ಶಾಲೆ (ಈಗ ಎರಡನ್ನೂ ಸೇರಿಸಿ ಉನ್ನತ ಪ್ರಾಥಮಿಕ ಶಾಲೆ – ಎಂದು ಕರೆಯಲಾಗುತ್ತಿದೆ). ನಮ್ಮೂರಿನ ಶಾಲೆ ತುಂಬಾ ಹಳೆಯದೆಂದೂ ಇಲ್ಲಿ ಓದಲು ಅಕ್ಕಪಕ್ಕದ ತಾಲ್ಲೂಕಿನ ಹುಡುಗರೆಲ್ಲ ಬಂದು ಬರಗೂರಲ್ಲೇ ನೆಲೆಸುತ್ತಿದ್ದರೆಂದೂ ಹಿರಿಯರು ಹೇಳುತ್ತಿದ್ದಾಗ ನನಗೆ ಏನೋ ಹೆಮ್ಮೆ. ಪರ ಊರಿಂದ ಬಂದವರಿಗೆ ನಮ್ಮೂರ ಗೌಡರ ಮನೆಯಲ್ಲಿ ಉಚಿತ ಊಟದ ವ್ಯವಸ್ಥೆಯಿದ್ದದ್ದು ಇದಕ್ಕೆ ಒಂದು ಕಾರಣವಾಗಿರಬಹುದು. ಅದೇನೇ ಇರಲಿ, ಬರಗೂರಿಗೆ ಬೇರೆ ಬೇರೆ ಸ್ಥಳದಿಂದ ಬಂದು ಓದುವ ಶಿಕ್ಷಣಾರ್ಥಿಗಳಿದ್ದರು ಎಂದರೆ ನಮ್ಮೂರಿನ ಪ್ರಾಥಮಿಕ -ಮಾಧ್ಯಮಿಕ ಶಾಲೆಗಳು ಹಿಂದಿನ ಘಟಿಕಾಸ್ಥಾನವೊ ಇಂದಿನ ವಿಶ್ವವಿದ್ಯಾಲಯವೊ ಆದಷ್ಟು ಆನಂದವಾಗುತ್ತದೆ. ಮನುಷ್ಯನ ಮನಸ್ಸೇ ಹೀಗಿದೆಯೇನೋ ಗೊತ್ತಿಲ್ಲ. ತನ್ನೂರು ಐತಿಹಾಸಿಕ ಮಹತ್ವ ಪಡೆದಿದೆಯೆಂದು ಹೇಳಿಕೊಳ್ಳುವ ಹೆಮ್ಮೆಯನ್ನು ತುಂಬಿಕೊಳ್ಳಬಯಸುವುದು ಈ ದೇಶದ ಒಂದು ‘ವಿಶಿಷ್ಟತೆ’ಯೇ ಆಗಿದೆ. ಇದು ಅನ್ಯರಿಗಿಂತ ಕಡಿಮೆಯಿಲ್ಲವೆಂಬ ಆತ್ಮರತಿಯಲ್ಲಿ ಹುಟ್ಟಿದ್ದೋ, ಕೀಳರಿಮೆಯನ್ನು ಕಳೆದುಕೊಳ್ಳುವ ಒಂದು ಪ್ರಕ್ರಿಯೆಯೊ ಆಗಿರಬೇಕು. ಆದ್ದರಿಂದಲೇ ನಾನು ನಮ್ಮೂರಲ್ಲಿ ಯಾರಾದರೂ ಒಂದು ದೊಡ್ಡಮನೆಯನ್ನು ಇಟ್ಟಿಗೆಯಲ್ಲಿ ಕಟ್ಟಿಸಿದರೂ ಸಂತೋಷ ಪಡುತ್ತಿದ್ದೆ. ನಾನು ವಾಸಮಾಡುತ್ತಿದ್ದುದು ಮಣ್ಣಿನ ಹೆಂಟೆಯಲ್ಲಿ ಕಟ್ಟಿದ ಮನೆಯಲ್ಲಾದರೂ, ನನ್ನೂರಲ್ಲಿ ಇಂತಿಷ್ಟು ಇಟ್ಟಿಗೆ ಮನೆಗಳಿವೆ ಎಂದು ಹೇಳಿಕೊಳ್ಳುವ ಹೆಮ್ಮೆ! ಇದಕ್ಕೆ ಏನನ್ನಬೇಕೊ ಗೊತ್ತಾಗುವುದಿಲ್ಲ.
ಹೀಗೆ ಹೆಮ್ಮೆಯ ತಾಣಗಳಿಗಾಗಿ ಹುಡುಕುತ್ತಿದ್ದ ನನಗೆ ನನ್ನೂರ ಬರಡುನೆಲ ಕಲಿಸಿದ ಪಾಠ ಅಸಾಧಾರಣವಾದದ್ದು. ಇಡೀ ಊರಿನಲ್ಲಿ ಇದ್ದದ್ದು ಒಂದೊ ಎರಡೊ ತೆಂಗಿನ ತೋಟ, ಹತ್ತಾರು ಜನರಿಗೆ ಮಾತ್ರ ನೀರಾವರಿ ಜಮೀನು, ಉಳಿದಂತೆ ಒಣನೆಲ, ಜಮೀನಿನ ದೃಷ್ಟಿಯಿಂದಂತೂ ಸಮೃದ್ಧಿಯನ್ನು ಹುಡುಕುವಂತಿಲ್ಲ, ಆದರೆ ಭಾವನೆಗಳಿಗೆ ಬರವಿಲ್ಲ. ಊರಿನ ಬಡಜನರಲ್ಲಿ ಬಡವನಾಗಿ ಬೆರೆಯುವ ‘ಭಾಗ್ಯ’ವನ್ನು ನನಗೆ ಕಲಿಸಿದ್ದು ನನ್ನೂರು – ಬರಗೂರು, ಇದು ಇವತ್ತಿಗೂ ನನ್ನ ಜೀವನದೃಷ್ಟಿಯ ಭಾಗವಾಗಿದೆ; ಚಿಂತನೆಗಳ ಚಿಲುಮೆಯಾಗಿದೆ.
ಆದರೆ ಚಿಕ್ಕಂದಿನಲ್ಲಿ ಬರಗೂರಿನ ಹೆಮ್ಮೆ ಎಂದು ಹೇಳಿಕೊಳ್ಳಲು ಏನಾದರೂ ಬೇಕೆಂಬ ಬಯಕೆ ಕಾಡಿಸುತ್ತಲೇ ಇತ್ತು. ಸುತ್ತಮುತ್ತ ಅವಶೇಷವಾಗಿ ಹಬ್ಬಿದ ಮುರುಕು ಕೋಟೆಯೂ ಗತಿಯಿಲ್ಲದ ಈ ಊರಿಗೆ ಇತಿಹಾಸವೇ ಇಲ್ಲವೆ ಎಂದು ಒಳಗೇ ವ್ಯಥೆಪಟ್ಟ ನಾನು ನನ್ನ ಸ್ನೇಹಿತರೊಂದಿಗೆ ಊರ ಪಕ್ಕದಲ್ಲಿರುವ ‘ಬೈರಾಗಿ ಮಠ’ದ ಬಳಿಗೆ ಹೋದೆ. ಅಲ್ಲೊಂದು ಹಳೇ ದೇವಾಲಯವಿದೆ; ನೆಲಮಾಳಿಗೆಯಿದೆ; ಹಿಂದೆ ಸೈನ್ಯದೊಂದಿಗೆ ಬಂದಿದ್ದ ಬ್ರಿಟಿಷ್ ವೈದ್ಯನೊಬ್ಬ ಮಡಿದದ್ದಕ್ಕೆ ಸಾಕ್ಷಿಯಾಗಿ ಆತನ ಸಮಾಧಿಯಿದೆ. ಸಮಾಧಿಯ ಮೇಲೆ ಆತನ ವಿವರವನ್ನು ಇಂಗ್ಲಿಷಿನಲ್ಲಿ ಕೆತ್ತಲಾಗಿದೆ. ಇಂಗ್ಲಿಷ್ ವೈದ್ಯನೊಬ್ಬ ಸತ್ತಸ್ಥಳವೆಂಬ ಹೆಮ್ಮೆಗಿಂತ ನಮಗಿನ್ನೇನು ಬೇಕು! ಸುತ್ತೇಳು ಹಳ್ಳಿಗಳಲ್ಲಿ ಎಲ್ಲೂ ಇಲ್ಲದ ಸಮಾಧಿ: ನೂರಾರು ಹಳ್ಳಿಗರ ಸಮಾಧಿಗಳ ಸಂಕಟಕ್ಕಿಂತ ಈ ಇಂಗ್ಲಿಷ್ ವ್ಯಕ್ತಿಯ ಸಮಾಧಿಯ ಸಂತೋಷ ನನ್ನಲ್ಲಿ ಅಂದು ಆವರಿಸಿದ್ದು ಎಂಥ ವೈರುಧ್ಯ ಎಂದು ಇವತ್ತು ಅನ್ನಿಸುತ್ತದೆ. ಆದರೆ ಇಂದು ಊರಿಗೆ ಹೋದರೂ ನನ್ನೊಂದಿಗೆ ಬಂದ ಸ್ನೇಹಿತರನ್ನು ಅಲ್ಲಿಗೆ ಕರೆದುಕೊಂಡು ಹೋಗದೆ ಇರುವುದಿಲ್ಲ ಎನ್ನುವುದು ಹೆಮ್ಮೆಯೊ, ಹಳ್ಳಿಗನೊಬ್ಬನ ಅನಿವಾರ್ಯವೊ ಅರ್ಥವಾಗುತ್ತಿಲ್ಲ.
ನಮ್ಮೂರ ಸುತ್ತಮುತ್ತ ಬೆಟ್ಟಗಳೂ ಇಲ್ಲ, ಕನ್ನಡ ಕವಿಗಳ ಕೆಲವು ಕವಿತೆಗಳಲ್ಲಿ ಬೆಟ್ಟ ಗುಡ್ಡಗಳ ವರ್ಣನೆ ಓದಿ, ಕೇಳಿ, ಕಂಗಾಲಾಗಿದ್ದ ನನ್ನ ‘ಕವಿ ಮನಸ್ಸು’ ಕಡೆಗೆ ನಮ್ಮೂರ ಕೆರೆಯ ಆಚೆ ಬದಿಯಲ್ಲಿದ್ದ ಅತ್ಯಂತ ಕಿರಿದಾದ ಕದಿರೇಹಳ್ಳಿ ಗುಡ್ಡವನ್ನೇ ಹಿಮಾಲಯವೆಂದು ಭಾವಿಸಿ (ಭ್ರಮಿಸಿ ?) ಹತ್ತಿದ್ದೂ ಹತ್ತಿದ್ದೇ; ಇಳಿದದ್ದೂ ಇಳಿದದ್ದೇ. ಬೋಳಾದ ಈ ಗುಡ್ಡದಲ್ಲಿ ಅಲ್ಲಲ್ಲೇ ಅಕಸ್ಮಾತ್ ಅಂಗಾತ ಬಿದ್ದಿದ್ದ ಕಲ್ಲಿನ ಗುಂಡುಗಳನ್ನು ಕೋಡುಗಲ್ಲುಗಳೆಂದೇ ಭಾವಿಸಿ ಮೇಲೆ ಹತ್ತಿ ಭೂಮಿ ಆಕಾಶಗಳನ್ನು ಒಮ್ಮೆ ದಿಟ್ಟಿಸಿ ಧನ್ಯತಾಭಾವ ಪಡೆದು, ನನ್ನೂರು ಏನು ಕಡಿಮೆ ಎಂದು ಉದ್ದೇಶಪೂರ್ವಕವಾಗಿ ಹಿಗ್ಗಿ ಹೀರೇಕಾಯಿಯಾಗಿದ್ದೆ. ಆಂಜನೇಯನ ದೇವಸ್ಥಾನದ ರಂಗುರಂಗಿನ ಗೋಪುರವನ್ನು ನೆಟ್ಟನೆ ನೋಡುತ್ತ ಇದೊಂದು ಪುಣ್ಯಕ್ಷೇತ್ರ ಎಂದೇ ಎದೆಯುಬ್ಬಿಸಿದ್ದೆ. ಈಶ್ವರ ದೇವಾಲಯದಲ್ಲಿ ದೊಡ್ಡದಾಗಿ ಮಲಗಿರುವ ಬಸವನ ವಿಗ್ರಹ ಮೈಸೂರು ಚಾಮುಂಡಿ ಬೆಟ್ಟದಲ್ಲಿರುವ ಬಸವನ ವಿಗ್ರಹಕ್ಕಿಂತ ದೊಡ್ಡದಾಗಿರಲಾರದಾದರೂ, ಚಿಕ್ಕದಂತೂ ಅಲ್ಲವೆಂದು ನನಗೆ ನಾನೇ ಲೆಕ್ಕಹಾಕಿಕೊಂಡು ಸಮಾಧಾನ ಪಟ್ಟಿದ್ದೆ. ಮುಂದೆ ಎಂ.ಎ. ಓದುವಾಗ ಡಾ. ಡಿ.ಎಲ್. ನರಸಿಂಹಾಚಾರ್ ಅವರ ‘ಗ್ರಂಥಸಂಪಾದನೆ’ ಪುಸ್ತಕದಲ್ಲಿ ಸಿರಾ ತಾಲ್ಲೂಕಿನ ಬರಗೂರಿನ ಈಶ್ವರ ದೇವಾಲಯದ ಕಂಭವೊಂದರಲ್ಲಿ ವಿಶಿಷ್ಟ ಶಾಸನವಿದೆಯೆಂಬ ಉಲ್ಲೇಖ ವನ್ನು ಓದಿ, ಇಡೀ ತರಗತಿಯವರಿಗೆ ಹೆಮ್ಮೆಯಿಂದ ಹೇಳಿಕೊಂಡೆ. ಊರಿಗೆ ಬಂದು ಶಾಸನ ವನ್ನು ನೋಡಿ ಒಂದು ಕ್ಷಣ ರೋಮಾಂಚಿತನಾದೆ.
ಈಗ ಅನ್ನಿಸುತ್ತಿದೆ: ಹಿಂದುಳಿದ ಪ್ರದೇಶದಲ್ಲಿ ಕಳೆದು ಹೋದ ಆತ್ಮವಿಶ್ವಾಸವನ್ನು ಕಂಡು ಕೊಳ್ಳುವ, ಕೀಳರಿಮೆಯನ್ನು ಮೀರುವ, ಪ್ರಕ್ರಿಯೆಯ ಭಾಗವಾಗಿ ಇಷ್ಟೆಲ್ಲ ಸಂಭವಿಸಿದೆ.
ನನಗೆ ಈಗಲೂ ಇಷ್ಟವಾದ ನೆನಪೆಂದರೆ – ನಮ್ಮ ಹೊಲದ ಬದುವಿನ ಮೇಲೆ ಬದುಕನ್ನು ಬರೆಯುವ ಕನಸುಗಣ್ಣಲ್ಲಿ ಕೂತದ್ದು. ನಮ್ಮ ಶಾಲೆಯಲ್ಲಿ ನಿಸರ್ಗವನ್ನು ಕುರಿತು ಅದೇನೇನೊ ಹೇಳುತ್ತಿರುವಾಗ, ಕುವೆಂಪು ಮುಂತಾದ ಕವಿಗಳ ಪ್ರಕೃತಿ ವರ್ಣನೆಯನ್ನು ವಿವರಿಸುವಾಗ ತನ್ಮಯನಾಗಿ ಕೇಳಿದರೂ ಹೊರಬಂದಮೇಲೆ ಕಾಣುತ್ತಿದ್ದ ಬರಡು ನೆಲದ ಮೇಲಿನ ಒಣಕಲು ಮರಗಿಡಗಳನ್ನು ನೋಡಿ ಮಂಕು ಕವಿಯುತ್ತಿದ್ದ ಕ್ಷಣಗಳು ಇಂದಿಗೂ ಕಾಡಿಸುತ್ತವೆ. ಹೊಲಕ್ಕೆ ಬಂದು ನೋಡಿದರೆ ಆ ಕವಿಗಳ ಪದ್ಯದಲ್ಲಿದ್ದ, ನಮ್ಮ ಅಧ್ಯಾಪಕರು ಹೇಳಿದ, ಯಾವುದೂ ಇಲ್ಲಿಲ್ಲ. ಹಾಗಾದರೆ ಯಾವುದು ಸತ್ಯ? ಕವಿಗಳ ನಿಸರ್ಗವರ್ಣನೆಯ ಸಮೃದ್ಧಿಯೂ ನನ್ನಂಥವರಲ್ಲಿ ಕೀಳರಿಮೆಯ ಭಾವನೆಯನ್ನು ಮೂಡಿಸಿತೆಂದರೆ, ಕಾವ್ಯಾನುಭವ ಮತ್ತು ಅಭಿವ್ಯಕ್ತಿವಿಧಾನವನ್ನು ಕುರಿತೇ ಪ್ರಶ್ನೆಗಳೇಳುತ್ತವೆ. ನಮ್ಮ ಅಧ್ಯಾಪಕರು ಪಾಠ ಮಾಡಿದ ನಿಸರ್ಗ ನನ್ನ ಸುತ್ತಮುತ್ತ ಇಲ್ಲವೇ ಇಲ್ಲ. ಮೋಡ ಮುತ್ತಿಕ್ಕಿದ ಬೆಟ್ಟಗುಡ್ಡಗಳಿಲ್ಲ. ಹಸಿರನ್ನೇ ಉಸಿರಾಡುವ ಸಸ್ಯರಾಶಿಯಿಲ್ಲ; ಜುಳುಜುಳು ಹರಿಯುವ ನದಿಗಳಿಲ್ಲ: ಕಾಲುವೆಗಳಿಲ್ಲ, ಹಾಗಾದರೆ ಯಾವುದು ವಾಸ್ತವ?
ಕೂಡಲೆ, ಹೊಲದಲ್ಲಿರುವ ಜಾಲಿಯ ಮರದ ಕಡೆಗೆ ನೋಡುತ್ತೇನೆ, ಹೊಲದ ಸುತ್ತ ಹಬ್ಬಿರುವ ಕತ್ತಾಳೆಯನ್ನು ಕಾಣುತ್ತೇನೆ. ದೂರದ ಕದಿರೇಹಳ್ಳಿ ಗುಡ್ಡದ ಬೋಳು ಮೈಯ್ಯನ್ನು ದಿಟ್ಟಿಸುತ್ತೇನೆ. ಇಲ್ಲ… ಇಲ್ಲ… ಇವು ಯಾವ ಕವಿತೆಯಲ್ಲೂ ಇಲ್ಲ. ಆಗ ಅನ್ನಿಸುತ್ತದೆ: ಜಾಲಿಯ ಮರವೇ ಯಾಕೆ ಹತ್ತಿರವಾಗಬಾರದು? ಸೀದಾ ಜಾಲಿಯ ಮರದ ಬಳಿಗೆ ಬರುತ್ತೇನೆ. ನೆಲದಲ್ಲಿ ಬಿದ್ದಿದ್ದ ಮುಳ್ಳುಗಳನ್ನು ಸರಿಸಿ ಕೂತುಕೊಳ್ಳುತ್ತೇನೆ. ಒಂದು ಕ್ಷಣ ಹಾಯೆಂದು ಅಭಿನಯಿಸುತ್ತೇನೆ; ಎಷ್ಟು ಚೆನ್ನಾಗಿದೆ ಎಂದು ನನಗೆ ನಾನೇ ಹೇಳಿಕೊಂಡು ಸಂಭ್ರಮಿಸತೊಡಗಿದಾಗ ಸುಂಟರಗಾಳಿ ಏಳುತ್ತದೆ; ಜಾಲಿಯ ಮುಳ್ಳುಗಳು ಮೈಮೇಲೆ ಬಿದ್ದಾವೆಂಬ ಭಯದಿಂದ ಎದ್ದು ಓಡಿ ಬದುವಿನ ಮೇಲೆ ಬರುತ್ತೇನೆ. ಮತ್ತೆ ಜಾಲಿಯ ಮರವನ್ನು ನೋಡಿ ನನ್ನನ್ನು ನಾನೇ ಬೈದುಕೊಳ್ಳುತ್ತೇನೆ; ಜಾಲಿಯಮರಕ್ಕೆ ನೀನೇ ನನ್ನ ಬಾಳ ಗೆಳೆಯ – ಎನ್ನುತ್ತೇನೆ.
ಕೂಡಲೇ ಕವಿತೆಗಳಲ್ಲಿ ಬರುವ ಜುಳು ಜುಳು ನದಿ ಮತ್ತು ಭೂಗೋಳ ಪಾಠದಲ್ಲಿ ಬರುವ ನೀರಾವರಿ ಯೋಜನೆಗಳ ನೆನಪು ಬರುತ್ತದೆ. ಮತ್ತದೇ ಜಾಲಿಯ ಮರದ ಸಂಕಟ. ಆದರೆ ಅಷ್ಟಕ್ಕೇ ಅನಾಥ ಸ್ಥಿತಿಗೆ ಇಳಿದರೆ ಹೇಗೆ? ಅಲ್ಲಿಂದ ಹೊಲದ ‘ಕೊರಕಲುಗಳ ಬಳಿಗೆ ಬರುತ್ತೇನೆ. ಅಲ್ಲಿ ಸಣ್ಣಪುಟ್ಟ ಗುಂಡಿಗಳಲ್ಲಿ ಮಳೆಯ ನೀರು ನಿಂತಿದೆ. ಒಂದೆರಡು ಕಡೆ ಸಣ್ಣದಾಗಿ ಒಂದು ಅಡಿ ಕೆಳಕ್ಕೆ ಬೀಳುತ್ತಿದೆ. ಅದೋ! ಬರಗೂರಿನ ಜೋಗ್ ಜಲಪಾತ! ಮತ್ತೇನೂ ನನ್ನ ಮನಸ್ಸಿನಲ್ಲಿ ಬರಲು ಸಾಧ್ಯವಿಲ್ಲ. ಹೋಗಿ ಕೂತು ಹಿಡಿತುಂಬದ ನೀರಿನಲ್ಲೂ ಆಟ ಆಡುತ್ತೇನೆ. ಸಣ್ಣ ಸಣ್ಣ ಕಾಲುವೆ ಮಾಡುತ್ತೇನೆ. ನಡುನಡುವೆ ಅಣೆಕಟ್ಟಿನ ಮಾದರಿಗಳನ್ನು ನಿರ್ಮಿಸಿ ಕನ್ನಂಬಾಡಿಗಿಂತ ಏನು ಕಡಿಮೆ ಎಂದು ಹಿಗ್ಗಲು ಯತ್ನಿಸುತ್ತೇನೆ. ಮುಂದೆ ಗದ್ದೆಯ ಮಾದರಿಗಳನ್ನು ನಿರ್ಮಿಸಿ ನೀರು ಹರಿಸಿ, ಆನಂದಿಸಿ, ಎದ್ದು ನಿಲ್ಲುತ್ತೇನೆ. ಸುತ್ತ ಹರಡಿಕೊಂಡಿರುವ ಒಣಹೊಲದ ವಾಸ್ತವ – ನೀರಾವರಿಯ ವ್ಯಂಗ್ಯವಾಗಿ ನಗುತ್ತದೆ. ಸೋತ ಕಾಲು ಹಾಕುತ್ತ ಮತ್ತೊಂದು ಬದಿಯಲ್ಲಿದ್ದ ಹೊಂಗೆ ಮರಗಳ ಬಳಿ ಬರುತ್ತೇನೆ. ಎಷ್ಟೋ ಹಾಯೆನಿಸುತ್ತದೆ. ಬದುವಿನ ಮೇಲೆ ಹಾಗೇ ಮಲಗುತ್ತೇನೆ. ಹೊಂಗೆ ಮರದ ತಂಗಾಳಿಯಲ್ಲಿ ತುಂಬಿ ಬರುವ ಕನಸುಗಳನ್ನು ಕಣ್ಣಿಗೆ ತುಂಬಿಕೊಳ್ಳುತ್ತ ಪಕ್ಕಕ್ಕೆ ನೋಡುತ್ತೇನೆ. ಇಪ್ಪತ್ತು ಅಡಿ ದೂರದಲ್ಲಿದ್ದ ಹುತ್ತದಲ್ಲಿ ಸರ್ಪವೊಂದು ಸೇರಿಕೊಳ್ಳುತ್ತಿದೆ! ಕಣ್ಣುಜ್ಜಿ ನೋಡುತ್ತೇನೆ; ದೊಡ್ಡ ನಾಗರಹಾವು! ಕನಸುಗಳಿಗಿದು ಕಾಲವಲ್ಲ ಎಂದು ದಡಬಡನೆ ಎದ್ದು ಇನ್ನೊಂದು ಬದುವಿಗೆ ಹೋಗುತ್ತೇನೆ. ‘ತಿರುಕನಕನಸು’ ಪದ್ಯವೊಂದೇ ನನ್ನ ನೆನಪಿನಲ್ಲಿ ಉಳಿಯುತ್ತದೆ.
ಹೀಗೆ ಎಷ್ಟೋ ನೆನಪುಗಳು. ಮತ್ತೆ ಒಂದೆರಡು ಸಂಗತಿಗಳು ಇವತ್ತಿಗೂ ಮುಖ್ಯವೆನ್ನಿಸುತ್ತವೆ. ನಮ್ಮ ಪಠ್ಯಗಳಲ್ಲಿ ಬರುವ ‘ಕರ್ನಾಟಕ ವೈಭವ’ದ ಪಟ್ಟಿಗೆ ನನ್ನೂರು ಎಲ್ಲೂ ಸೇರುತ್ತಿಲ್ಲವಲ್ಲ ಎಂಬ ವ್ಯಾಕುಲತೆಯನ್ನು ಮೂಡಿಸಿದ ಆಲೋಚನ ವಿಧಾನದ ಬಗ್ಗೆಯೇ ಆತಂಕವಾಗುತ್ತಿರುವಾಗ ಒಂದು ದಿನ ನಮ್ಮ ಶಾಲೆಯಲ್ಲಿ ಕಪ್ಪು ಹಲಗೆಯ ಮೇಲೆ ಎರಡು ಪ್ರಶ್ನೆಗಳನ್ನು ಬರೆದರು. ಸಿರಾ ಏತಕ್ಕೆ ಪ್ರಸಿದ್ಧಿ? ಬರಗೂರು ಏತಕ್ಕೆ ಪ್ರಸಿದ್ಧಿ? ನಾನು ಮತ್ತು ನನ್ನ ಸಹಪಾಠಿಗಳೆಲ್ಲ ತಲೆ ಕೆರೆದುಕೊಂಡೆವು. ಉತ್ತರ ಹೊಳೆಯಲಿಲ್ಲ. ಸಿರಾದಲ್ಲಿ ಒಂದು ಕೋಟೆಯಿದೆ. ಅದು ನಮ್ಮ ಇತಿಹಾಸದ ಭಾಗ; ಅದನ್ನೇ ಹೇಳಲೇ ಎಂದುಕೊಂಡು ‘ಸಿರಾ ಕೋಟೆಗೆ ಪ್ರಸಿದ್ಧಿ’ ಎಂದು ಹೇಳಿದಾಗ ನಮ್ಮ ಅಧ್ಯಾಪಕರು ‘ಅಯ್ಯೋ ದಡ್ಡ, ನಮ್ಮ ಜಿಲ್ಲೇಲಿ ಸಿರಾಕ್ಕಿಂತ ದೊಡ್ಡ ಕೋಟೆ ಮಧುಗಿರಿಲಿದೆ’ ಎಂದರು. ನನ್ನ ಉತ್ತರ ತಪ್ಪಾದರೂ ಮಧುಗಿರಿ ಕೋಟೆ ಬಗ್ಗೆ ಮಾಹಿತಿ ಸಿಕ್ಕಿದ್ದು ನನಗೆ ಹೆಮ್ಮೆ ಅನಿಸಿತು. ಎಷ್ಟಾದರೂ ತುಮಕೂರು ಜಿಲ್ಲೆಯಲ್ಲಿರುವ ಮಧುಗಿರಿ ಕೋಟೆಯಾದ್ದರಿಂದ ನನ್ನ ಜಿಲ್ಲೆಯ ಬಗ್ಗೆ ಅಭಿಮಾನವೆನ್ನಿಸಿತು. ಆನಂತರ ಉತ್ತರಕ್ಕಾಗಿ ಅಧ್ಯಾಪಕರನ್ನೇ ಒತ್ತಾಯಿಸಿದೆವು. ಅವರು ‘ಸಿರಾ ಬೀಡಿಗಳಿಗೆ ಪ್ರಸಿದ್ದಿ’ ಎಂದರು. ನಾನು ಕೂಡಲೇ ಉತ್ತರದ ಜಾಡು ಹಿಡಿದು ‘ಬರಗೂರು ಕಂಬಳಿಗೆ ಪ್ರಸಿದ್ಧಿ’ ಎಂದು ಬಿಟ್ಟೆ. ಅಧ್ಯಾಪಕರು ‘ಭೇಷ್’ ಎಂದರು. ಅವತ್ತಿನ ನನ್ನ ಸಂಭ್ರಮಕ್ಕೆ ಪದಗಳೇ ಇಲ್ಲ. ಬೆಲ್ ಹೊಡೆದ ಕೂಡಲೇ ಆರ್ಕಿಮಿಡೀಸ್‌ನಂತೆ ಹೊರಗೆ ಓಡಿ ಬಂದಿದ್ದೆ. ಬರಗೂರಿನಲ್ಲಿ ತಯಾರಾದ ಕಂಬಳಿಗಳನ್ನು ಮಲೆನಾಡಿಗೆ ಲಾರಿಗಟ್ಟಲೆ ಕೊಂಡೊಯ್ಯುತ್ತಿದ್ದ ಆರ್ಥಿಕ ಚಟುವಟಿಕೆ ನಮ್ಮ ತರಗತಿಯಲ್ಲಿ ದಾಖಲಾದದ್ದು, ಮುಂದೆ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲೂ ಕಾಣಿಸಿಕೊಂಡದ್ದು ಇಂದೂ ನನಗೆ ಮರೆಯಲಾಗದ ಸಂಗತಿ.
ನಮ್ಮೂರಿಗೆ ಆಗ ಈಗಿನಂತೆ ಬಸ್ಸುಗಳ ಸಂಖ್ಯೆ ಹೆಚ್ಚಾಗಿರಲಿಲ್ಲ. ದಿನಕ್ಕೆ ಮೂರು-ನಾಲ್ಕು ಬಸ್ಸುಗಳು ಓಡಾಟ ಪ್ರಾರಂಭಿಸಿದ್ದ ಕಾಲ. ಒಂದೇ ಒಂದು ಸರ್ಕಾರಿ ಬಸ್ಸು ಹಾದುಹೋಗುತ್ತಿತ್ತು. ಖಾಸಗಿ ಬಸ್ಸುಗಳೆಲ್ಲ ಒಬ್ಬರವೇ ಆಗಿದ್ದರಿಂದಲೋ, ಸರ್ಕಾರಿ ಬಸ್ಸಿನ ಕೆಂಪು ಆಕರ್ಷಣೆ ಕಾರಣವೊ ಒಟ್ಟಿನಲ್ಲಿ ನಾನು-ನನ್ನ ಗೆಳೆಯರಿಗೆ ಸರ್ಕಾರಿ ಬಸ್ಸನ್ನು ಕಂಡರೆ ಏನೋ ವ್ಯಾಮೋಹ. ಬಹುಶಃ ಸರ್ಕಾರಿ ಬಸ್ಸುಗಳು ಹಳ್ಳಿಗಳಿಗೆ ಬರುವುದು ತೀರಾ ಅಪರೂಪವಾದ ಸಂದರ್ಭದಲ್ಲಿ ನಮ್ಮೂರಿಗೆ ಒಂದಾದರೂ ಸರ್ಕಾರಿ ಬಸ್ಸು ಬರುತ್ತಿರುವುದು ಹೆಮ್ಮೆಯ ಸಂಗತಿ ಎನ್ನಿಸಿರಲಿಕ್ಕೂ ಸಾಧ್ಯ. ಆ ವಯಸ್ಸಿನಲ್ಲಿ ಇದೇ ನಿಜವಾದ ಕಾರಣವಿರಬಹುದು. ಬೆಳಗ್ಗೆ ಏಳುಗಂಟೆಗೆ ಸರ್ಕಾರಿ ಬಸ್ಸು ಸಿರಾ ಕಡೆಗೆ ಹೋಗಲು ಬರಗೂರನ್ನು ಪ್ರವೇಶಿಸುವ ಹಿಂದೆ ಮುಂದೆಯೇ ಖಾಸಗಿ ಬಸ್ಸೊಂದು ಹೊರಡುತ್ತಿತ್ತು. ಒಮ್ಮೊಮ್ಮೆ ಎರಡೂ ಬಸ್ಸುಗಳು ಬಸ್‌ಸ್ಟ್ಯಾಂಡಿಗೆ ಏಕಕಾಲಕ್ಕೆ ಬಂದು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ವಿಷಯದಲ್ಲಿ ಜಗಳವಾಗುತ್ತಿತ್ತು. ನಾವು ಈ ಜಗಳವನ್ನು ನಿರೀಕ್ಷಿಸಿ ಪ್ರತಿದಿನವೂ ಬೆಳಗ್ಗೆ ಬೇಗ ಎದ್ದು ದುಪ್ಪಟ್ಟಿ ಹೊದ್ದುಕೊಂಡು ಬಸ್‌ಸ್ಟ್ಯಾಂಡಿಗೆ ಬಂದು ಕೂತು, ಜಗಳದಲ್ಲಿ ಸರ್ಕಾರಿ ಬಸ್ಸಿನ ಡ್ರೈವರ್-ಕಂಡಕ್ಟರ್ ಮೇಲುಗೈ ಪಡೆದಾಗ ಒಳಗೇ ಸಂತೋಷಪಡುತ್ತಿದ್ದೆವು, ಜಗಳವಾಗದ ದಿನ ನಮಗೆ ನಿರಾಶೆಯೋ ನಿರಾಶೆ, ಜಗಳ ವಾಡದ ಮೇಲೆ ಈ ಸರ್ಕಾರಿ ಬಸ್ಸು ನಮ್ಮೂರಿಗೆ ಯಾಕೆ ಬರಬೇಕು ಎಂದು ಕೇಳಿಕೊಳ್ಳುತ್ತ, ಖಾಸಗಿಯವರ ಖಿಮ್ಮತ್ತನ್ನು ಸ್ವಲ್ಪವಾದರೂ ಕಡಿಮೆ ಮಾಡುತ್ತಿದ್ದಾರಲ್ಲ ಎಂದು ಸಮಾಧಾನಿಸುತ್ತ ಮಾರನೇದಿನದ ಬೆಳಗ್ಗೆಯ ‘ಬಿಸಿ ವಾತಾವರಣ’ಕ್ಕಾಗಿ ರಾತ್ರಿಯೆಲ್ಲ ಕನಸುತ್ತಿದ್ದೆವು! ಶಾಲೆಗೆ ಬಿಡುವಿದ್ದಾಗ ದನಕಾಯುವ, ಸಗಣಿ ಎತ್ತುವ ಹಳ್ಳಿ ಹುಡುಗರಾದ ನನ್ನಂಥವರಿಗೆ ಇನ್ನೊಂದು ಕನಸೂ ಇತ್ತು. ಹೆಚ್ಚು ಓದಿ ಉತ್ತಮ ಉದ್ಯೋಗ ಸಿಗುವ ಸಂಭವವನ್ನು ನಿರೀಕ್ಷಿಸಲಾಗದ ನಮಗೆ ಕಡೇಪಕ್ಷ ಸರ್ಕಾರಿ ಕೆಂಪು ಬಸ್ಸಿನ ಡ್ರೈವರ್ ಆಗುವ ಆಸೆ. ಆಸೆ ಕನಸಾಗಿ ರೂಪು ಪಡೆದಂತೆ ಆಗಾಗ್ಗೆ ಬಸ್ಸಿನ ಆಟ ಆಡಿ ವೇಗವಾಗಿ ಬಸ್ಸು ಓಡಿಸುವಂತೆ ನಾವೇ ಓಡಿ ಕಾಲು ನೋಯಿಸಿಕೊಂಡು ಕೂತುಕೊಂಡ ದಿನಗಳು ಇಂದು ನೆನಪಿಗೆ ಬರುತ್ತಿವೆ. ಅಂದು ‘ವೇಗ’ಕ್ಕೆ ಹಾತೊರೆದ ಮನಸ್ಸು ಇಂದಿನ ಬಸ್ಸುಗಳ ವೇಗವರ್ಧಕ ಅಪಘಾತಗಳನ್ನು ಗಮನಿಸಿ ಆತಂಕಿಸುತ್ತದೆ. ನನ್ನ ಹೆಮ್ಮೆಯ ಜಿಲ್ಲೆ ತುಮಕೂರಿಗೆ ತಲುಪಲು ಬೆಂಗಳೂರು ಬಸ್ಸು ಹತ್ತಿ ಹೊರಟಾಗ ದಾರಿಯಲ್ಲಿ ಕಾಣುವ ಜಜ್ಜಿಹೋದ ವಾಹನಗಳು ನಮ್ಮ ಬದುಕಿನ ಭದ್ರತೆಯನ್ನೇ ಅಣಕಿಸುತ್ತವೆ.
ಹಾಗಾದರೆ ಬದುಕು ಇಷ್ಟು ಬೇಗ ಬದಲಾಯಿತೆ? ನನ್ನ ಜಾಲಿಯಮರದಲ್ಲಿ ಕೋಗಿಲೆ ಕೂತುಕೊಳ್ಳುವ ಕಾಲ ಬಂತೆ? ಇಲ್ಲ. ಖಂಡಿತ ಅಂಥ ಕಾಲ ಬಂದಿಲ್ಲ. ಈಗಲೂ ನನ್ನೂರ ಜಾಲಿಯಮರದಲ್ಲಿ ಕಾಗೆಗಳೇ ಕೂತುಕೊಳ್ಳುತ್ತವೆ. ಕೋಗಿಲೆಯನ್ನು ಎಂದೂ ಕಾಣದೆ, ಕವಿತೆಗಳಲ್ಲಿ ಮಾತ್ರ ಕೇಳಿಸಿಕೊಂಡಿದ್ದ ನನಗೆ ಕಾಗೆ ಬೇರೊಂದು ಕಣ್ಣನ್ನು ಕೊಟ್ಟಿದೆ; ಕವಿಯನ್ನು ಉದಾರವಾಗಿಸಿದೆ. ನನಗೆ ಸ್ಪಷ್ಟವಾಗಿ ಅನ್ನಿಸುತ್ತಿದೆ; ನಾನು ಮಲೆನಾಡಿನ ಕುವೆಂಪು ಆಗಲಾರೆ; ಕರಾವಳಿಯ ಕಾರಂತರಾಗಲಾರೆ ಧಾರವಾಡದ ಬೇಂದ್ರೆಯಾಗಲಾರೆ. ಆಗಲಾರೆ ಎನ್ನುವುದಿರಲಿ ಹತ್ತಿರಕ್ಕೂ ಹೋಗಲಾರೆನೇನೊ ಎಂಬ ಆತಂಕವಾಗುತ್ತದೆ; ಮರುಕ್ಷಣದಲ್ಲೇ ಪ್ರಶ್ನೆಗಳು ಏಳುತ್ತವೆ. ನನ್ನೂರ ಗುಡ್ಡವಾಗಿ, ಕೊರಕಲಲ್ಲಿ ಹರಿಯುವ ಬೆರಳುಗಾತ್ರದ ನೀರಾಗಿ, ಜಾಲಿಯಮರವಾಗಿ, ಹೊಲದಲ್ಲಿ ಉಳಿದಿರುವ ಕೊಳೆಯಾಗಿ ಎಲ್ಲವೂ ಸೇರಿದ ಒಂದೇ ಪ್ರಶ್ನೆಯಾಗಿ ಕೇಳಿದಂತಾಗುತ್ತದೆ. ‘ನೀನು ಕುವೆಂಪು, ಕಾರಂತ, ಬೇಂದ್ರೆ, ಕೆ.ಎಸ್.ನ. ಹೀಗೆ ಇತರೆ ಏಕಾಗಬೇಕು?’
ಈ ಪ್ರಶ್ನೆಗೆ ಈಗ ಏನು ಉತ್ತರ ಹೇಳಲಿ? ಕತ್ತಾಳೆ ಗಿಡಗಳ ಬೇಲಿಯೊಳಗೆ ಜಾಲಿಯ ಮರ, ಮರದ ಮೇಲಿನ ಕಾಗೆ, ಕೊರಕಲ ನೀರು, ಹೆಬ್ಬಾವಿನ ಬದುವು, ಕೋವಿಕಣ್ಣಿನ ಹುತ್ತ – ಇತ್ಯಾದಿಗಳೆಲ್ಲವೂ ತುಂಬಿಕೊಂಡ ಕೂಳೆ ಹೊಲದಲ್ಲಿ – ಒಂದಾಗಿ ಸುಗ್ಗಿ ಕಾಣದೆ ಮಗ್ಗಿ – ಹೇಳುವ ಮನಸ್ಸನ್ನು ಬಿಟ್ಟು ಬೇಲಿಯಾಚೆಗಿನ ಭ್ರಮೆಗೆ ಹೋಗುವುದು ಹೇಗೆ ? ಊರೊಳಗಿನ ಮಣ್ಣಿನ ಮನೆಯಲ್ಲಿದ್ದರೂ ಕಾಡೊಳಗಿನ ಸೊಪ್ಪುಸೆದೆಗಳ ಸಣ್ಣ ಗುಡಿಸಲು ಬದುಕಿನ ಸಾಮಾಜಿಕ ಸ್ತರವನ್ನು ಅನುಭವಿಸುತ್ತ, ಕೀಳ್ಗಣ್ಣಿಗೆ ತುತ್ತಾಗುತ್ತ, ಕ್ಷಣಕ್ಷಣಕ್ಕೂ ಕಾಲದ ಜೊತೆ ಕಾಳಗವಾಡುತ್ತ, ಹೊಸಕಾಲಕ್ಕೆ ಹಾತೊರೆಯುವ ಮನಸ್ಥಿತಿಯನ್ನು ನನ್ನದಲ್ಲವೆಂದು ಹೇಳಿಕೊಳ್ಳುವುದಕ್ಕಾಗಿ ಕವಿತೆಯ ಕಾಲು ಹಿಡಿಯಲೆ ? ಕತೆಗೆ ಕೈಮುಗಿಯಲೆ ? ನನ್ನ ಮಣ್ಣಿನ ಮನೆ, ನೀರುಕಾಣದ ಕೂಳೆಹೊಲಗಳ ನನ್ನೂರಿಗೆ ಅನ್ಯಾಯ ಮಾಡಲೆ? ಸಾಧ್ಯವಿಲ್ಲ. ನನ್ನೊಂದಿಗೆ ನನ್ನೂರು ಇರಲೇ ಬೇಕು. ಇದರ ಮೂಲಕ ನನ್ನ ತಾಲ್ಲೂಕನ್ನ, ಜಿಲ್ಲೆಯನ್ನ, ರಾಜ್ಯ ದೇಶಾದಿಗಳನ್ನ ನೋಡಬೇಕು. (ಈಗ ನನಗೊಂದು ಸಂತೋಷ: ನನ್ನನ್ನು ರಾಮಚಂದ್ರಪ್ಪ ಎನ್ನುವುದಕ್ಕಿಂತ ’ಬರಗೂರ್’ ಎಂದೇ ಗುರುತಿಸುತ್ತಾರೆ.)
ಇನ್ನೊಂದು ಮಾತನ್ನೂ ನಾನಿಲ್ಲಿ ಹೇಳಬೇಕು. ನನ್ನ ಜಿಲ್ಲೆ ತುಮಕೂರು ಮತ್ತು ನನ್ನ ಊರು ಬರಗೂರು ಕುವೆಂಪು, ಕಾರಂತ, ಬೇಂದ್ರೆ, ಕೆ.ಎಸ್.ನ. – ಇತ್ಯಾದಿ ಹಿರಿಯ ಲೇಖಕರನ್ನೆಲ್ಲ ಗೌರವಿಸುತ್ತದೆ. ಈ ಗೌರವವನ್ನು ಇತರರ ಮೂಲಕವಲ್ಲದೆ ನನ್ನಂಥವರ ಮೂಲಕವೂ ಕೊಡಿಸುತ್ತದೆ. ಅಷ್ಟೇ ಅಲ್ಲ, ಇವರನ್ನು ಓದುತ್ತ ಹೋದದ್ದರಿಂದಲೇ ನನ್ನೂರಲ್ಲಿ ನನಗೆ ಒಂದಷ್ಟು ಗೌರವವೂ ಬಂದದ್ದುಂಟು. ಶಾಲೆಯಲ್ಲಿ ಕಲಿಯುತ್ತಿದ್ದಾಗ ಪಠ್ಯಪುಸ್ತಕಗಳಲ್ಲಿದ್ದ ಇವರ ಗದ್ಯ ಪದ್ಯಗಳನ್ನು ನಮ್ಮ ಮನೆಯ ಹೊರಗೆ, ಸೀಮೆ ಎಣ್ಣೆ ಲ್ಯಾಂಪಿನ ಬೆಳಕಲ್ಲಿ ಇಡೀ ಬೀದಿಗೇ ಕೇಳಿಸುವಂತೆ ಗಟ್ಟಿಯಾಗಿ ಓದುತ್ತಿದ್ದ ನನ್ನನ್ನು ಅದೇ ಕಾರಣಕ್ಕಾಗಿ ‘ಜ್ಞಾನಿ’ಯೆಂದು ಗೌರವಿಸುತ್ತಿದ್ದ ನೆನಪು ಇಂದು ಎದ್ದು ಎದುರಿಗೆ ನಿಲ್ಲುತ್ತಿದೆ. ಬೆಳಗ್ಗೆ ಎದ್ದು ಬೀದಿಯಲ್ಲಿ ಬೀಗುತ್ತ ಓಡಾಡುತ್ತಿದ್ದ ಎಳಸುತನವೂ ನೆನಪಾಗುತ್ತದೆ. ಪಠ್ಯ ವಾಚನದಿಂದ ‘ಪ್ರತಿಷ್ಠೆ’ಗಳಿಸಿಕೊಟ್ಟ ಈ ಹಿರಿಯ ಪ್ರತಿಭೆಗಳ ಪ್ರಕೃತಿಯಾಗಲಿ, ಕಡಲಾಗಲಿ, ನಿಗೂಢತೆಯಾಗಲಿ, ಚೆಲುವಾಗಲಿ ನನ್ನೂರಿನದಾಗಲು, ನನ್ನ ದಾಗಲು ಹೇಗೆ ಸಾಧ್ಯ? ನನ್ನೂರಲ್ಲಿ ಬಿರುಕು ಬಿಟ್ಟ ಕೆರೆಯೇ ಕಡಲು; ಕತ್ತಾಳೆಯೇ ತಾಳೆ; ಕಾಗೆಯೇ ಕೋಗಿಲೆ; ಕೊರಕಲಲ್ಲಿ ಹರಿಯುವ ಬೆರಳು ಗಾತ್ರದ ನೀರೇ ಜಲಪಾತ. ಹೀಗಿರುವ ನಾನು ನನ್ನೂರೇ ಆಗಬೇಕಲ್ಲವೆ?
ಈಗ ನನ್ನೂರಿನ ಕಡೆ ಹೊರಳಿ ನೋಡಿದಾಗ ಬರಗೂರಿನ ಬಾಹ್ಯವಂತೂ ಬದಲಾದಂತೆ ಕಾಣಿಸುತ್ತದೆ. ಇದರ ಪರಿಣಾಮ ಅಂತರಂಗದ ಮೇಲೂ ಆಗುತ್ತಿದೆ. ಮನುಷ್ಯರಿಗೆ ಮತ್ತು ದನಗಳಿಗೆ ಪ್ರತ್ಯೇಕ ಆಸ್ಪತ್ರೆಗಳು ನೆಲೆಯೂರುತ್ತಿವೆ; ಬೆಳೆಯುತ್ತಿವೆ. ಪ್ರೌಢಶಾಲೆಯಂತೂ ಬೃಹದಾಕಾರವಾಗಿ ಬೆಳೆಯುತ್ತ ಹುಡುಗರೊಂದಿಗೆ ನೂರಾರು ಹೆಣ್ಣುಮಕ್ಕಳು ವಿದ್ಯೆ ಕಲಿಯುತ್ತಿದ್ದಾರೆ. ತಾತ್ಕಾಲಿಕ ಸಿನಿಮಾ ಮಂದಿರವೊಂದು ಖಾಯಮ್ಮಾಗತೊಡಗಿದೆ. ಬ್ಯಾಂಕ್ ಮತ್ತು ಉಪ ಅಂಚೆಕಚೇರಿಗಳಿವೆ. ಬಸ್ಸುಗಳ ಸಂಖ್ಯೆ ಸಾಕಷ್ಟು ಬೆಳೆದು ಬಸ್ ಸ್ಟ್ಯಾಂಡ್ ಒಂದು ವ್ಯಾಪಾರ ಕೇಂದ್ರವಾಗುತ್ತಿದೆ. ಇಂಥ ಅಭಿವೃದ್ಧಿಯೊಂದಿಗೆ ಕುಡಿತಕ್ಕೇನೂ ಕಡಿಮೆಯಾಗಿಲ್ಲವೆಂಬುದನ್ನು ಸಾರುವಂತೆ ಸೇಂದಿ ಅಂಗಡಿಯೊಂದಿಗೆ ಬೀರು-ಬ್ರಾಂದಿಗಳ ಮಾರಾಟವೂ ಆಗುತ್ತಿದೆ. ಸಂಕ್ರಮಣ ಸ್ಥಿತಿಗೆ ಸಿಕ್ಕಿದ ಊರೊಂದರ ಸಂಭ್ರಮ ಮತ್ತು ಸಂಕಟಗಳು ನನ್ನೂರಲ್ಲಿ ಕಾಣಿಸುತ್ತಿವೆ. ಅಭಿವೃದ್ಧಿ, ಅನಾಹುತ, ಅಸಹಾಯಕತೆಗಳು ಒಟ್ಟಿಗೇ ಬೆಳೆಯುತ್ತ ಬದುಕಲ್ಲಿ ಬೇವು ಬೆರೆಸುತ್ತ ಬೆಲ್ಲವಾಗಬೇಕೆನ್ನುವ ವಿವೇಕವನ್ನು ಇನ್ನೂ ಉಳಿಸಿರುವುದೇ ಒಂದು ಸಂತೋಷ.
ಮುಂದೆ ಪ್ರೌಢಶಾಲೆಯ ವ್ಯಾಸಂಗಕ್ಕೆಂದು ನಮ್ಮ ತಾಲ್ಲೂಕು ಕೇಂದ್ರವಾದ ಸಿರಾಕ್ಕೆ ಬಂದಾಗ ಒಂದೆರಡು ದಿನಗಳಲ್ಲಿ ಊರಹೊರಗಿನ ಕೋಟೆಯ ಬಳಿ ಹೋಗಿ ಸಂಭ್ರಮಿಸಿದ್ದೆ. ಸುತ್ತ ಬಳಸಿದ್ದ ಹೊಂಡವನ್ನು ನೋಡಿ ಹಿಂದಿನ ಯುದ್ಧಗಳು ಕಾಡಿಸಿದ್ದವು. ಅರಮನೆ ಅಂತ ಕರೆಸಿಕೊಳ್ಳೋ ಈ ಕೋಟೆಯೊಳಗೆ ಅಡಗಿ ಕೂತ ಅರಸುಗಳದು ಎಂಥ ಬದುಕು ಎನ್ನಿಸಿತು. ಸದಾ ಯುದ್ಧ ಅಥವಾ ಒಳ ಜಗಳದ ಆಗರವಾಗಿದ್ದವೇ ಈ ಅರಮನೆಗಳು? ರಕ್ಷಣೆಗೆ ಇನ್ನೊಂದು ಹೆಸರಾಗಿದ್ದ ಈ ಕೋಟೆಗಳು ? ಹೀಗೆಲ್ಲ ಯೋಚಿಸುತ್ತ ನಿಟ್ಟುಸಿರು ಬಿಡುತ್ತಾ, ಮುಂದೆ ಮಧುಗಿರಿಯ ಕೋಟೆಯನ್ನು ನೋಡಿದಾಗ ತುಮಕೂರು ಜಿಲ್ಲೆಯ ಗತ ಇತಿಹಾಸದ ಬಗ್ಗೆ ಹೆಮ್ಮೆ ಎನ್ನಿಸಿತ್ತು. ನಮ್ಮ ಜಿಲ್ಲೆ ಬರಡು ಭೂಮಿಯಲ್ಲ ಎಂದು ಸಮಾಧಾನವಾಗಿತ್ತು. ಆದರೂ ಅರಮನೆಯ ಒಳಗಿದ್ದವರ ಬದುಕಿನ ಬಗ್ಗೆ ಏನೋ ಒಂದು ರೀತಿಯ ಕಳವಳ ಕಾಡಿಸಿತ್ತು.
ಸಿರಾದಲ್ಲಿ ಕೇವಲ ನಾಲ್ಕು ತಿಂಗಳಿದ್ದ ನಾನು ಆನಂತರ ತುಮಕೂರಿನ ಸರ್ಕಾರಿ ಪ್ರೌಢ ಶಾಲೆಗೆ ಸೇರಿದೆ; ಪ್ರೌಢಶಾಲೆಯ ನಂತರ ಸರ್ಕಾರಿ ಕಾಲೇಜು ಸೇರಿದೆ. ತುಮಕೂರು ಇಂದು ಸಾಕಷ್ಟು ಬದಲಾಗುತ್ತಿದೆ. ಅಂದಿನ ರಸ್ತೆಗಳಲ್ಲಿ ಇಂದು ಹೆಚ್ಚು ಜನರ ಓಡಾಟ; ಹೆಚ್ಚು ವಾಹನಗಳ ಆರ್ಭಟ, ಕಟ್ಟಡಗಳ ಹುಟ್ಟು ಹೆಚ್ಚುತ್ತಾ ತುಮಕೂರಿನ ಬಣ್ಣ ಬದಲಾಯಿಸುತ್ತಿರುವುದನ್ನು ಕಂಡಾಗ ಹಳೆಯ ನೆನಪುಗಳು ನುಗ್ಗಿ ಬರುತ್ತವೆ. ಅದೇ ಸರ್ಕಾರಿ ಆಸ್ಪತ್ರೆ, ಅದೇ ಪುರಸಭಾಭವನ, ಅದೇ ಸರ್ಕಾರಿ ಪ್ರೌಢಶಾಲಾ ಮೈದಾನ – ಎಲ್ಲ ಹಾಗೇ ಕಾಣಿಸುತ್ತಿದ್ದರೂ ಕಟ್ಟಡ ಮತ್ತು ರಸ್ತೆ ಎರಡು ವಿಭಾಗ ಮಾತ್ರ ಕಣ್ಣಿಗೆ ರಾಚುತ್ತವೆ. ರಸ್ತೆಗಳ ಪಕ್ಕದಲ್ಲಿ ಅದೆಷ್ಟು ಬಣ್ಣದ ಮನೆಗಳು! ರಸ್ತೆಯ ಮೇಲೆ ಅದೆಷ್ಟು ಬಣ್ಣದ ಬಟ್ಟೆಗಳು! ಮನೆಗಳು ಸ್ಥಾವರವಾದರೆ ಬಟ್ಟೆಗಳು ಜಂಗಮ!
ನಾನು ತುಮಕೂರು ಪ್ರವೇಶ ಮಾಡಿದ ದಿನಗಳಲ್ಲಿ ಬಟ್ಟೆಯ ಬಗ್ಗೆ ತಲೆಕೆಡಿಸಿಕೊಂಡ ಕ್ಷಣಗಳು ಇವತ್ತಿನ ರಸ್ತೆಯಲ್ಲಿ ದಿಗ್ಭ್ರಮೆಗೊಳ್ಳುತ್ತವೆ. ನನಗೆ ಸರಿಯಾದ ಒಂದೂ ಪ್ಯಾಂಟ್ ಇರಲಿಲ್ಲ. ಸಹಪಾಠಿಗಳ ಪ್ಯಾಂಟು ಬೂಟುಗಳನ್ನು ಕಂಡು ಕಂಗಾಲಾಗುತ್ತಿದ್ದ ನನ್ನ ಕನಸುಗಳಲ್ಲಿ ಪ್ಯಾಂಟಿಗೆ ಅಗ್ರಸ್ಥಾನ, ಕಡೆಗೆ ನನ್ನ ತಂದೆಯವರು ಹೊಸ ಪ್ಯಾಂಟ್ ಹೊಲೆಸಿಕೊಟ್ಟಾಗ ಸ್ವರ್ಗಕ್ಕೆ ಮೂರೇಗೇಣು! ಆದರೆ ಪ್ಯಾಂಟಿನ ಜೊತೆಗೆ ಬೂಟಿಲ್ಲದೆ ಸ್ವರ್ಗದ ಮೆಟ್ಟಿಲು ಮೆಟ್ಟುವುದು ಹೇಗೆ? ಬೂಟಿನ ವಿಷಯ ಒತ್ತಟ್ಟಿಗಿರಲಿ, ಪಿ.ಯು.ಸಿ. ಓದಿದ ಮೇಲೆಯೇ ನನ್ನ ಕಾಲಿಗೆ ಚಪ್ಪಲಿ ಬಂದದ್ದು. ಈ ವಿಷಯ ಪ್ರಸ್ತಾಪಿಸುವುದಕ್ಕೆ ಕಾರಣವಿದೆ. ಆಗ ಹಳ್ಳಿಯಿಂದ ಬಂದ ನನ್ನಂಥ ಹುಡುಗರಿಗೆ ಪ್ಯಾಂಟ್ ಎನ್ನುವುದು ಒಂದು ಹೊಸ ಆಕರ್ಷಣೆ. ಸ್ಥಿತ್ಯಂತರಗೊಳ್ಳುವ ಅಪೂರ್ವ ಸಂದರ್ಭದ ಸಂಕೇತ. ನಿಕ್ಕರ್ ಬಿಟ್ಟು ಪ್ಯಾಂಟಿಗೆ ಬಡ್ತಿ ಪಡೆಯುವಾಗಿನ ಅನುಭವ, ಮಾನಸಿಕ ವಿಕಾಸದ ಒಂದು ಹಂತ. ಒಂದು ಪ್ಯಾಂಟನ್ನೂ ಪಡೆಯಲು ಸಾಧ್ಯವಾಗದ ಅಸಂಖ್ಯಾತ ಜನರ ನಡುವೆ ನಮ್ಮ ಅನೇಕ ಅಧ್ಯಾಪಕರು ‘ಅಮೇರಿಕಾದಲ್ಲಿ ಕಸ ಗುಡಿಸೋನೂ ಪ್ಯಾಂಟ್ ಹಾಕಿರ್‍ತಾನೆ’ ಎಂದು ಹೇಳಿದಾಗ ಕಸಗುಡಿಸುವ ಅಮೇರಿಕದವನ ಸ್ಥಿತಿಗತಿಯೂ ನಮಗಿಲ್ಲವಲ್ಲ ಅನ್ನೋ ವ್ಯಥೆ; ವಿಷಾದ. ಮುಂದೆ ಗೊತ್ತಾಯಿತು. ಪ್ಯಾಂಟ್ ಎನ್ನುವುದು ಅಮೇರಿಕನ್ನರ ಸಹಜ ಉಡುಪು ಎಂದು. ಅವರಿಗೆ ಸಹಜವಾದದ್ದನ್ನು ನಮ್ಮ ಕನಸಿನ ನಿರೀಕ್ಷೆಯನ್ನಾಗಿಸಿದ ಸಂದರ್ಭದ ಬಗ್ಗೆಯೇ ಸಂಕಟವಾಗುತ್ತದೆ.
ಇಂದು ನನಗೆ ಪ್ಯಾಂಟು ಮತ್ತು ಬೂಟುಗಳಿಗೆ ಬರವಿಲ್ಲ. ತುಮಕೂರಿನ ರಸ್ತೆಗಳಲ್ಲೂ ಪ್ಯಾಂಟು-ಬೂಟುಗಳ ಸಮೃದ್ಧಿ ಕಾಣಿಸುತ್ತದೆ. ಬಣ್ಣ ಬಣ್ಣದ ಬಟ್ಟೆಗಳು ಅಲೆಯಾಗಿ ಹರಿಯುತ್ತಿರುವಂತೆ ಭಾಸವಾಗುತ್ತದೆ. ಆದರೆ ಈಗಲೂ ನನ್ನ ಕಣ್ಣುಗಳು, ಪ್ಯಾಂಟಿಲ್ಲದ ಕಾಲುಗಳನ್ನು ಬೂಟಿಲ್ಲದ ಪಾದಗಳನ್ನು ಹುಡುಕುತ್ತವೆ. ಬರಿಗಾಲ ಬಂಧುಗಳು ಅಪರೂಪಕ್ಕೆ ಕಂಡರೂ ನಮ್ಮ ಸಮಾಜದ ಅಸಮತೋಲನಕ್ಕೆ ಸಾಕ್ಷಿಯಾಗಿ ಕಳವಳವುಂಟುಮಾಡುತ್ತದೆ. ತುಮಕೂರು ಕಾಲೇಜುಗಳಿಗೆ ಇಂದು ಬರುವವರು ಬರಿಗಾಲ ಬರಗೂರಿನ ಸಂಕೇತಗಳಲ್ಲ ಎನ್ನುವುದು ಸಮಾಧಾನದ ಬೆಳವಣಿಗೆ.
ಓದುವುದಕ್ಕೆಂದು ನಾನು ತುಮಕೂರಿಗೆ ಬಂದಾಗ ಕೆಲವು ಪ್ರಾಚೀನ ಕವಿಗಳು ತುಮಕೂರು ಜಿಲ್ಲೆಗೆ ಸೇರಿದವರೆಂದು ತಿಳಿದು ಹೆಮ್ಮೆಯೆನಿಸಿತು. ಗುಬ್ಬಿವೀರಣ್ಣ, ತೀ.ನಂ.ಶ್ರೀ ಮುಂತಾದವರು ಈ ಜಿಲ್ಲೆಯವರೆಂದು ಗೊತ್ತಾದಾಗ ರೋಮಾಂಚನವೇ ಆಯಿತು. ಗುಬ್ಬಿವೀರಣ್ಣನವರ ನಾಟಕದ ಕಂಪನಿಯವರು ತುಮಕೂರಿನಲ್ಲಿ ಬೀಡು ಬಿಟ್ಟಾಗ ಪ್ರತಿ ನಾಟಕವನ್ನು ಮೊದಲ ದಿನವೇ ನೋಡಿ ಸಂಭ್ರಮಿಸಿದ್ದೆ. ಆಗ ಗುಬ್ಬಿವೀರಣ್ಣನವರು ಅಪರೂಪಕ್ಕೆ ರಂಗದ ಮೇಲೆ ಬರುತ್ತಿದ್ದರು. ಅವರ ಮಗ ಶಿವರಾಜ್ ಅದೇ ತಾನೆ ಮಿಂಚಲು ಪ್ರಾರಂಭಿಸಿದ್ದರು. ರಂಗದ ಮೇಲೆ ಆನೆಯನ್ನೇ ಕರೆತರುತ್ತಿದ್ದ ದೃಶ್ಯವಲ್ಲದೆ, ಹುತ್ತದ ಮೇಲೆ ಹಸು ಹಾಲು ಕರೆಯುವ ದೃಶ್ಯವನ್ನು ರಂಗದ ಮೇಲೆ ಸಹಜವಾಗಿ ತೋರಿಸುತ್ತಿದ್ದುದು ಕುತೂಹಲ ಮೂಡಿಸಿತ್ತು. ರಂಗದ ಮೇಲೆ ಜಲಪಾತದ ದೃಶ್ಯಕಂಡು ದಿಗ್ಮೂಢನಾಗಿದ್ದೆ.
ತುಮಕೂರಲ್ಲಿ ಕಾಲೇಜು ವಿದ್ಯಾಭ್ಯಾಸ ಮಾಡುವ ವೇಳೆಗೆ ನನ್ನಲ್ಲಿ ಒಂದು ರೀತಿಯ ಆತ್ಮವಿಶ್ವಾಸ ಮೂಡತೊಡಗಿತ್ತು. ನಮ್ಮ ತುಮಕೂರು ಜಿಲ್ಲೆಗೂ ಒಂದು ಇತಿಹಾಸವಿದೆಯೆಂಬ ಅರಿವಿನಿಂದ ಆನಂದವಾಗಿತ್ತು. ಕೈದಾಳದ ಕಲೆ, ಗೂಳೂರಿನ ಗಣೇಶ, ದೇವರಾಯನದುರ್ಗದ ದೊಣೆಗಳು ಹೇಳುವ ಐತಿಹ್ಯ, ನಾಮದ ಚಿಲುಮೆಯ ಮಹತ್ವ, ಸಿದ್ಧರಬೆಟ್ಟದ ಸೆಳೆತ, ಸೀಬಿಯ ದೇವಸ್ಥಾನದಲ್ಲಿರುವ ಚಿತ್ರಕಲೆ, ಸ್ಟಡ್‌ಫಾರಂ ಜೊತೆಗೆ ಐತಿಹ್ಯವೇ ಆಗಿರುವ ಕುಣಿಗಲ್‌ಕೆರೆ, ಮೊದಲೇ ತಿಳಿಸಿದ ಸಿರಾ ಮತ್ತು ಮಧುಗಿರಿ ಕೋಟೆಗಳ ಸಾಲಿಗೆ ಸೇರಿದ ಮಿಡಿಗೇಶಿ ಮತ್ತು ಪಾವಗಡದ ಕೋಟೆಗಳು, ಕೊರಟಗೆರೆ ತಾಲ್ಲೂಕಿನ ಜಾತ್ರೆ, ಸಿದ್ಧಗಂಗೆಯ ಪ್ರಸಿದ್ಧಿ – ಹೀಗೆ ಹತ್ತಾರು ಅಂಶಗಳು ಸೇರಿ, ತುಮಕೂರಿಗೆ ಕರ್ನಾಟಕದ ಭೂಪಟದಲ್ಲಿ ಗಮನಾರ್ಹ ಸ್ಥಾನವಿದೆ ಯೆಂದು ಮನವರಿಕೆಯಾದಾಗ ಕೀಳರಿಮೆಯೂ ಕರಗತೊಡಗಿದ್ದು ಎಂಥ ವೈಚಿತ್ರ್ಯ!
ಭೂತವನ್ನು ಕಟ್ಟಿಕೊಳ್ಳಬಯಸುವ ಕೀಳರಿಮೆಯ ಮನಸ್ಸನ್ನು ರೂಪಿಸಿದ್ದು ನಮ್ಮ ಪ್ರಧಾನ ಸಂಸ್ಕೃತಿಯ ಚಿಂತನೆ ಎಂದು ಈಗ ಅರ್ಥವಾಗುತ್ತಿದೆ. ಭೂತದಲ್ಲಿ ಹೂತು ಹೋಗುವ ಮನಸ್ಸುಗಳು ವರ್ತಮಾನ ಮತ್ತು ಭವಿಷ್ಯದ ಒತ್ತಾಸೆಯಾಗುವ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಗತವೈಭವದ ಮಂತ್ರ ಪಠಣದಲ್ಲಿ ಮಗ್ನವಾಗುತ್ತವೆ. ಇಂಥ ಮನಸ್ಥಿತಿಯಿಂದ ಸ್ಥಿತ್ಯಂತರಗೊಳ್ಳಲು ನನ್ನೂರ ಅನುಭವವೇ ಒತ್ತಾಸೆಯಾಯಿತು. ಗತ ವೈಭವದ ಮೆಲುಕುವಿಕೆಯಲ್ಲಿ ಮೈಮರೆಯದಂತೆ ನನ್ನೂರಿನ ಕಾಗೆ ಕೂಗುತ್ತದೆ; ಕೂಳೆ ಹೊಲ ಕಾಲಿಗೆ ಚುಚ್ಚುತ್ತದೆ; ಜಾಲಿಯ ಮರ ಜೀವನ ದರ್ಶನವಾಗುತ್ತದೆ.
ಹೀಗೆ ನನ್ನೂರು ಮತ್ತು ನನ್ನ ಜಿಲ್ಲೆ ವಿಶಿಷ್ಟ ಅನುಭವ ಮತ್ತು ಅರಿವನ್ನು ತಂದುಕೊಟ್ಟಿವೆ. ಎಲ್ಲ ಜಿಲ್ಲೆಗಳಂತೆ ನನ್ನ ಜಿಲ್ಲೆಯೂ ಸಮಕಾಲೀನ ಸಂದರ್ಭದ ಸಂಕಟಗಳಲ್ಲಿ ಹಾದು ಹೋಗುತ್ತಿದೆ. ಕಾರ್ಖಾನೆಗಳು ಕೈ ಬೀಸುತ್ತಿರುವಾಗ ನಗರ ಸಂಸ್ಕೃತಿ ವ್ಯಾಪಿಸತೊಡಗುತ್ತಿದೆ. ಎಲ್ಲ ರೀತಿಯ ವಿದ್ಯಾಸಂಸ್ಥೆಗಳು ಬೆಳೆಯುತ್ತಿವೆ. ಸಾಹಿತ್ಯ-ಸಾಂಸ್ಕೃತಿಕ ಚಟುವಟಿಕೆಗಳೂ, ಹೆಚ್ಚಾಗುತ್ತಿವೆ; ಹಿಂದೆ ಒಂದೆರಡು ಮಾತ್ರವಿದ್ದ ಪತ್ರಿಕೆಗಳು ಇಂದು ಹತ್ತಾರಾಗಿ ಜಿಲ್ಲೆಯಾದ್ಯಂತ ಹೊಸ ವಾತಾವರಣಕ್ಕಾಗಿ ಶ್ರಮಿಸುತ್ತಿವೆ. ಈ ಮಧ್ಯೆ ನಮ್ಮ ಜಿಲ್ಲೆ ಅನೇಕ ಹಿರಿಯರನ್ನು ಕಳೆದುಕೊಂಡಿದೆ; ಕಿರಿಯರನ್ನು ಬೆಳಕಲ್ಲಿ ನಿಲ್ಲಿಸಿದೆ. ಹೊಸ ಬೆಳಕಿಗಾಗಿ ಹಾತೊರೆಯುವ ಹೊಸ ಹೋರಾಟಗಳನ್ನೂ ಒಳಗೊಳ್ಳುತ್ತಿದೆ.
ಒಟ್ಟಿನಲ್ಲಿ ನಮ್ಮ ಜಿಲ್ಲೆ ಜಡವಾಗಿಲ್ಲ: ಅದೇ ಸಂತೋಷ.
*****
೧೯೯೪